ಬೆಂಗಳೂರು, ಮಾ.17- ಯುಗಾದಿ ಹಬ್ಬದ ಸಡಗರ ನಿನ್ನೆಯಿಂದಲೇ ಪ್ರಾರಂಭವಾಗಿದ್ದು, ಮಾವು, ಬೇವಿನ ಸೊಪ್ಪು, ಹೂವಿನ ಖರೀದಿ ಭರಾಟೆ ಜೋರಾಗಿಯೇ ನಡೆಯುತ್ತಿದೆ.
ಎರಡು ದಿನಗಳಿಂದ ಸಂಜೆ ಆಗುತ್ತಿದ್ದಂತೆ ಜೋರು ಮಳೆ ಬರುತ್ತಿರುವುದರಿಂದ ಸಾರ್ವಜನಿಕರು ಮರುಕಟ್ಟೆಗಳಿಗೆ ಹೋಗಿ ವಸ್ತುಗಳನ್ನು ಖರೀದಿಸುವಲ್ಲು ತೊಂದರೆ ಅನುಭವಿಸಬೇಕಾಯಿತು.
ಈ ಬಾರಿ ತೆಂಗಿನ ಕಾಯಿ ಬೆಲೆ ಗಗನಕ್ಕೇರಿದ್ದು, 35ರಿಂದ 40ರವರೆಗೆ ಒಂದು ತೆಂಗಿನ ಕಾಯಿ ಬೆಲೆ ಇದೆ. ಗಗನಕ್ಕೇರಿದ್ದ ತರಕಾರಿ ಬೆಲೆ ಇಳಿಮುಖವಾಗಿದೆ. ಹಣ್ಣು, ಹೂವಿನ ಬೆಲೆಯೂ ತುಸು ಸಿಹಿಯಾಗಿದೆ. ಹಾಗಾಗಿ ಈ ಬಾರಿಯ ಯುಗಾದಿ ಜನರಲ್ಲಿ ಸಂತಸ ತಂದಿದೆ.
ಕನಾಂಕಬರ ಕೆಜಿಗೆ 800ರೂ ಇರುತ್ತಿದ್ದದ್ದು, ಈಗ 400ಕ್ಕಿಂತ ಕಡಿಮೆ ಇದೆ. ಮಲ್ಲಿಗೆ 240, ಗುಲಾಬಿ ಕೆಜಿಗೆ 80ರಿಂದ 100ರೂ., ಬಿಳಿ, ಹಳದಿ ಸೇವಂತಿಗೆ 120, ದೊಡ್ಡಗಾತ್ರದ ಸೇವಂತಿಗೆ ಕೆಜಿಗೆ 170ರಿಂದ 200, ಕಣಿಗಲೆ 75, ಸುಗಂಧರಾಜ 90, ಕಾಕಡ 230, ಚೆಂಡುಹೂವು 35 ರೂ ಇತ್ತು.
ಇಂದು ಶನಿವಾರ , ನಾಳೆ ಹಬ್ಬ ಇರುವುದರಿಂದ ಹೂವು-ಹಣ್ಣಿನ ದರದಲ್ಲಿ ಏರುಪೇರಾಗಬಹುದೆಂದು ವ್ಯಾಪಾರಿಗಳಾದ ಲಕ್ಷ್ಮಿ , ಬಸವರಾಜು ತಿಳಿಸಿದ್ದಾರೆ.
ಕ್ಯಾರೆಟ್, ಬೀನ್ಸ್ ಬೆಲೆ 100 ರೂ. ತಲುಪಿತ್ತು. ಈಗ ಗಣನೀಯವಾಗಿ ಇಳಿಕೆಯಾಗಿದ್ದು , 20-25ರ ಬೆಲೆಗೆ ಲಭ್ಯವಾಗುತ್ತಿದೆ. ಬೀಟ್ರೂಟ್ ಕೆಜಿಗೆ 15, ಬದನೆ 15, ಕ್ಯಾಪ್ಸಿಕಪ್ 25-30, ಟೊಮೊಟೊ 10-15, ಹೂಕೋಸ್ 18 ರೂ.ಗೆ ಮಾರಾಟವಾಗುತ್ತಿದೆ.
ಪೂಜೆಗೆ ಅತ್ಯವಶ್ಯಕವಾಗಿ ಬೇಕಾಗಿರುವ ಏಲಕ್ಕಿ ಬಾಳೆ ಕೆಜಿಗೆ 55-60, ಪಚ್ಚಬಾಳೆ 20, ಕಲ್ಲಂಗಡಿ 15, ಹಸಿರು ಬಣ್ಣದ ಬೀಜರಹಿತ ದ್ರಾಕ್ಷಿ ಕೆಜಿಗೆ 60-70, ಕಪ್ಪು ದ್ರಾಕ್ಷಿ 100-120 ಕಿತ್ತಲೆ ಹಣ್ಣು 80-120 ರೂ. ಬೆಲೆಗೆ ಸಿಗುತ್ತಿದೆ.
ಕೆ.ಆರ್.ಮಾರುಕಟ್ಟೆ , ಮಲ್ಲೇಶ್ವರಂ, ಮಹಾಲಕ್ಷ್ಮಿ ಲೇಔಟ್ ಸೇರಿದಂತೆ ವಿವಿಧ ಮಾರುಕಟ್ಟೆಗಳಲ್ಲಿ ಜನ ತುಂಬಿದ್ದಾರೆ. ಇದಲ್ಲದೆ ವಿವಿಧ ಬಡಾವಣೆಗಳ ರಸ್ತೆಬದಿಗಳಲ್ಲಿ ಹೂವು-ಹಣ್ಣು, ಮಾವು-ಬೇವು ಖರೀದಿ ಭರಾಟೆ ನಡೆದಿದೆ. ಸಂಜೆ ಮಳೆಯಾಗುವ ಸಾದ್ಯತೆ ಇರುವುದರಿಂದ ಜನರು ಬೆಳಗೆಯೇ ಖರೀದಿಯಲ್ಲಿ ತೊಡಗಿದ್ದರು.