ನವದೆಹಲಿ, ಮಾ.17-ರಾಹುಲ್ಗಾಂಧಿ ದೇಶದ ಪ್ರಧಾನಿಯಾದರೆ ಮಹಿಳಾ ಸುರಕ್ಷತಾ ಕಾಯ್ದೆಯನ್ನು ಜಾರಿಗೊಳಿಸಲಿದ್ದಾರೆ ಎಂದು ಎಐಸಿಸಿ ಅಧಿವೇಶನದಲ್ಲಿ ಕಾಂಗ್ರೆಸ್ ಮುಖಂಡರಾದ ಸುಶ್ಮಿತಾ ಅವರು ಹೇಳಿದರು.
ನವದೆಹಲಿಯ ಇಂದಿರಾಗಾಂಧಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ 84ನೇ ಎಐಸಿಸಿ ಅಧಿವೇಶನವನ್ನುದ್ದೇಶಿಸಿ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿ ಅವರು ಬೇಟಿ ಪಡಾವೋ, ಬೇಟಿ ಬಚಾವೋ ಬಗ್ಗೆ ಮಾತನಾಡುತ್ತಾರೆ. ಆದರೆ ರಾಹುಲ್ಗಾಂಧಿಯವರು ಮಹಿಳೆಯರು ವಿಧಾನಸಭೆ, ಲೋಕಸಭೆಗೆ ಬರಬೇಕು. ಮಹಿಳೆಯರಿಗೆ ಹೆಚ್ಚು ಅಧಿಕಾರ ಸಿಗಬೇಕು ಎಂಬ ನಿಟ್ಟಿನಲ್ಲಿ ಯೋಚಿಸುತ್ತಾರೆ ಎಂದರು.
ತ್ರಿವಳಿ ತಲಾಕ್ನ್ನು ಕೇಂದ್ರ ಸರ್ಕಾರ ದುರುಪಯೋಗಪಡಿಸಿಕೊಂಡಿದೆ. ಯಾವುದೇ ವಿಚ್ಛೇದನ ಸಂದರ್ಭದಲ್ಲಿ ಸಂಧಾನಕ್ಕೆ ಅವಕಾಶವಿರುತ್ತದೆ. ಆದರೆ ಈ ತಲಾಕ್ನಲ್ಲಿ ಸಂಧಾನಕ್ಕೆ ಅವಕಾಶ ನೀಡದೆ ದಂಡನೆ ವಿಧಿಸಲಾಗಿದೆ.
ತಲಾಕ್ ನೀಡಿದವರು ಜೈಲಿಗೆ ಹೋದ ಸಂದರ್ಭದಲ್ಲಿ ಮಹಿಳೆಗೆ ಜೀವನಾಂಶ ಕಲ್ಪಿಸುವ ಬಗ್ಗೆ ಯಾವುದೇ ಪ್ರಸ್ತಾಪವಿಲ್ಲ. ಈ ಮಾರಕ ಕಾಯ್ದೆ ಜಾರಿಗೊಳಿಸಿ ಸತ್ಯಾಂಶ ಮುಚ್ಚಿಡಲಾಗಿದೆ. ಹಾನಿಕಾರಕ ಅಂಶಗಳನ್ನು ಮರೆಮಾಚಲಾಗಿದೆ ಎಂದು ಸುಶ್ಮಿತಾ ಅವರು ಹೇಳಿದರು.
ಕಾಂಗ್ರೆಸ್ ಪಕ್ಷವನ್ನು ದೇಶದಲ್ಲಿ ಅಧಿಕಾರಕ್ಕೆ ತರಲು ಮಹಿಳೆಯರು ಪಣತೊಡಬೇಕು. ಆರ್ಎಸ್ಎಸ್ ರೂಪಿಸುವ ತಂತ್ರಕ್ಕೆ ಪ್ರತಿತಂತ್ರ ರೂಪಿಸಬೇಕು, ಪ್ರತಿ ಮನೆ ಮನೆಗೆ ತೆರಳಿ ಪಕ್ಷ ಕಟ್ಟುವ ಕೆಲಸವನ್ನು ಮಾಡಬೇಕು ಎಂದು ಕರೆ ನೀಡಿದರು.
ಮಹಿಳಾ ಸುರಕ್ಷತೆ ಬಗ್ಗೆ ಕೇವಲ ಭಾಷಣಗಳನ್ನು ಮಾಡಲಾಗುತ್ತಿದೆ. ಆದರೆ ಯಾವುದೇ ಯೋಜನೆಗಳು ಅನುಷ್ಠಾನವಾಗುತ್ತಿಲ್ಲ ಎಂದು ವಿಷಾದಿಸಿದರು.
ಯುವ ಮುಖಂಡ ಜ್ಯೋತಿರಾದಿತ್ಯ ಸಿಂಧ್ಯಾ ಮಾತನಾಡಿ, ಎನ್ಡಿಎ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದ ಮೇಲೆ ಹಲವು ರಾಜ್ಯಗಳಲ್ಲಿ ಚುನಾವಣೆ ಗೆದ್ದಿದೆ. ಕೆಲವು ರಾಜ್ಯಗಳಲ್ಲಿ ವಾಮಮಾರ್ಗದಿಂದ ಅಧಿಕಾರದ ಗದ್ದುಗೆಗೇರಿದೆ. ನಂತರ ನಡೆದ ಉಪಚುನಾವಣೆಯಲ್ಲಿ ಮಾತ್ರ ಸೋಲನುಭವಿಸಿದೆ. ಉಪಚುನಾವಣೆಯಲ್ಲಿ ನೈಜ ಫಲಿತಾಂಶ ಬಂದಿದೆ ಎಂದು ಹೇಳಿದರು. ಹಿರಿಯರ ಅನುಭವ, ಯುವಕರ ಶಕ್ತಿಯನ್ನು ಆಕ್ರಮಣಕಾರಿಯಾಗಿ ಬಳಸಿಕೊಂಡು, ತಂತ್ರಗಾರಿಕೆಯನ್ನು ರೂಪಿಸಿದರೆ ಮತ್ತೊಮ್ಮೆ ದೇಶದಲ್ಲಿ ಕಾಂಗ್ರೆಸ್ ಪಕ್ಷವನ್ನು ಪ್ರತಿಷ್ಠಾಪಿಸಬಹುದು ಎಂದು ತಿಳಿಸಿದರು.
ರಾಹುಲ್ ಅವರ ನಾಯಕತ್ವಕ್ಕೆ ನಾವು ದನಿಗೂಡಿಸಬೇಕು. ಬೂತ್ಮಟ್ಟದಿಂದ ಪಕ್ಷವನ್ನು ಸಂಘಟಿಸಬೇಕು. ಮುಂದಿನ ದಿನಗಳಲ್ಲಿ ಆಕ್ರಮಣಕಾರಿ ತಂತ್ರಗಾರಿಕೆ ನಮ್ಮ ಅನಿವಾರ್ಯ ಎಂದು ಅವರು ಪ್ರತಿಪಾದಿಸಿದರು.
ಪ್ರಸ್ತುತ ಅಧಿವೇಶನದಲ್ಲಿ ಯುವಕರಿಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ಹಿರಿಯ ಕಾಂಗ್ರೆಸ್ ಮುಖಂಡರಿಗಿಂತ ಅಧಿವೇಶನದಲ್ಲಿ ಮಾತನಾಡಲು ಯುವ ನಾಯಕರಿಗೆ ಹೆಚ್ಚಿನ ಅವಕಾಶ ಕಲ್ಪಿಸಿರುವುದು ವಿಶೇಷವಾಗಿದೆ.