ಬೆಂಗಳೂರು, ಮಾ.17- ಮಳೆ ಬಿದ್ದ ಸಂದರ್ಭದಲ್ಲಿ ನಿಯಂತ್ರಣ ಕೊಠಡಿಯಲ್ಲಿ ಹಾಜರಿರದ ಅಧಿಕಾರಿಗಳನ್ನು ಅಮಾನತುಗೊಳಿಸುವಂತೆ ಬಿಬಿಎಂಪಿ ಆಡಳಿತ ಪಕ್ಷದ ನಾಯಕ ಎಂ.ಶಿವರಾಜ್ ಅವರು ಆಯುಕ್ತ ಮಂಜುನಾಥ್ ಪ್ರಸಾದ್ ಅವರಿಗೆ ಮನವಿ ಮಾಡಿಕೊಂಡಿದ್ದಾರೆ.
ನಿನ್ನೆ ಸಂಜೆ ಬಿದ್ದ ಭಾರೀ ಮಳೆ ಸಂದರ್ಭದಲ್ಲಿ ಶಿವರಾಜ್ ಅವರು ಪಶ್ಚಿಮ ವಲಯದ ನಿಯಂತ್ರಣ ಕೊಠಡಿಗೆ ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಈ ಸಂದರ್ಭದಲ್ಲಿ ನಿಯಂತ್ರಣ ಕೊಠಡಿಯಲ್ಲಿ ಹಾಜರಿರಬೇಕಾದ ಅಧಿಕಾರಿಗಳು ಗೈರು ಹಾಜರಾಗಿದ್ದರು.
ತಕ್ಷಣ ತಾವೇ ನಿಯಂತ್ರಣ ಕೊಠಡಿಗೆ ಬಂದ ಸಾರ್ವಜನಿಕರ ಕರೆಯನ್ನು ಸ್ವೀಕರಿಸಿ ಪರಿಹಾರ ಸೂಚಿಸಿದರು.
ಅಗತ್ಯ ಸಮಯದಲ್ಲಿ ನಿಯಂತ್ರಣ ಕೊಠಡಿಯಲ್ಲಿ ಅಧಿಕಾರಿಗಳು ಹಾಜರಿರಲಿಲ್ಲ. ಕೂಡಲೇ ಅವರ ವಿರುದ್ಧ ಶಿಸ್ತುಕ್ರಮ ಕೈಗೊಳ್ಳುವಂತೆ ನೋಂದಣಿ ಪುಸ್ತಕದಲ್ಲಿ ಪಶ್ಚಿಮ ವಲಯದ ಜಂಟಿ ಆಯುಕ್ತರಿಗೆ ಶಿವರಾಜ್ ಸೂಚನೆ ನೀಡಿದರು.
ನಂತರ ಮಾತನಾಡಿದ ಅವರು, ಮಳೆ ಬಿದ್ದ ಸಂದರ್ಭದಲ್ಲಿ ನಿಯಂತ್ರಣ ಕೊಠಡಿಗಳಲ್ಲಿ ಅಧಿಕಾರಿಗಳು ಹಾಜರಿರಲೇಬೇಕು ಎಂದು ಕಡ್ಡಾಯ ಮಾಡಲಾಗಿದೆ. ಆದರೂ ಕೆಲವು ಅಧಿಕಾರಿಗಳು ಶಿಸ್ತುಬದ್ಧ ಕಾರ್ಯನಿರ್ವಹಣೆ ಮಾಡುವಲ್ಲಿ ವಿಫಲರಾಗಿದ್ದಾರೆ. ಹೀಗಾಗಿ ಕಂಟ್ರೋಲ್ ರೂಂನಲ್ಲಿ ಹಾಜರಿರದ ಇಬ್ಬರು ಅಧಿಕಾರಿಗಳನ್ನು ಅಮಾನತುಗೊಳಿಸುವಂತೆ ಆಯುಕ್ತ ಮಂಜುನಾಥ್ ಪ್ರಸಾದ್ ಅವರಿಗೆ ಮನವಿ ಮಾಡಿದ್ದೇನೆ ಎಂದರು.