ಕಲಬುರಗಿ: ಮೋದಿಯವರು ಮೊದಲು ತಾನು ಪ್ರಧಾನಮಂತ್ರಿ ಅಲ್ಲ, ಪ್ರಧಾನ ಸೇವಕ ಅಂತಿದ್ದರು, ಈಗ ಚೌಕಿದಾರ್ ಎನ್ನುತ್ತಿದ್ದಾರೆ. ಇದು ಮೋದಿಯವರ ಚುನಾವಣಾ ಗಿಮಿಕ್ ಎಂದು ಕಾಂಗ್ರೆಸ್ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ವಾಗ್ದಾಳಿ ನಡೆಸಿದ್ದಾರೆ.
ಈ ಚೌಕಿದಾರ ನ ಕಥೆಯೇನು ಎಂಬುದು ದೇಶದ ಜನರಿಗೆ ತಿಳಿದಿದೆ. ದೇಶದ ಚೌಕಿದಾರ ಎನ್ನುತ್ತಾ ಪ್ರಧಾನಿ ಮೋದಿ ದೇಶದಲ್ಲಿ ಆಗುವ ದೊಡ್ಡ ಹಗರಣಗಳಿಗೆ ರಕ್ಷಣೆ ಕೊಡುತ್ತಿದ್ದಾರೆ. ದೇಶದ ಸಂಪತ್ತು ರಕ್ಷಣೆ ಮಾಡುವುದು ಬಿಟ್ಟು ಚೌಕಿದಾರ ಬೇರೆಯವರಿಗೆ ದುಡ್ಡು ಮಾಡಿ ಕೊಡುತ್ತಿದ್ದಾರೆ. ರಫೇಲ್ ಡೀಲ್, ದೊಡ್ಡ ದೊಡ್ಡ ಶ್ರೀಮಂತರು, ಕಂಪನಿಗಳ ಸಾಲ ಮನ್ನಾ ಮಾಡುತ್ತಾ, ಬಡ ಜನರ, ರೈತರ ದುಡ್ಡನ್ನು ಲೂಟಿ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ರೈತರ ಸಾಲಮನ್ನಾ ಮಾಡಿ ಎಂದು ನಾವು ಮನವಿ ಮಾಡಿದರೆ ಆಗಲ್ಲ ಎಂದು ಹೇಳಿ, ಈಗ ಚುನಾವಣೆ ಬಂತೆಂದು, ಎರಡೆರಡು ಸಾವಿರ ರೂ. ಮೊದಲ ಕಂತು ಬಿಡುಗಡೆ ಮಾಡುತ್ತಿದ್ದಾರೆ. ಈ ಮೂಲಕ ದೇಶದ ಒಬ್ಬ ರೈತನಿಗೆ ದಿನಕ್ಕೆ 16.40 ರೂ. ಕೊಟ್ಟು ದೇಶದ ಅಭಿವೃದ್ಧಿ ಮಾಡುತ್ತೇನೆ ಎಂದು ಹೇಳಿ ಮೋದಿ ದೇಶದ ದಿಕ್ಕು ತಪ್ಪಿಸುತ್ತಿದ್ದಾರೆ. ಎಂದು ಕಿಡಿಕಾರಿದರು.
ಈ ಚೌಕಿದಾರ ಸಾವಿರಾರು ಕೋಟಿ ರೂ. ಬೇರೆಯವರಿಗೆ ಲಾಭ ಮಾಡಿ ಕೊಡುತ್ತಿದ್ದಾರೆ. ಜನರ ದುಡ್ಡು ಕದ್ದು ಬೇರೆಯವರಿಗೆ ಹಂಚುತ್ತಿದ್ದಾರೆ. ಹೀಗಾಗಿ ‘ಚೌಕಿದಾರ್ ಚೋರ್ ಹೈ’ ಅಂತಾ ನಾವು ಹೇಳಿದ್ದೇವೆ.