ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದ ಮೇಲೆ ಹೆಚ್ಚು ಗಮನ ಹರಿಸಿರುವ ಕಾಂಗ್ರೇಸ್

ಬೆಂಗಳೂರು,ಮಾ.20- ಕಳೆದ ಎರಡು ಅವಧಿಗಳಿಂದಲೂ ಬೆಂಗಳೂರು ವ್ಯಾಪ್ತಿಯ ಲೋಕಸಭಾ ಕ್ಷೇತ್ರದಲ್ಲಿ ನೆಲೆ ಕಳೆದುಕೊಂಡಿರುವ ಕಾಂಗ್ರೆಸ್ ಶತಾಗತಾಯ ಒಂದು ಕ್ಷೇತ್ರದಲ್ಲಾದರೂ ಗೆಲ್ಲಲೇಬೇಕೆಂಬ ಹಠಕ್ಕೆ ಬಿದಿದ್ದು. ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದ ಮೇಲೆ ಹೆಚ್ಚು ಗಮನ ಕೇಂದ್ರೀಕರಿಸಿದೆ.

ಬೆಂಗಳೂರು ಉತ್ತರ ಕ್ಷೇತ್ರವನ್ನು ಜೆಡಿಎಸ್‍ಗೆ ಬಿಟ್ಟುಕೊಟ್ಟಿರುವ ಕಾಂಗ್ರೆಸ್ ಬೆಂಗಳೂರು ದಕ್ಷಿಣ ಕ್ಷೇತ್ರದಲ್ಲಿ ಅಭ್ಯರ್ಥಿಗಳ ಕೊರತೆಯನ್ನು ಎದುರಿಸುತ್ತಿದೆ. ಬಾಕಿ ಇರುವ ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರಕ್ಕೆ ಒಂದು ಡಜನ್‍ಗಿಂತಲೂ ಹೆಚ್ಚು ನಾಯಕರು ಆಕಾಂಕ್ಷಿಗಳಾಗಿದ್ದಾರೆ. ವಿಧಾನಪರಿಷತ್ ಹಾಲಿ ಸದಸ್ಯ ರಿಜ್‍ವಾನ್ ಅರ್ಷದ್, ಶಿವಾಜಿನಗರ ಕ್ಷೇತ್ರದ ಶಾಸಕ ರೋಷನ್ ಬೇಗ್, ಮಾಜಿ ಸಂಸದ ಎಚ್.ಟಿ.ಸಾಂಗ್ಲಿಯಾನಾ, ಎಐಸಿಸಿ ಪ್ರಧಾನ ಕಾರ್ಯದಶಿ ಬಿ.ಕೆ.ಹರಿಪ್ರಸಾದ್ ಸೇರಿದಂತೆ ಹಲವಾರು ಮಂದಿ ಆಕಾಂಕ್ಷಿಗಳಾಗಿದ್ದಾರೆ.

ಈ ಕ್ಷಣದ ಬೆಳವಣಿಗೆಯಲ್ಲಿ ಹೈಕಮಾಂಡ್ ಕಳೆದ ಬಾರಿ ಸ್ಪರ್ಧಿಸಿ ಸೋಲು ಕಂಡಿದ್ದ ರಿಜ್‍ವಾನ್ ಅರ್ಷದ್ ಅವರನ್ನು ಕಣಕ್ಕಿಳಿಸಲು ಆಸಕ್ತಿ ತೋರಿಸಿದೆ.

ಬಿಜೆಪಿಯಿಂದ ಸಂಸದ ಮೋಹನ್ ಅವರು, ಈ ಬಾರಿ ಕಣಕ್ಕಿಳಿಯುತ್ತಿದ್ದು ಅವರನ್ನು ಸೋಲಿಸಲು ಕಾಂಗ್ರೆಸ್ ನಾಯಕರುಗಳು ಪ್ರಬಲ ಹುರಿಯಾಳನ್ನು ಕಣಕ್ಕಿಳಿಸುವ ತಯಾರಿಯಲ್ಲಿದ್ದಾರೆ.

ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದಲ್ಲಿರುವ ವಿಧಾನಸಭಾ ಕ್ಷೇತ್ರ ಪೈಕಿ ಕಾಂಗ್ರೆಸ್‍ನಿಂದ ಸರ್ವಜ್ಞ ನಗರದಿಂದ ಕೆ.ಜೆ.ಜಾರ್ಜ್, ಶಿವಾಜಿನಗರದಲ್ಲಿ ಆರ್.ರೋಷನ್ ಬೇಗ್, ಶಾಂತಿನಗರದಲ್ಲಿ ಎನ್.ಎ.ಹ್ಯಾರಿಸ್, ಗಾಂಧಿನಗರದಲ್ಲಿ ದಿನೇಶ್ ಗುಂಡೂರಾವ್, ಚಾಮರಾಜಪೇಟೆಯಲ್ಲಿ ಜಮೀರ್ ಅಹಮ್ಮದ್ ಖಾನ್ ಶಾಸಕರಿದ್ದಾರೆ.

ಅವರಲ್ಲಿ ಜಾರ್ಜ್ ಮತ್ತು ಜಮೀರ್ ಸಚಿವರಿದ್ದಾರೆ. ಬಿಜೆಪಿಯಿಂದ ಸಿ.ವಿರಾಮನ್ ನಗರದಲ್ಲಿ ಎಸ್.ರಘು, ರಾಜಾಜಿನಗರದಲ್ಲಿ ಸುರೇಶ್ ಕುಮಾರ್, ಮಹದೇವಪುರದಲ್ಲಿ ಅರವಿಂದ್ ಲಿಂಬಾವಳಿ ಶಾಸಕರಾಗಿದ್ದಾರೆ.

5ಮಂದಿ ಶಾಸಕರಿರುವುದರಿಂದ ಈ ಬಾರಿ ಶತಾಯಗತಾಯ ಕಾಂಗ್ರೆಸ್ ಅಭ್ಯರ್ಥಿಯನ್ನು ಗೆಲ್ಲಿಸಿ ಕೊಳ್ಳಲೆಬೇಕು.ಕಳೆದ ಎರಡು ಬಾರಿ ಕೈ ತಪ್ಪಿ ಹೋಗಿರುವ ಕ್ಷೇತ್ರವನ್ನು ಮರಳಿ ಪಡೆಯಬೇಕೆಂದು ಕೈ ಪಡೆ ಹಠಕ್ಕೆ ಬಿದಿದ್ದೆ.

ಟಿಕೆಟ್ ಹಂಚಿಕೆಯಲ್ಲಿ ಸಾಕಷ್ಟು ಅಸಮಾಧಾನಗಳು ಕೇಳಿ ಬರುತ್ತಿದೆ. ರಿಜ್ವಾನ್ ಅರ್ಷದ್ ವಿಧಾನಪರಿಷತ್ ಹಾಲಿ ಸದಸ್ಯರಾಗಿರುವುದರಿಂದ ಅವರ ಬದಲಾಗಿ ಬೇರೆಯವರಿಗೆ ಅವಕಾಶ ನೀಡಬೇಕೆಂದು ಒತ್ತಾಯಗಳು ಪಕ್ಷದಲ್ಲಿ ಕೇಳಿ ಬರುತ್ತಿದೆ.

ರಾಜ್ಯದಲ್ಲಿ ಅಲ್ಪಸಂಖ್ಯಾತ ಸಮುದಾಯ ಕ್ರಿಶ್ಚಿಯನ್ ಜನಾಂಗಕ್ಕೆ ಎಲ್ಲಿಯೂ ಟಿಕೆಟ್ ಕೊಡದೆ ಇರುವುದರಿಂದ ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದಲ್ಲಿ ಎಚ್.ಟಿ.ಸಾಂಗ್ಲಿಯಾನಾ, ಅಲೆಕ್ಜಾಂಡರ್ ಅವರಿಗೆ ಅವಕಾಶ ನೀಡಬೇಕು ಎಂದು ಒತ್ತಡ ಹೇರಲಾಗುತ್ತಿದೆ.

ಇನ್ನೊಂದೆಡೆ ಸಚಿವ ಸ್ಥಾನ ಸಿಗದೆ ಅಸಮಾಧಾನಗೊಂಢಿರುವ ಶಾಸಕ ಆರ್.ರೋಷನ್ ಬೇಗ್ ಅವರು ರಾಷ್ಟ್ರ ರಾಜಕಾರಣದತ್ತ ಮುಖಮಾಡಿದ್ದು, ಲೋಕಸಭೆಯಲ್ಲಿ ಬೆಂಗಳೂರು ಕೇಂದ್ರದಿಂದ ತಮಗೆ ಶಿವಾಜಿನಗರ ಕ್ಷೇತ್ರದಿಂದ ತಮ್ಮ ಪುತ್ರನಿಗೆ ಟಿಕೆಟ್ ನೀಡಬೇಕೆಂದು ಲಾಭಿ ನಡೆಸಿದ್ದಾರೆ.

ಇದಲ್ಲದೆ ಇತರ ಮುಖಂಡರಾದ ಎಸ್.ಎಸ್.ಪ್ರಕಾಶಂ, ಮನೋಹರ ಮತ್ತಿತರರು ಕೂಡ ಟಿಕೆಟ್ ಆಕಾಂಕ್ಷಿಗಳಾಗಿದ್ದಾರೆ. ಟಿಕೆಟ್ ಹಂಚಿಕೆಯಲ್ಲಿ ಯಾವುದೇ ಗೊಂದಲ ಉಂಟಾಗದೆ ಒಮ್ಮತದ ಅಭ್ಯರ್ಥಿಯ ಆಯ್ಕೆಯಾಗಿ ಎಲ್ಲರೂ ಒಟ್ಟಾಗಿ ಕೆಲಸ ಮಾಡಿದರೆ ಮಾತ್ರ ಬಿಜೆಪಿಗೆ ಪ್ರಬಲ ಸ್ಪರ್ಧೆ ನೀಡಲು ಸಾಧ್ಯವಿದೆ.ಆದರೂ ಪ್ರಸ್ತುತ ಸನ್ನಿವೇಶಗಳು ಕಾಂಗ್ರೆಸ್‍ಗೆ ಅಷ್ಟು ಸರಳವಾಗಿಲ್ಲ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ