ನವದೆಹಲಿ, ಮಾ.17- ಮುಂದಿನ ವರ್ಷ ನಡೆಯಲಿರುವ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ-ಆರ್ಎಸ್ಎಸ್ಅನ್ನು ಮಣಿಸಲು ಎಲ್ಲ ಸಮಾನ ಮನಸ್ಕ ಪಕ್ಷಗಳೊಂದಿಗೆ ಕೈ ಜೋಡಿಸುವ ಬಗ್ಗೆ ಅಖಿಲ ಭಾರತ ಕಾಂಗ್ರೆಸ್ ಸಮಿತಿ (ಎಐಸಿಸಿ) ಮಹತ್ವದ ನಿರ್ಣಯ ಕೈಗೊಂಡಿದೆ.
ಇದರೊಂದಿಗೆ 2019ರ ಸಾರ್ವತ್ರಿಕ ಚುನಾವಣೆಯಲ್ಲಿ ಮತ್ತೆ ಕೇಂದ್ರದಲ್ಲಿ ಅಧಿಕಾರಕ್ಕೇರಲು ಕಾರ್ಯಸಾಧುವಾಗುವ ಸಾಮಾನ್ಯ ಕಾರ್ಯಕ್ರಮ ರೂಪಿಸಲು ಕಾಂಗ್ರೆಸ್ ಕಾರ್ಯತಂತ್ರ ರೂಪಿಸಿದೆ. ರಾಜಧಾನಿ ದೆಹಲಿಯ ಇಂದಿರಾಗಾಂಧಿ ಕ್ರೀಡಾಂಗಣದಲ್ಲಿ ಇಂದಿನಿಂದ ಆರಂಭವಾಗಿರುವ ಎರಡು ದಿನಗಳ 84ನೆ ಎಐಸಿಸಿ ಮಹಾಧಿವೇಶನದಲ್ಲಿ ಕೆಲವು ಪ್ರಮುಖ ವಿಚಾರಗಳ ಬಗ್ಗೆ ರೂಪುರೇಷೆಗಳನ್ನು ಸಿದ್ಧಪಡಿಸಲಾಗಿದ್ದು, ಗಹನ ಚರ್ಚೆ ನಡೆಸಲಾಗಿದೆ.
ಭಾರತದ ಗಣರಾಜ್ಯ ಮತ್ತು ಸಾಂವಿಧಾನಿಕ ಮೂಲಭೂತ ಮೌಲ್ಯಗಳನ್ನು ಎತ್ತಿ ಹಿಡಿದು ಅವುಗಳ ರಕ್ಷಣೆಗಾಗಿ ಕೈಗೊಳ್ಳಬೇಕಾದ ಪ್ರಮುಖ ಹೆಜ್ಜೆಗಳ ಬಗ್ಗೆ ಅಧಿವೇಶನದಲ್ಲಿ ಚರ್ಚಿಸಲಾಗಿದೆ.
ಯುಪಿಎ ಸರ್ಕಾರ ಅಧಿಕಾರದಲ್ಲಿದ್ದಾಗ ಕೃಷಿಕರು, ಸಮಾಜದ ದುರ್ಬಲ ವರ್ಗದವರು, ಆರ್ಥಿಕವಾಗಿ ಹಿಂದುಳಿದವರು, ಮಹಿಳೆಯರು, ಯುವ ಸಮುದಾಯ ಮೊದಲಾದ ಕ್ಷೇತ್ರಗಳಿಗೆ ಆದ್ಯತೆ ನೀಡಲಾಗಿತ್ತು ಎಂಬ ಅಂಶಗಳನ್ನು ಗೊತ್ತುವಳಿಯಲ್ಲಿ ಉಲ್ಲೇಖಿಸಲಾಗಿದ್ದು, ಈ ವಿಚಾರಗಳನ್ನು ಮುಂದಿಟ್ಟುಕೊಂಡು ಚುನಾವಣೆಯಲ್ಲಿ ಸ್ಪರ್ಧಿಸುವ ಬಗ್ಗೆ ಸಮಾಲೋಚನೆ ನಡೆಸಲಾಗಿದೆ.
ದೇಶದ ಅತ್ಯಂತ ಹಳೆಯ ರಾಷ್ಟ್ರೀಯ ಪಕ್ಷವಾದ ಕಾಂಗ್ರೆಸ್ನ ವೈಭವವನ್ನು ಮತ್ತೆ ಕೇಂದ್ರದಲ್ಲಿ ಪ್ರತಿಷ್ಠಾಪಿಸಲು ಸಾಧ್ಯವಾಗುವ ಎಲ್ಲ ರೀತಿಯ ಮಾರ್ಗೋಪಾಯಗಳನ್ನು ಅನುಸರಿಸಲು ಸಭೆ ಒಮ್ಮತದ ನಿರ್ಣಯ ಕೈಗೊಂಡಿದೆ.
ಮುಂಬರುವ ಚುನಾವಣೆಗಳು ಪಕ್ಷದ ಸಂಘಟನೆ, ಬಲವರ್ಧನೆ ಸೇರಿದಂತೆ ಮಹತ್ವದ ವಿಷಯಗಳ ಬಗ್ಗೆಯೂ ನಿರ್ಣಯದಲ್ಲಿ ಪ್ರಸ್ತಾಪಿಸಲಾಗಿದೆ.
ದೇಶದಲ್ಲಿ ಕೃಷಿ ಬೆಳವಣಿಗೆ ಕುಂಠಿತ, ರೈತರ ಸರಣಿ ಆತ್ಮಹತ್ಯೆ, ಕೃಷಿಕರ ಬವಣೆ, ನಿರುದ್ಯೋಗ ಸಮಸ್ಯೆ, ಆರ್ಥಿಕ ಹಿಂಜರಿತ, ಕೈಗಾರಿಕೆಗಳ ದುಸ್ಥಿತಿ ಸೇರಿದಂತೆ ಹಲವಾರು ಮಹತ್ವದ ವಿಷಯಗಳ ಬಗ್ಗೆ ಮಹಾಧಿವೇಶನದಲ್ಲಿ ಪ್ರಮುಖವಾಗಿ ಚರ್ಚಿಸಲಾಗಿದೆ.
ಈ ವರ್ಷ ಕರ್ನಾಟಕ ಸೇರಿದಂತೆ ವಿವಿಧ ರಾಜ್ಯಗಳಲ್ಲಿ ನಡೆಯುವ ಚುನಾವಣೆ ಹಾಗೂ 2019ರ ಲೋಕಸಭಾ ಚುನಾವಣೆಗಳ ಹಿನ್ನೆಲೆಯಲ್ಲೂ ಈ ಅಧಿವೇಶನ ಪ್ರಾಮುಖ್ಯತೆ ಪಡೆದುಕೊಂಡಿದ್ದು, ಪಕ್ಷದ ಸಂಘಟನೆ ಮತುತಿ ಬಲವರ್ಧನೆಗಳ ಬಗ್ಗೆ ಗಹನ ಚರ್ಚೆಯಾಗಿದೆ.