ಪಣಜಿ: ತೀವ್ರ ಅನಾರೋಗ್ಯಕ್ಕೀಡಾಗಿ, ಚಿಕಿತ್ಸೆ ಪಡೆಯುತ್ತಿದ್ದ ಗೋವಾ ಮುಖ್ಯಮಂತ್ರಿ ಮನೋಹರ್ ಪರಿಕ್ಕರ್ ಅವರು ವಿಧಿವಶರಾಗಿದ್ದಾರೆ. ಅವರಿಗೆ 63 ವರ್ಷ ವಯಸ್ಸಾಗಿತ್ತು.
ಪ್ಯಾಂಕ್ರಿಯಾಟಿಕ್ ಕ್ಯಾನ್ಸರ್ ನಿಂದ ಕಳೆದ ಒಂದು ವರ್ಷದಿಂದ ಬಳಲುತ್ತಿದ್ದ ಪರಿಕ್ಕರ್ ಅವರು, ತೀವ್ರ ಅನಾರೋಗ್ಯಕ್ಕೀಡಾದ ಕಾರಣ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೇ ಇಂದು ಸಂಜೆ ನಿಧನರಾಗಿದ್ದಾರೆ.
ಇತ್ತೀಚೆಗಷ್ಟೇ ದೆಹಲಿಯ ಏಮ್ಸ್ ನಿಂದ ಚಿಕಿತ್ಸೆ ಪಡೆದು ವಾಪಸಾಗಿ ಸರ್ಕಾರ ನಡೆಸಿದ್ದರು. ನಿನ್ನೆ ದಿಢೀರ್ ಸುಸ್ತಾಗಿದ್ದರಿಂದ ಅವರಿಗೆ ಮತ್ತೆ ಚಿಕಿತ್ಸೆ ಮುಂದುವರೆಸಲಾಗಿತ್ತು. ಗೋವಾದ ತಮ್ಮ ಖಾಸಗಿ ನಿವಾಸದಲ್ಲೇ ಹೆಚ್ಚಿನ ಸಮಯ ವಿಶ್ರಾಂತಿ ಪಡೆದು ಚೇತರಿಸಿಕೊಳ್ಳುತ್ತಿದ್ದ ಅವರು ಅಲ್ಲಿಂದಲೇ ಸರ್ಕಾರದ ಆಡಳಿತವನ್ನು ನಿರ್ವಹಿಸುತ್ತಿದ್ದರು.
1955 ಡಿಸೆಂಬರ್ 13 ರಂದು ಜನಿಸಿದ ಪರಿಕ್ಕರ್ 1978 ರಲ್ಲಿ ಬಾಂಬೆ ಐಐಟಿಯಿಂದ ಪದವಿಯನ್ನು ಪಡೆದಿದ್ದರು. ಯುವಕರಾಗಿದ್ದ ವೇಳೆಯೇ ಅವರು ಆರ್ ಆರ್ ಎಸ್ ನಲ್ಲಿ ಗುರುತಿಸಿಕೊಂಡಿದ್ದರು. 1994 ರಲ್ಲಿ ಮೊದಲ ಬಾರಿಗೆ ಶಾಸಕರಾಗಿ ಆಗಿ ಆಯ್ಕೆ ಆಗಿದ್ದ ಅವರು, 2000 ಇಸವಿಯಿಂದ 2005 ಹಾಗೂ 2012 ರಿಂದ 2014ರ ವರೆಗೂ ಗೋವಾ ಸಿಎಂ ಆಗಿ ಕಾರ್ಯನಿರ್ವಹಿಸಿದ್ದರು. ಆ ಬಳಿಕ 2017 ಮಾರ್ಚ್ 14 ರಂದು ಮತ್ತೆ ಗೋವಾ ಸಿಎಂ ಆಗಿ ಅಧಿಕಾರ ವಹಿಸಿಕೊಂಡಿದ್ದರು.
2014ರ ಲೋಕಸಭಾ ಚುನಾವಣೆಗೂ ಮುನ್ನ ಮನೋಹರ್ ಪರಿಕ್ಕರ್ ಬಿಜೆಪಿಯಿಂದ ಪ್ರಧಾನಿ ಹುದ್ದೆಯ ಅಭ್ಯರ್ಥಿಯಾಗಿಯೂ ಗುರುತಿಸಿಕೊಂಡಿದ್ದರು. ಆದರೆ 2014 ಚುನಾವಣೆ ಬಳಿಕ ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ದೇಶದ ರಕ್ಷಣಾ ಸಚಿವರಾಗಿ ಅಧಿಕಾರ ವಹಿಸಿಕೊಂಡಿದ್ದರು. 2017ರ ಮಾರ್ಚ್ ವರೆಗೂ ಸಚಿವರಾಗಿ ಮುಂದುವರೆದಿದ್ದರು, ಆದರೆ ಗೋವಾ ರಾಜ್ಯ ರಾಜಕೀಯದಲ್ಲಿ ನಡೆದ ಬದಲಾವಣೆಗಳ ಕಾರಣದಿಂದ ಮತ್ತೆ ಸಿಎಂ ಆಗಿ ಅಧಿಕಾರ ವಹಿಸಿಕೊಂಡಿದ್ದರು.
ಇಂದು ಅಂತ್ಯಕ್ರಿಯೆ
ಗೋವಾ ಕ್ಯಾಂಪಲ್‍ನಲ್ಲಿರುವ ಎಸ್‍ಎಜಿ ಮೈದಾನದಲ್ಲಿ ಸಕಲ ಸರ್ಕಾರಿ ಗೌರವದೊಂದಿಗೆ ಸೋಮವಾರ ಸಂಜೆ 4.30ಕ್ಕೆ ಪರಿಕ್ಕರ್ ಅಂತ್ಯಕ್ರಿಯೆ ನಡೆಸಲು ನಿರ್ಧರಿಸಲಾಗಿದೆ.
ಇಂದು ದೇಶಾದ್ಯಂತ ಶೋಕಾಚರಣೆ
ಪರಿಕ್ಕರ್ ನಿಧನದ ಹಿನ್ನೆಲೆಯಲ್ಲಿ ದೇಶಾದ್ಯಂತ ಸೋಮವಾರ ಶೋಕಾಚರಣೆಗೆ ಕರೆ ನೀಡಲಾಗಿದೆ. ಸೋಮವಾರ ಬೆಳಗ್ಗೆ 10 ಗಂಟೆಗೆ ಕೇಂದ್ರ ಸಚಿವ ಸಂಪುಟ ಕರೆಯಲಾಗಿದ್ದು, ಇದಾದ ಬಳಿಕ ಸಂತಾಪ ಸಭೆ ನಡೆಸಲು ನಿರ್ಧರಿಸಲಾಗಿದೆ.
ಬಿಗಿ ಭದ್ರತೆ
ಪರಿಕ್ಕರ್ ವಿವಶರಾಗಿರುವ ಬಗ್ಗೆ ವಿಚಾರ ತಿಳಿಯುತ್ತಿದ್ದಂತೆ ಪಣಜಿಯಲ್ಲಿರುವ ಅವರ ನಿವಾಸದೆದುರು ಭಾರೀ ಸಂಖ್ಯೆಯಲ್ಲಿ ಅಭಿಮಾನಿಗಳು ಜಮಾಯಿಸಿದ್ದಾರೆ. ರಾಜಕೀಯ ಮುಖಂಡರು, ಸಂಬಂಕರು ದೌಡಾಯಿಸಿದ್ದಾರೆ. ಹೀಗಾಗಿ ನಿವಾಸದ ಸಮೀಪ ಪೊಲೀಸ್ ಬಿಗಿ ಬಂದೋಬಸ್ತ್ ವಹಿಸಿದ್ದಾರೆ.
ಪರಿಕ್ಕರ್ ನಿಧನ ದೇಶಕ್ಕೆ ತುಂಬಲಾರದ ನಷ್ಟ. ಶ್ರದ್ಧೆ, ಕಠಿಣ ಪರಿಶ್ರಮದ ಮೂಲಕ ತಮ್ಮ ಕೊನೆಯುಸಿರಿನವರೆಗೆ ಜವಾಬ್ದಾರಿಗಳನ್ನು ನಿಭಾಯಿಸಿದ ೀಮಂತ ನಾಯಕ.
-ಶಾಂತಕುಮಾರಿ, ರಾಷ್ಟ್ರೀಯ ಸ್ವಯಂ ಸೇವಿಕ ಸಮಿತಿ ಪ್ರಮುಖ್ ಸಂಚಾಲಿಕ,
-ಸೀತಾ ಗಾಯತ್ರಿ, ಪ್ರಮುಖ್ ಕಾರ್ಯವಾಹಿಕ
ಗಣ್ಯರ ಸಂತಾಪ
ೀಮಂತ ನಾಯಕನ ಅಗಲಿಕೆಗೆ ರಾಷ್ಟ್ರಪತಿ ರಾಮನಾಥ್ ಕೋವಿಂದ್, ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಸಚಿವರಾದ ನಿರ್ಮಲಾ ಸೀತಾರಾಮನ್, ರಾಜನಾಥ್ ಸಿಂಗ್, ರವಿಶಂಕರ್ ಪ್ರಸಾದ್, ಸ್ಮೃತಿ ಇರಾನಿ, ನಿತಿನ್ ಗಡ್ಕರಿ, ಕಾಂಗ್ರೆಸ್ ಮುಖಂಡ ಮಲ್ಲಿಕಾರ್ಜುನ ಖರ್ಗೆ, ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಸೇರಿದಂತೆ ಅನೇಕ ಗಣ್ಯರು ಕಂಬನಿ ಮಿಡಿಸಿದ್ದಾರೆ.
ಅಂತಿಮ ದರ್ಶನ ಪಡೆಯಲಿರುವ ಗಣ್ಯರು
ಪ್ರಧಾನಿ ಮೋದಿ ಸೇರಿದಂತೆ ಅನೇಕ ಗಣ್ಯರು ಸೋಮವಾರ ಗೋವಾಕ್ಕೆ ಆಗಮಿಸಿ ಪರಿಕ್ಕರ್ ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆದು ಗೌರವ ನಮನ ಸಲ್ಲಿಸುವ ನಿರೀಕ್ಷೆ ಇದೆ. ಭಾನುವಾರ ಗೋವಾದಲ್ಲಿಯೇ ಇದ್ದ ಕೇಂದ್ರ ಸಚಿವ ನಿತಿನ್ ಗಡ್ಕರಿ ಪರಿಕ್ಕರ್ ನಿಧನದ ಸುದ್ದಿ ತಿಳಿಯುತ್ತಿದ್ದಂತೆ ಅವರ ಪಾರ್ಥಿವ ಶರೀರದ ದರ್ಶನ ಪಡೆದು ಗೌರವ ನಮನ ಸಲ್ಲಿಸಿದ್ದಾರೆ.
Goa Chief Minister Manohar Parrikar passes away