ಕಾಂಗ್ರೆಸ್ ಚುನಾವಣಾ ಆಕಾಂಕ್ಷಿಗಳ ದಂಡು ದೆಹಲಿಯಲ್ಲಿ ಬೀಡು

ನವದೆಹಲಿ, ಮಾ.17-ಕಾಂಗ್ರೆಸ್ ಚುನಾವಣಾ ಆಕಾಂಕ್ಷಿಗಳ ದಂಡು ದೆಹಲಿಯಲ್ಲಿ ಬೀಡುಬಿಟ್ಟಿದೆ.  ಎಐಸಿಸಿ ಮಹಾ ಅಧಿವೇಶನ ನಡೆಯುತ್ತಿರುವ ಹಿನ್ನೆಲೆಯಲ್ಲಿ ರಾಜ್ಯ ಕಾಂಗ್ರೆಸ್ ಮುಖಂಡರು, ಎಐಸಿಸಿ ಮುಖಂಡರು ನವದೆಹಲಿಯಲ್ಲಿರುವುದರಿಂದ ಟಿಕೆಟ್ ಆಕಾಂಕ್ಷಿಗಳು ನವದೆಹಲಿಯಲ್ಲಿ ಬೀಡುಬಿಟ್ಟಿದ್ದು, ತಮ್ಮ ತಮ್ಮ ನಾಯಕರ ಮೂಲಕ ಲಾಬಿ ತೀವ್ರಗೊಳಿಸಿದ್ದಾರೆ.
ಟಿಕೆಟ್ ಪಡೆಯಲು ಬ್ಲಾಕ್ ಹಾಗೂ ಜಿಲ್ಲಾ ಅಧ್ಯಕ್ಷರ ಶಿಫಾರಸು ಅಗತ್ಯವಿರುವುದರಿಂದ ಎಲ್ಲಾ ಬ್ಲಾಕ್ ಜಿಲ್ಲಾಧ್ಯಕ್ಷರೊಂದಿಗೆ ದೆಹಲಿಗೆ ತೆರಳಿರುವ ಆಕಾಂಕ್ಷಿಗಳು ಅಲ್ಲಿನ ನಾಯಕರನ್ನೂ ಭೇಟಿ ಮಾಡಿ ತಮ್ಮ ಅಹವಾಲು ಸಲ್ಲಿಸಲು ಮುಗಿಬಿದ್ದಿದ್ದಾರೆ.
2018ರ ಚುನಾವಣೆಗೆ ಹೇಗಾದರೂ ಮಾಡಿ ಟಿಕೆಟ್ ಪಡೆಯಲೇಬೇಕೆಂಬ ಹಿನ್ನೆಲೆಯಲ್ಲಿ ಆಕಾಂಕ್ಷಿಗಳು ಭಾರೀ ಕಸರತ್ತು ನಡೆಸಿರುವುದರಿಂದ ಕರ್ನಾಟಕ ಭವನ ತುಂಬಿ ತುಳುಕುತ್ತಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್, ಎಐಸಿಸಿ ಪ್ರಧಾನಕಾರ್ಯದರ್ಶಿ, ಪಕ್ಷದ ರಾಜ್ಯದ ಉಸ್ತುವಾರಿ ಕೆ.ಸಿ.ವೇಣುಗೋಪಾಲ್, ಡಿ.ಕೆ.ಶಿವಕುಮಾರ್, ಮಲ್ಲಿಕಾರ್ಜುನ ಖರ್ಗೆ ಸೇರಿದಂತೆ ಹಲವು ನಾಯಕರಿಗೆ ಆಕಾಂಕ್ಷಿಗಳು ದುಂಬಾಲು ಬಿದ್ದಿದ್ದಾರೆ.  ಅಭ್ಯರ್ಥಿಗಳ ಆಯ್ಕೆ ಸಂಬಂಧ ಇದೇ 26ರಂದು ಚುನಾವಣಾ ಸಮಿತಿ ಬೆಂಗಳೂರಿನಲ್ಲಿ ಸಭೆ ಸೇರುವುದರಿಂದ ಆಕಾಂಕ್ಷಿಗಳು ತಮ್ಮ ಆಯ್ಕೆ ದೃಢಪಡಿಸಿಕೊಳ್ಳಲು ನಿನ್ನೆಯಿಂದ ಭಾರೀ ಕಸರತ್ತು ನಡೆಸುತ್ತಿದ್ದಾರೆ.  ಬ್ಲಾಕ್ ಮತ್ತು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರ ಶಿಫಾರಸು ಪತ್ರಗಳನ್ನು ಹಿಡಿದು ನಾಯಕರುಗಳ ಭೇಟಿಗಾಗಿ ಪೈಪೆÇೀಟಿಗೆ ಬಿದ್ದಿರುವುದು ಕಂಡು ಬರುತ್ತಿದೆ.  ಪಕ್ಷದಲ್ಲಿ ತಾವು ಸಲ್ಲಿಸಿರುವ ಸೇವೆ, ಮಾಡಿರುವ ಸಾಧನೆ ಮುಂತಾದವುಗಳ ಕಡತಗಳನ್ನು ಹಿಡಿದು ಅನೇಕರು ಟಿಕೆಟ್‍ಗಾಗಿ ಪ್ರಯತ್ನ ನಡೆಸಿದ್ದಾರೆ.
ಇಷ್ಟೆಲ್ಲದರ ನಡುವೆ ರಾಹುಲ್‍ಗಾಂಧಿಯವರು ಯಾರಿಗೂ ಭೇಟಿಗೆ ಅವಕಾಶ ನೀಡಿಲ್ಲ. ಬೆಂಗಳೂರಿನಲ್ಲಿ ಇದರ ತೀರ್ಮಾನ ನಡೆಯಲಿದೆ ಎಂಬ ಸಂದೇಶ ನೀಡಿದ್ದಾರೆ ಎಂದು ತಿಳಿದುಬಂದಿದೆ.
ಆದರೂ ಆಕಾಂಕ್ಷಿಗಳು ತಮ್ಮ ಪ್ರಯತ್ನವನ್ನು ಬಿಟ್ಟಿಲ್ಲ. ಎಐಸಿಸಿ ಅಧಿವೇಶನಕ್ಕೆ ತೆರಳಿರುವ ಅವರು ಎಐಸಿಸಿ ಮುಖಂಡರ ಮನವೊಲಿಸುವ ಕಡೆಯ ಪ್ರಯತ್ನವನ್ನು ಮುಂದುವರೆಸಿದ್ದಾರೆ.
ಮಹಿಳೆಯರು ಹಾಗೂ ಯುವಕರಿಗೆ ಈ ಬಾರಿ ಹೆಚ್ಚು ಆದ್ಯತೆ ಸಿಗುವ ಸಾಧ್ಯತೆ ಇದೆ ಎಂಬ ಹಿನ್ನೆಲೆಯಲ್ಲಿ ಸಾಕಷ್ಟು ಮಹಿಳೆಯರು, ಯುವಕರೂ ಕೂಡ ಅರ್ಜಿ ಹಿಡಿದು ದೆಹಲಿಯಲ್ಲಿ ನಾಯಕ ಬಿದ್ದಿರುವುದು ಕಂಡು ಬಂದಿದೆ.
ಎಐಸಿಸಿ ಅಧಿವೇಶನದಲ್ಲಿ ಪಾಲ್ಗೊಳ್ಳಲು ಎಲ್ಲಾ ರಾಜ್ಯಗಳಿಂದಲೂ ಕಾಂಗ್ರೆಸ್ ಮುಖಂಡರು ಆಗಮಿಸಿದ್ದರು. ಕರ್ನಾಟಕದಿಂದ ಹೆಚ್ಚಾಗಿಯೇ ಮುಖಂಡರು ಭೇಟಿ ನೀಡಿದ್ದಾರೆ. ಇದರಲ್ಲಿ ಟಿಕೆಟ್ ಆಕಾಂಕ್ಷಿಗಳು ಹೆಚ್ಚಾಗಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ