ಬೆಂಗಳೂರು, ಮಾ.16- 2019ರ ಲೋಕಸಭೆ ಚುನಾವಣೆಗೆ ಸಂಬಂಧಿಸಿದಂತೆ ಮಾಧ್ಯಮ ಪ್ರತಿನಿಧಿಗಳಿಗೆ ಏರ್ಪಡಿಸಿದ್ದ ಕಾರ್ಯಾಗಾರದಲ್ಲಿ ಮಾತನಾಡಿದ ರಾಜ್ಯ ಮುಖ್ಯ ಚುನಾವಣಾಧಿಕಾರಿ ಸಂಜೀವ್‍ಕುಮಾರ್ ಅವರು, ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ ಮಹಾಚುನಾವಣೆ ನಡೆಯುತ್ತಿರುವುದರಿಂದ ಮತದಾರರಲ್ಲಿ ಜಾಗೃತಿ ಮೂಡಿಸಬೇಕಿದೆ.ಮತದಾರರ ಪಟ್ಟಿಯಲ್ಲಿ ಹೆಸರು ಸೇರ್ಪಡೆ, ವಿಶೇಷ ಚೇತನರಿಗೆ ಸೌಲಭ್ಯ, ಮತಯಂತ್ರ, ವಿವಿಪ್ಯಾಟ್ ಸೇರಿದಂತೆ ಎಲ್ಲಾ ವ್ಯವಸ್ಥೆ ಬಗ್ಗೆ ಮಾಹಿತಿ ನೀಡುವುದು ಹಾಗೂ ಯಾವುದೇ ರೀತಿಯ ಫೇಕ್ ನ್ಯೂಸ್‍ಗಳನ್ನು ಹರಡಬಾರದು ಎಂದರು.
ವಿದ್ಯುನ್ಮಾನ ಮತಯಂತ್ರ ಹಾಗೂ ವಿವಿಪ್ಯಾಟ್‍ಗಳ ದುರ್ಬಳಕೆಗೆ ಅವಕಾಶವಿಲ್ಲ, ಮಾದರಿ ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ ಮಾಧ್ಯಮಗಳು ಸ್ವಯಂ ನಿಯಂತ್ರಣಕ್ಕೊಳಗಾಗಬೇಕು, ಜನರಿಗೆ ಯಾವುದನ್ನು ಮಾಡಬಾರದು, ಯಾವುದನ್ನು ಮಾಡಬೇಕು ಎಂಬ ಬಗ್ಗೆ ಮಾಹಿತಿ ಒದಗಿಸಬೇಕು, ಕಾಸಿಗಾಗಿ ಸುದ್ದಿ ನಿಯಂತ್ರಣ ಕಷ್ಟ. ಆದರೆ, ಮುಕ್ತ ಮತ್ತು ನ್ಯಾಯ ಸಮ್ಮತ ಚುನಾವಣೆಗೆ ಮಾಧ್ಯಮಗಳು ಸಹಕಾರ ನೀಡಬೇಕು.ಜಾಹೀರಾತು ಪ್ರಕಟಣೆಗೆ ಸಂಬಂಧಿಸಿದಂತೆ ಜಿಲ್ಲಾ ಮತ್ತು ರಾಜ್ಯಮಟ್ಟದ ಸಮಿತಿಯಿಂದ ಪೂರ್ವ ಪ್ರಮಾಣೀಕರಣ ಪಡೆಯುವುದು ಸೂಕ್ತ ಎಂದು ಹೇಳಿದರು.
ಹೆಚ್ಚುವರಿ ಮುಖ್ಯ ಚುನಾವಣಾಧಿಕಾರಿ ಜಗದೀಶ್ ಮಾತನಾಡಿ, ಚುನಾವಣಾ ಆಯೋಗದ ನಿರ್ದೇಶನದಂತೆ ಈ ಕಾರ್ಯಾಗಾರವನ್ನು ಆಯೋಜಿಸಲಾಗಿದೆ. ಮಾದರಿ ನೀತಿಸಂಹಿತೆ ಜಾರಿ ನಂತರ ಯಾವುದೇ ಕಾಮಗಾರಿಗಳು ಪೂರ್ಣಗೊಂಡಿದ್ದು, ಸಾರ್ವಜನಿಕರ ಬಳಕೆಗೆ ಅವಕಾಶ ಕಲ್ಪಿಸಬೇಕಾದ ಸಂದರ್ಭದಲ್ಲಿ ಅದರ ಉದ್ಘಾಟನೆಯಂತಹ ಕಾರ್ಯಕ್ರಮದಲ್ಲಿ ಕೇವಲ ಅಧಿಕಾರಿಗಳು ಇರಬೇಕು.ಜನಪ್ರತಿನಿಧಿಗಳನ್ನು ಆಹ್ವಾನಿಸಬಾರದು, ಹೊಸದಾಗಿ ಹಣ ಮಂಜೂರು ಮಾಡುವುದು, ಫಲಾನುಭವಿಗಳ ಆಯ್ಕೆಯಂತಹ ಪ್ರಕ್ರಿಯೆಗಳನ್ನು ಮಾಡುವಂತಿಲ್ಲ, ಹೊಸ ಟೆಂಡರ್ ಪ್ರಕ್ರಿಯೆ, ಗುತ್ತಿಗೆದಾರರ ಕೆಲಸಗಳನ್ನು ಪ್ರಾರಂಭ ಮಾಡುವಂತಿಲ್ಲ. ಒಂದು ವೇಳೆ ಈಗಾಗಲೇ ಕೆಲಸ ಆರಂಭಿಸಿದ್ದರೆ ಅವುಗಳನ್ನು ಮುಂದುವರೆಸಬಹುದು. ಕೆಲಸ ಮುಗಿದಿದ್ದರೆ ಹಣ ಪಾವತಿ ಮಾಡಬಹುದು ಎಂದು ಮಾಹಿತಿ ಒದಗಿಸಿದರು.
ಪ್ರವಾಹ, ಬರ ನಿರ್ವಹಣೆ ಮತ್ತು ಪರಿಹಾರ ಕಾರ್ಯಗಳಿಗೆ ನೀತಿ ಸಂಹಿತೆ ಅನ್ವಯಿಸುವುದಿಲ್ಲ. ಬರ ಪೀಡಿತ ಜಿಲ್ಲೆಗಳ ಘೋಷಣೆಯನ್ನು ಹೊಸದಾಗಿ ಮಾಡಬೇಕಿದ್ದರೆ ಆಯೋಗದ ಅನುಮತಿ ಬೇಕು. ಈಗಾಗಲೇ ವರ್ಗಾವಣೆಯಾಗಿರುವ ಅಧಿಕಾರಿಗಳು ಕೆಲಸಕ್ಕೆ ರಿಪೋರ್ಟ್ ಮಾಡಿಕೊಳ್ಳದಿದ್ದರೆ ಸಂಬಂಧಿತ ಅಧಿಕಾರಿಗಳು ಹಾಗೂ ಆಯೋಗದ ಅನುಮತಿ ಪಡೆಯುವ ಅಗತ್ಯವಿದೆ ಎಂದು ಹೇಳಿದರು.
ಸಚಿವರು ಸರ್ಕಾರಿ ವಾಹನ ಬಳಸುವಂತಿಲ್ಲ, ಒಂದು ವೇಳೆ ಬಳಸಬೇಕಾಗಿದ್ದರೆ ಮುಖ್ಯಕಾರ್ಯದರ್ಶಿಗಳ ಗಮನಕ್ಕೆ ತರಬೇಕು ಎಂದು ತಿಳಿಸಿದ ಅವರು, ಸಾರ್ವಜನಿಕ ಮೈದಾನಗಳಲ್ಲಿ ಎಲ್ಲಾ ಪಕ್ಷಗಳಿಗೂ ಅವಕಾಶ ಮಾಡಿಕೊಡಬೇಕು.ಆದರೆ, ಧ್ವನಿವರ್ಧಕಗಳ ಬಳಕೆಗೆ ರಾತ್ರಿ 10ರಿಂದ ಬೆಳಗ್ಗೆ 6ರವರೆಗೂ ಅನುಮತಿ ಇಲ್ಲ. ಸಭೆ, ಸಮಾರಂಭಗಳಿಗೆ ಅನುಮತಿ ಕಡ್ಡಾಯ ಎಂದು ವಿವರಿಸಿದರು.
ಮೆರವಣಿಗೆಗಳನ್ನು ಸಂಚಾರಕ್ಕೆ ತೊಂದರೆಯಾಗದಂತೆ ನಡೆಸಬೇಕು.ಮತದಾನ ದಿನಾಂಕದ 48 ಗಂಟೆ ಪೂರ್ವದಲ್ಲಿ ಜಾಹೀರಾತು ಪ್ರಕಟಿಸುವಂತಿಲ್ಲ.ಒಂದು ವೇಳೆ ಪ್ರಕಟಿಸಬೇಕಿದ್ದರೆ ಜಾಹೀರಾತುದಾರರ ವಿಳಾಸ ಇರಲೇಬೇಕು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಜಂಟಿ ಮುಖ್ಯ ಚುನಾವಣಾಧಿಕಾರಿ ಸೂರ್ಯಸೇನಾ, ಇ-ಗೌರನೆನ್ಸ್ ನಿರ್ದೇಶಕ ಡಾ.ಸುನೀಲ್ ಪನ್ವಾರ್ ಮತ್ತಿತರರು ಹಾಜರಿದ್ದರು.