ವಿಧಾನಸಭಾ ಕ್ಷೇತ್ರವೊಂದಕ್ಕೆ ಮೂರು ಚೆಕ್‍ಪೋಸ್ಟ್ ಮತ್ತು ಮೂರು ಪ್ಲೈಯಿಂಗ್ ಸ್ಕ್ವಾಡ್

ಬೆಂಗಳೂರು,ಮಾ.16- ವಿಧಾನಸಭಾ ಕ್ಷೇತ್ರವೊಂದಕ್ಕೆ ಮೂರು ಚೆಕ್‍ಪೋಸ್ಟ್ಗಳನ್ನು ನಿರ್ಮಿಸಿದ್ದು ಮತ್ತು ಮೂರು ಫ್ಲೈಯಿಂಗ್ ಸ್ಕ್ವಾಡ್‍ಗಳನ್ನು ನೇಮಿಸಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಟಿ.ಸುನೀಲ್‍ಕುಮಾರ್ ತಿಳಿಸಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿಂದು ಮಾತನಾಡುತ್ತಿದ್ದ ಅವರು, ಪೊಲೀಸ್ ಆಯುಕ್ತರ ವ್ಯಾಪ್ತಿಗೆ ಬೆಂಗಳೂರು ನಗರದ ಮೂರು ಲೋಕಸಭಾ ಕ್ಷೇತ್ರಗಳು, ಚಿಕ್ಕಬಳ್ಳಾಪುರ ಮತ್ತು ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಕೆಲವು ಮತಗಟ್ಟೆಗಳು ಬರುತ್ತವೆ ಎಂದು ವಿವರಿಸಿದರು.

ಎಲ್ಲಾ ವಿಭಾಗದ ಡಿಸಿಪಿಗಳನ್ನು ಚುನಾವಣಾ ಬಂದೋಬಸ್ತ್ ಮತ್ತು ಉಸ್ತುವಾರಿಗಳಾಗಿ ನೇಮಕ ಮಾಡಲಾಗಿದೆ. ಚುನಾವಣಾಧಿಕಾರಿಗಳ ಜೊತೆ ಡಿಸಿಪಿಗಳು ಸಹ ಕರ್ತವ್ಯ ನಿರ್ವಹಿಸಲಿದ್ದಾರೆ.

ಕೇಂದ್ರ ಮೀಸಲು ಪಡೆ ತುಕಡಿ ಈಗಾಗಲೇ ಬಂದಿದ್ದು, ಎಲ್ಲ ಕಡೆ ಪಥಸಂಚಲನ ನಡೆಸಲಿವೆ.

ನಗರದಾದ್ಯಂತ 8 ಸಾವಿರ ಮಂದಿ ರೌಡಿಗಳಿದ್ದು, ಅವರೆಲ್ಲರನ್ನು ಠಾಣೆಗೆ ಕರೆಸಿ ಮುಚ್ಚಳಿಕೆ ಬರೆಸಿಕೊಂಡು ಎಚ್ಚರಿಕೆ ನೀಡಿ ಕಳುಹಿಸಲಾಗಿದೆ. ರೌಡಿ ಚಟುವಟಿಕೆ, ನ್ಯಾಯಾಲಯದ ವಾರಂಟ್ ಇದ್ದರೂ ತಲೆಮರೆಸಿಕೊಂಡಿರುವ ಹಾಗೂ ಹಳೇ ಆರೋಪಿಗಳ ಬಗ್ಗೆ ಕ್ರಮ ಕೈಗೊಳ್ಳುವ ಅಧಿಕಾರವನ್ನು ಡಿಸಿಪಿಗಳಿಗೆ ನೀಡಲಾಗಿದೆ.

ನಗರದಲ್ಲಿ 7900 ಶಸ್ತ್ರಾಸ್ತ್ರಗಳಿದ್ದು, ಈಗಾಗಲೇ 2000 ಶಸ್ತ್ರಾಸ್ತ್ರಗಳನ್ನು ಜಮಾ ಮಾಡಲಾಗಿದೆ.

ನಗರದಾದ್ಯಂತ ಶಾಂತಿಯುತ ಹಾಗೂ ಮುಕ್ತ ಮತದಾನಕ್ಕೆ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ ಎಂದು ಸುನೀಲ್‍ಕುಮಾರ್ ಅವರು ತಿಳಿಸಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ