ವೆಲ್ಲಿಂಗ್ಟನ್ : ನ್ಯೂಜಿಲೆಂಡ್ ಕ್ರೈಸ್ಟ್ಚರ್ಚ್ನ ಎರಡು ಮಸೀದಿಗಳ ಮೇಲೆ ಶುಕ್ರವಾರ ಮಧ್ಯಾಹ್ನ (ಸ್ಥಳೀಯ ಕಾಲಮಾನ) ನಡೆದ ಶೂಟೌಟ್ನಲ್ಲಿ 40 ಮಂದಿ ಮೃತಪಟ್ಟಿದ್ದಾರೆ. ದಾಳಿ ವೇಳೆ ಸ್ಥಳದಲ್ಲಿದ್ದ ಬಾಂಗ್ಲಾ ಕ್ರಿಕೆಟ್ ತಂಡದ ಆಟಗಾರರು ಓಡಿ ಪ್ರಾಣ ಉಳಿಸಿಕೊಂಡಿದ್ದಾರೆ.
ಆಸ್ಟ್ರೇಲಿಯಾ ಮೂಲದ ವ್ಯಕ್ತಿ ಈ ದಾಳಿ ನಡೆಸಿದ್ದಾನೆ. ಈತ ಸೇರಿ ಮೂವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಮಸೀದಿಗೆ ಪ್ರಾರ್ಥನೆಗೆ ಬಂದ ಸಂದರ್ಭದಲ್ಲಿ ಈ ವ್ಯಕ್ತಿ ಗುಂಡಿನ ದಾಳಿ ನಡೆಸಿದ್ದಾನೆ. ಈ ಕೃತ್ಯವೆಸಗುವುದಕ್ಕೋಸ್ಕರವೇ ಆತ ತರಬೇತಿ ಪಡೆದು ನ್ಯೂಜಿಲೆಂಡ್ಗೆ ಬಂದಿದ್ದ.
ಅಲ್ ನೂರ್ ಮಸೀದಿಯಲ್ಲಿ 30 ಮಂದಿ ಹಾಗೂ ಲಿನ್ವೂಡ್ ಮಸೀದಿಯಲ್ಲಿ 10 ಜನರು ಮೃತಪಟ್ಟಿದ್ದಾರೆ. ಈ ಕೃತ್ಯವನ್ನು ಖಂಡಿಸಿರುವ ನ್ಯೂಜಿಲೆಂಡ್ ಪ್ರಧಾನಿ ಜಸಿಂಡಾ ಆರ್ಡನ್, “ಈ ದಾಳಿಯನ್ನು ನಾವು ಖಂಡಿಸುತ್ತೇವೆ. ದಾಳಿಯಲ್ಲಿ ಕನಿಷ್ಠ 40 ಮಂದಿ ಮೃತಪಟ್ಟಿದ್ದಾರೆ. ಇದನ್ನು ಉಗ್ರರ ದಾಳಿ ಎಂದು ನಾವು ಕರೆಯುತ್ತೇವೆ” ಎಂದಿದ್ದಾರೆ.
ಹ್ಯಾಗ್ಲೆ ಪಾರ್ಕ್ ಸಮೀಪ ಇದ್ದ ಮಸೀದಿ ಬಳಿ ಬಾಂಗ್ಲಾ ಕ್ರಿಕೆಟ್ ತಂಡ ತೆರಳಿತ್ತು. ಗುಂಡಿನ ದಾಳಿ ನಡೆದ ನಂತರ ಎಲ್ಲ ಆಟಗಾರರು ಓಡಿ ಪ್ರಾಣ ಉಳಿಸಿಕೊಂಡಿದ್ದಾರೆ ಎಂದು ಬಾಂಗ್ಲಾ ದೇಶದ ಪತ್ರಕರ್ತ ಮೊಹ್ಮದ್ ಇಸ್ಲಾಮ್ ಟ್ವೀಟ್ ಮಾಡಿದ್ದಾರೆ. ದೇವರು ನಮ್ಮನ್ನು ರಕ್ಷಿಸಿದ್ದಾನೆ ಎಂದು ಆಟಗಾರರು ಟ್ವೀಟ್ ಮಾಡಿಕೊಂಡಿದ್ದಾರೆ.
ಸದ್ಯ ಪೊಲೀಸ್ ಅಧಿಕಾರಿಗಳು ತನಿಖೆ ಆರಂಭಿಸಿದ್ದಾರೆ. ಕ್ರಿಕೆಟ್ ಆಟಗಾರರನ್ನು ಗುರಿಯಾಗಿಸಿಕೊಂಡೇ ಈ ದಾಳಿ ನಡೆದಿದೆಯೇ ಎನ್ನುವ ಅನುಮಾನ ಕಾಡಿದೆ. ದಾಳಿಗೆ ಸಾಕಷ್ಟು ಮಂದಿ ಖಂಡನೆ ವ್ಯಕ್ತವಾಗಿದೆ.
ನ್ಯೂಜಿಲೆಂಡ್ ಕ್ರೈಸ್ಟ್ಚರ್ಚ್ನ ಮಸೀದಿ ಮೇಲೆ ನಡೆದ ಗುಂಡಿನ ದಾಳಿ ಹಿನ್ನೆಲೆಯಲ್ಲಿ ನ್ಯೂಜಿಲೆಂಡ್-ಬಾಂಗ್ಲದೇಶ ನಡುವೆ ಇಂದು ನಡೆಯಬೇಕಿದ್ದ ಮೂರನೇ ಟೆಸ್ಟ್ ಪಂದ್ಯವನ್ನು ರದ್ದು ಮಾಡಲಾಗಿದೆ. ಪಂದ್ಯ ರದ್ದಾದ ಬಗ್ಗೆ ಟ್ವೀಟ್ ಮಾಡಿರುವ ನ್ಯೂಜಿಲೆಂಡ್ ತಂಡ, “ನ್ಯೂಜಿಲೆಂಡ್ ಹಾಗೂ ಬಾಂಗ್ಲಾ ನಡುವೆ ನಡೆಯಬೇಕಿದ್ದ ಮೂರನೇ ಪಂದ್ಯವನ್ನು ರದ್ದು ಮಾಡಲಾಗಿದೆ. ಎರಡೂ ರಾಷ್ಟ್ರಗಳು ಒಟ್ಟಾಗಿ ಈ ನಿರ್ಧಾರಕ್ಕೆ ಬಂದಿವೆ. ಈ ದಾಳಿಯಿಂದ ಹಾನಿಗೊಳಗಾದವರ ಬಗ್ಗೆ ನಾವು ಮರುಕ ವ್ಯಕ್ತಪಡಿಸುತ್ತೇವೆ,” ಎಂದಿದೆ.