ನವದೆಹಲಿ: ಭಾರತೀಯ ಸೇನೆ ಮತ್ತೊಂದು ಸರ್ಜಿಕಲ್ ಸ್ಟ್ರೈಕ್ ಪೂರ್ಣಗೊಳಿಸಿದೆ. ಭಾರತ ಹಗೌ ಮ್ಯಾನ್ಮಾರ್ ಸೇನೆಯು ಜಂಟಿಯಾಗಿ ಕಾರ್ಯಾಚರಣೆ ನಡೆಸಿ ಮಿಜೋರಾಂ ಗಡಿ ಪ್ರದೇಶದಲ್ಲಿ ನಿರ್ಮಾಣವಾಗಿದ್ದ 12ಕ್ಕೂ ಹೆಚ್ಚು ಉಗ್ರರ ನೆಲೆಗಳನ್ನು ಧ್ವಂಸಗೊಳಿಸಿವೆ.
ಈ ಸೇನಾ ಕಾರ್ಯಾಚರಣೆಯನ್ನು ಮೂರನೇ ಸರ್ಜಿಕಲ್ ಸ್ಟ್ರೈಕ್ ಎಂದೇ ಕರೆಯಲಾಗುತ್ತಿದೆ. ಈ ಕಾರ್ಯಾಚರಣೆ ಫೆ. 17ರಿಂದ ಮಾ.2ರ ವರೆಗೆ ನಡೆದಿದ್ದು, ಈಶಾನ್ಯ ರಾಜ್ಯಗಳ ಬೃಹತ್ ಮೂಲಸೌಕರ್ಯ ಯೋಜನೆಗಳಿಗೆ ಈ ಉಗ್ರರಿಂದ ಆತಂಕವಿದೆ ಎಂಬ ಗುಪ್ತಚರ ಮೂಲಗಳ ಮಾಹಿತಿಯ ಮೇರೆಗೆ ಈ ದಾಳಿ ನಡೆಸಲಾಗಿತ್ತು. ಈ ಮೂಲಕ ಭಾರತೀಯ ಸೇನೆ ಯಶಸ್ವಿಯಾಗಿ ಮೂರನೇ ಸರ್ಜಿಕಲ್ ಸ್ಟ್ರೈಕ್ ಪೂರ್ಣಗೊಳಿಸಿದೆ.
ಮ್ಯಾನ್ಮಾರ್ ನಲ್ಲಿ ತಲೆ ಎತ್ತಿದ್ದ ಅರಾಕನ್ ಆರ್ಮಿ ಉಗ್ರರ ನೆಲೆಗಳನ್ನು ನಾಶ ಪಡಿಸಲಾಗಿದೆ. ಅರಾಕನ್ ಆರ್ಮಿಗೆ ಕಚಿನ್ ಇಂಡಿಪೆಂಡೆನ್ಸ್ ಆರ್ಮಿ(ಕೆಐಎ) ಬೆಂಬಲ ನೀಡಿತ್ತು. ಈ ಎರಡು ಉಗ್ರ ಸಂಘಟನೆಗಳು ಮ್ಯಾನ್ಮರ್ ನಲ್ಲಿ ವಿಧ್ವಸಂಕ ಕೃತ್ಯಗಳನ್ನು ನಡೆಸುತ್ತಿದ್ದವು.
ಅರಾಕನ್ ಸಂಘಟನೆ ಭಾರತದ ಕೇಂದ್ರ ಸರ್ಕಾರ ಪೂರ್ವ ರಾಷ್ಟ್ರಗಳ ಅಭಿವೃದ್ಧಿಗೆ ಜಾರಿ ಮಾಡಿದ್ದ ಮೆಗಾ ಕಲಾಡನ್ ಯೋಜನೆಗೆ ವಿರೋಧ ವ್ಯಕ್ತಪಡಿಸಿತ್ತು.
ಕೋಲ್ಕತ್ತಾದಿಂದ ಮಿಜೋರಾಂವರೆಗೂ ಉತ್ತಮ ಸಾರಿಗೆ, ಸಂಪರ್ಕದ ಅಭಿವೃದ್ಧಿಯ ಯೋಜನೆ ಆಗಿದೆ. ಭಾರತ ಯೋಜನೆಯನ್ನು ತಡೆಯಲು ಅರಾಕನ್ ಉಗ್ರರು ದೇಶದೊಳಗೆ ನುಸುಳಲು ಹುನ್ನಾರ ನಡೆಸುತ್ತಿದ್ದಾರೆ ಎನ್ನುವ ಮಾಹಿತಿಯನ್ನು ಆಧಾರಿಸಿ ಭಾರತ ಈ ಕಾರ್ಯಾಚರಣೆಯನ್ನು ನಡೆಸಿದೆ. ಚೀನಾದ ಗಡಿ ಪ್ರದೇಶದಿಂದ ಭಾರತಕ್ಕೆ ನುಸುಳಲು ಉಗ್ರರು ಸ್ಕೆಚ್ ರೂಪಿಸಿದ್ದರು. ಈ ಬಗ್ಗೆ ಭಾರತದ ಗುಪ್ತಚರ ಇಲಾಖೆಗೆ ಖಚಿತ ಲಭ್ಯವಾಗಿತ್ತು.
ಕಾರ್ಯಾಚರಣೆಯ ಮೊದಲ ಭಾಗವಾಗಿ ಮಿಜೋರಾಂ ಗಡಿ ಪ್ರದೇಶದಲ್ಲಿ ಹೊಸದಾಗಿ ನಿರ್ಮಾಣ ಮಾಡಿದ್ದ ಉಗ್ರರ ನೆಲೆಗಳನ್ನು ನಾಶ ಪಡಿಸಲಾಗಿದೆ. ಬಳಿಕ ನಾಗಾ ಉಗ್ರರ ಕೇಂದ್ರಗಳನ್ನು ಧ್ವಂಸ ಮಾಡಲಾಗಿದೆ. ಅರುಣಾಚಲ ಪ್ರದೇಶದಿಂದ 1 ಸಾವಿರ ಕಿಮೀ ದೂರದಲ್ಲಿದ್ದ ಉಗ್ರರ ಕೇಂದ್ರಗಳನ್ನು ನಾಶ ಪಡಿಸಲಾಗಿದೆ. 2 ವಾರದ ಕಾಲ ನಡೆದ ಈ ಕಾರ್ಯಾಚರಣೆ ಮಾರ್ಚ್ 2 ರಂದು ಅಂತ್ಯವಾಗಿದೆ.
ಭಾರತ ಸೇನೆಯ ವಿಶೇಷ ದಳಗಳು, ಅಸ್ಸಾಂ ರೈಫಲ್ಸ್ ಹಾಗೂ ಮ್ಯಾನ್ಮಾರ್ ಸೇನೆಯನ್ನು ಬಳಕೆ ಮಾಡಲಾಗಿದೆ. ಕಾರ್ಯಾಚರಣೆಗೆ ಹೆಲಿಕಾಪ್ಟರ್, ಡ್ರೋನ್ ಮತ್ತು ಕಣ್ಗಾವಲು ಸಾಧನಗಳನ್ನು ಕೂಡ ಬಳಕೆ ಮಾಡಲಾಗಿದೆ. ಕಾರ್ಯಾಚರಣೆಯಲ್ಲಿ 12ಕ್ಕೂ ಹೆಚ್ಚು ಉಗ್ರರ ಅಡಗುತಾಣಗಳು ನಾಶವಾಗಿರುವುದು ಖಚಿತವಾಗಿದೆ.
Surgical Strike 3: Indian army carried out mega strikes along Myanmar border