ನವದೆಹಲಿ: ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಹಾಗೂ ಉತ್ತರಪ್ರದೇಶ ಪೂರ್ವ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಭೂಹಗರಣದಲ್ಲಿ ಪಾಲ್ಗೊಂಡಿದ್ದಾರೆ. ರಾಬರ್ಟ್ ವಾದ್ರಾ ಮಾಡಿರುವ ಹಗರಣಗಳಿಗೆ ರಾಹುಲ್ ಮತ್ತವರ ಕುಟುಂಬ ಜೊತೆಯಾಗಿ ನಿಂತಿದೆ ಎಂದು ಬಿಜೆಪಿ ಹಿರಿಯ ನಾಯಕರು ಆರೋಪ ಮಾಡಿದ್ದಾರೆ.
ಕೇಂದ್ರ ಸಚಿವ ರವಿಶಂಕರ್ ಪ್ರಸಾದ್ ಹಾಗೂ ಸಚಿವೆ ಸ್ಮೃತಿ ಇರಾನಿ ಗಾಂಧಿ ಕುಟುಂಬ ಬಳಿಯಿರುವ ಭೂಮಿ ಬಗ್ಗೆ ಪ್ರಶ್ನೆ ಮಾಡಿದ್ದಾರೆ. ರಾಹುಲ್ ಅಕ್ರಮವಾಗಿ ಭೂಮಿ ಖರೀದಿಸಿ, ತಂಗಿಗೆ ಉಡುಗೊರೆಯಾಗಿ ನೀಡಿದ್ದಾರೆ ಎಂದು ಆರೋಪಿಸಿದ್ದಾರೆ.
ಜಾರಿ ನಿರ್ದೇಶನಾಲಯದಿಂದ ತನಿಖೆಗೆ ಒಳಪಟ್ಟ ಹೆಚ್ಎಲ್ ಪಾಹ್ವಾ, ಸಂಜಯ್ ಬಂಡಾರಿ, ಸಿಸಿ ಥಂಪಿ, ಗಾಂಧಿ ಕುಟುಂಬದ ಭೂಹಗರಣದಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ ಎಂದರು. ಕೇವಲ 1.5 ಲಕ್ಷಕ್ಕೆ ಕೊಂಡಿದ್ದ ಭೂಮಿಯನ್ನು 3 ವರ್ಷಕ್ಕೆ 84.15 ಲಕ್ಷಕ್ಕೆ ಮಾರಾಟ ಮಾಡಿದ್ದು ಹೇಗೆ? ಎಂದು ಪ್ರಶ್ನಿಸಿದ್ದಾರೆ.
ರಫೇಲ್ ಡೀಲ್ನಿಂದಾಗಿ ರಾಹುಲ್ಗೆ ನಷ್ಟವಾದಂತಿದೆ. ಸಂಜಯ್ ಭಂಡಾರಿ ಏರ್ಬಸ್ ಕಂಪನಿಯ ಮಧ್ಯವರ್ತಿಯಾಗಿದ್ದ. ಇದೇ ಕಂಪನಿ ಏರ್ಬಸ್ ಏರೋ ಫೈಟರ್ಗಳನ್ನು ಪೂರೈಸುವುದಾಗಿ ಟೆಂಡರ್ನಲ್ಲಿ ಪಾಲ್ಗೊಂಡಿತ್ತು ಎಂದರು.
ಈ ಮೊದಲು ರಾಹುಲ್ ಹಾಗೂ ಪ್ರಿಯಾಂಕ ವಿರುದ್ಧ ಕಿಡಿ ಕಾರಿದ್ದ ಸಚಿವೆ ಸ್ಮೃತಿ ಇರಾನಿ, ಭೂಹಗರಣದಲ್ಲಿ ವಾದ್ರಾ ಹೆಸರಿರಬಹುದು, ಆದರೆ ನಿಜವಾಗಿ ಅಲ್ಲಿದ್ದದ್ದು ರಾಹುಲ್ ಎಂದಿದ್ದರು.
ಬಿಜೆಪಿ ನಾಯಕರ ಈ ಆರೋಪಗಳು ಆಧಾರ ರಹಿತ. ಇದೆಲ್ಲವೂ ಪ್ರಧಾನಿ ಮೋದಿ ಹಾಗೂ ಬೆಂಬಲಿಗರು ಮಾಡುತ್ತಿರುವ ನಿರಾಧಾರ ಆರೋಪಗಳಾಗಿವೆ ಎಂದು ಕಾಂಗ್ರೆಸ್ ನಾಯಕ , ವಕ್ತಾರ ರಣದೀಪ್ ಸುರ್ಜೇವಾಲ ತಿಳಿಸಿದ್ದಾರೆ.
BJP targets Rahul, Priyanka over land deals