ಜೆಡಿಎಸ್-ಕಾಂಗ್ರೇಸ್ ಜಂಟಿಯಾಗಿ ಚುನಾವಣಾ ಪ್ರಚಾರ

ಬೆಂಗಳೂರು, ಮಾ.16- ಪ್ರಸ್ತುತ ಲೋಕಸಭಾ ಚುನಾವಣೆಯಲ್ಲಿ ಹೆಚ್ಚು ಸ್ಥಾನ ಗೆಲ್ಲಬೇಕೆಂಬ ಉದ್ದೇಶದಿಂದ ಕಾಂಗ್ರೆಸ್ ಮತ್ತು ಜೆಡಿಎಸ್ ಜಂಟಿಯಾಗಿ ಚುನಾವಣಾ ಪ್ರಚಾರ ನಡೆಸಲು ತೀರ್ಮಾನಿಸಿದೆ.

ಜೆಡಿಎಸ್‍ನಿಂದ ಸ್ಪರ್ಧಿಸಿರುವ ಕ್ಷೇತ್ರಗಳಲ್ಲಿ ಕಾಂಗ್ರೆಸ್ ನಾಯಕರು ಪ್ರಚಾರ ಮಾಡಿದರೆ ಅದೇ ರೀತಿ ಕಾಂಗ್ರೆಸ್‍ನಿಂದ ಸ್ಪರ್ಧಿಸಿರುವ ಕ್ಷೇತ್ರಗಳಲ್ಲಿ ಜೆಡಿಎಸ್ ನಾಯಕರು ಪ್ರಚಾರ ಮಾಡಲಿದ್ದಾರೆ.

ಉಭಯ ಪಕ್ಷಗಳ ನಾಯಕರು ಅಭ್ಯರ್ಥಿಗಳ ಪರ ಲೋಕಸಭಾ ಕ್ಷೇತ್ರಗಳಲ್ಲಿ ಚುನಾವಣಾ ಪ್ರಚಾರ ಕೈಗೊಳ್ಳಲಿದ್ದಾರೆ.ಕಳೆದ ವಿಧಾನಸಭಾ ಹಾಗೂ ಲೋಕಸಭಾ ಉಪ ಚುನಾವಣೆಯಲ್ಲಿ ಮೈತ್ರಿ ಮಾಡಿಕೊಂಡು ಪ್ರಚಾರ ಮಾಡಿದ ಮಾದರಿಯಲ್ಲೇ ಈ ಬಾರಿ ಪ್ರಚಾರ ಮಾಡಲಾಗುವುದು.

ಕರಪತ್ರ, ಬ್ಯಾನರ್‍ಗಳಲ್ಲೂ ಉಭಯ ಪಕ್ಷಗಳ ನಾಯಕರ ಹೆಸರು ಮತ್ತು ಭಾವಚಿತ್ರಗಳು ಇರಲಿವೆ. ಈ ಕುರಿತು ಉಭಯ ನಾಯಕರ ಜತೆ ಒಂದು ಸುತ್ತಿನ ಮಾತುಕತೆ ನಡೆಸಲಾಗಿದೆ.

ಮುಂದಿನ ವಾರ ಜಂಟಿ ಪ್ರಚಾರದ ಬಗ್ಗೆ ಅಂತಿಮ ರೂಪುರೇಷೆಯನ್ನು ಸಿದ್ಧಪಡಿಸಲಾಗುವುದು.ಪಕ್ಷದ ಮುಖಂಡರು, ಸದಸ್ಯರು ಸಭೆ ಸೇರಿ ಚುನಾವಣಾ ಪ್ರಚಾರದ ಬಗ್ಗೆ ಅಂತಿಮ ನಿರ್ಧಾರ ಕೈಗೊಳ್ಳಲಿದ್ದಾರೆ.

ಒಟ್ಟಾರೆ ಬಿಜೆಪಿಯನ್ನು ಅಂತ್ಯಗೊಳಿಸಿ ಹೆಚ್ಚು ಸ್ಥಾನ ಪಡೆಯಲು ಮೈತ್ರಿ ಪಕ್ಷಗಳು ಜಂಟಿ ಪ್ರಚಾರ ಕೈಗೊಳ್ಳುತ್ತಿವೆ.

ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು, ಮುಖ್ಯಮಂತ್ರಿ ಕುಮಾರಸ್ವಾಮಿ, ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಘಟಾನುಘಟಿ ನಾಯಕರು ಮೈತ್ರಿ ಪಕ್ಷದ ಅಭ್ಯರ್ಥಿಗಳ ಪರ ಪ್ರಚಾರ ನಡೆಸಲಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ