ಬೆಂಗಳೂರು, ಮಾ.18- ಸುದ್ದಿಗಾರರೊಂದಿಗೆ ಮಾತನಾಡಿದ ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಅವರು,ಇಂದಿರಾ ಕ್ಯಾಂಟೀನ್ ಕಾಂಗ್ರೆಸ್ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆ. ಕ್ಯಾಂಟೀನ್ನಲ್ಲಿ ನಾನೂ ಕೂಡ 2-3 ಬಾರಿ ಊಟ ಮಾಡಿದ್ದೇನೆ. ಪ್ರತಿ ಬಾರಿಯೂ ಗುಣಮಟ್ಟ ಮತ್ತು ಸ್ವಚ್ಛತೆಗೆ ಒತ್ತುಕೊಡುವಂತೆ ಸೂಚನೆ ನೀಡಿದ್ದೇನೆ ಎಂದರು.
ಈಗ ಕ್ಯಾಂಟೀನ್ನಲ್ಲಿನ ಆಹಾರದ ಬಗ್ಗೆ ಸಂಶಯಗಳು ವ್ಯಕ್ತವಾಗಿವೆ. ಅದನ್ನು ತನಿಖೆ ನಡೆಸುವಂತೆ ನಿನ್ನೆ ಬಿಬಿಎಂಪಿ ಆಯುಕ್ತರಿಗೆ ಸೂಚನೆ ನೀಡಿದ್ದೇನೆ.
ಬೆಂಗಳೂರಿನ 198 ವಾರ್ಡ್ಗಳಲ್ಲಿರುವ ಇಂದಿರಾ ಕ್ಯಾಂಟೀನ್ಗಳ ಆಹಾರ ಗುಣಮಟ್ಟದ ಬಗ್ಗೆ ತನಿಖೆ ನಡೆಸಲು ಸೂಚಿಸಲಾಗಿದು ಎಂದು ತಿಳಿಸಿದರು.
ಯಾವ ಕ್ಯಾಂಟೀನ್ನಲ್ಲಿ ಸಮಸ್ಯೆಯಾಗಿದೆ ಎಂಬುದನ್ನು ಪರಿಶೀಲನೆ ಮಾಡಲಾಗುವುದು. ತಪ್ಪಿತಸ್ಥ ಗುತ್ತಿಗೆದಾರರ ವಿರುದ್ಧ ಕಠಿಣ ಕ್ರಮ ಜರುಗಿಸಲಾಗುತ್ತದೆ.
ಉಳಿದ ಗುತ್ತಿಗೆದಾರರಿಗೂ ಸೂಕ್ತ ತಿಳುವಳಿಕೆ ನೀಡಲಾಗುವುದು. ಎಲ್ಲಿ ಏನು ನಡೆದಿದೆ ಎಂಬುದು ಸ್ಪಷ್ಟವಾಗಿ ತಿಳಿದು ಬಂದಿಲ್ಲ. ಅನಗತ್ಯವಾಗಿ ಆತಂಕದ ವಾತಾವರಣ ನಿರ್ಮಾಣ ಮಾಡಬಾರದು. ಒಂದು ವೇಳೆ ತಪ್ಪು ನಡೆದಿದ್ದರೆ ಅದನ್ನು ಸರಿಪಡಿಸಲಾಗುವುದ ಎಂದು ಅವರು ಹೇಳಿದರು.
ಬಿಡಿಎ ಆಯುಕ್ತರಿಗೆ ಮೂರ್ನಾಲ್ಕು ಇಲಾಖೆಗಳ ಜವಾಬ್ದಾರಿ ಇದೆ. ಹೀಗಾಗಿ ಕೆಲಸಗಳು ತುರ್ತಾಗಿ ನಡೆಯುತ್ತಿಲ್ಲ ಎಂಬ ದೂರುಗಳು ನನ್ನ ಬಳಿಯೂ ಬಂದಿವೆ.
ಸದ್ಯಕ್ಕೆ ಚುನಾವಣೆ ನಡೆಯುತ್ತಿದ್ದು, ಈ ಸಂದರ್ಭದಲ್ಲಿ ಏನೂ ಮಾಡಲು ಆಗುತ್ತಿಲ್ಲ. ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ಜತೆ ಚರ್ಚೆ ಮಾಡಿ ಸಮಸ್ಯೆ ಬಗೆಹರಿಸಲಾಗುತ್ತದೆ ಎಂದರು.
ಆಡಳಿತ ಮತ್ತು ಸಿಬ್ಬಂದಿ ಇಲಾಖೆ ಮುಖ್ಯಮಂತ್ರಿ ಬಳಿ ಇದೆ. ಅಧಿಕಾರಿಗಳ ವರ್ಗಾವಣೆ ಅವರ ವ್ಯಾಪ್ತಿಗೆ ಬರುತ್ತಿದೆ. ಹೀಗಾಗಿ ಅವರೊಂದಿಗೆ ಚರ್ಚಿಸಿ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ತಿಳಿಸಿದರು.
ಬಿಡಿಎಗೆ ನಿವೃತ್ತ ಅಧಿಕಾರಿಯನ್ನು ನೇಮಿಸಿ ಅಧ್ಯಕ್ಷರ ಅಧಿಕಾರಗಳನ್ನು ಮೊಟುಕುಗೊಳಿಸಲಾಗಿದೆ ಎಂಬ ಶಾಸಕ ಹಾಗೂ ಬಿಡಿಎ ಅಧ್ಯಕ್ಷ ಎಸ್.ಟಿ.ಸೋಮಶೇಖರ್ ಅವರ ಆರೋಪವನ್ನು ಮುಖ್ಯಮಂತ್ರಿ ಬಳಿ ಚರ್ಚಿಸಲಾಗುವುದು ಎಂದರು.
ಟಿಡಿಆರ್ ಹಂಚಿಕೆ ವಿಷಯದಲ್ಲಿ ಖಾಸಗಿ ಕಂಪೆನಿಗಳಿಗೆ ಲಾಭ ಮಾಡಿಕೊಡಲಾಗಿದೆ ಎಂಬ ಆರೋಪಕ್ಕೆ ಪ್ರತಿಕ್ರಿಯಿಸಿದ ಪರಮೇಶ್ವರ್, ಪ್ರಕರಣ ನನ್ನ ಗಮನಕ್ಕೆ ಬಂದಿಲ್ಲ. ಈ ಬಗ್ಗೆ ಪರಿಶೀಲನೆ ನಡೆಸಲಾಗುವುದು. ಈ ಹಿಂದಿನ ಕಡತವನ್ನು ವಿಲೇವಾರಿ ಮಾಡಲಾಗಿದೆಯೇ ಅಥವಾ ನ್ಯಾಯಾಲಯದ ಆದೇಶದ ಮೇರೆಗೆ ಕ್ರಮ ಕೈಗೊಳ್ಳಲಾಗಿದೆಯೇ ಎಂಬುದು ಗೊತ್ತಿಲ್ಲ. ಪರಿಶೀಲನೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಪರಮೇಶ್ವರ್ ಹೇಳಿದರು.