ಬೆಂಗಳೂರು,ಮಾ.14-ಮಂಡ್ಯದಲ್ಲಿ ಬಿಜೆಪಿಗೆ ಹೇಳಿಕೊಳ್ಳುವಂತಹ ಸಂಘಟನೆ ಇಲ್ಲ. ಇತ್ತೀಚೆಗೆ ನಡೆದ ಉಪಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿ 2 ಲಕ್ಷಕ್ಕೂ ಹೆಚ್ಚು ಅಧಿಕ ಮತಗಳನ್ನು ಪಡೆದಿದ್ದೆ ದೊಡ್ಡ ಸಾಧನೆ.
ಈಗ ದೋಸ್ತಿ ಸರ್ಕಾರಕ್ಕೆ ಮಗ್ಗಲು ಮುಳ್ಳಾಗಿ ಕಾಣುತ್ತಿರುವ ಚಿತ್ರನಟ ದಿವಂಗತ ಅಂಬರೀಶ್ ಅವರ ಪತ್ನಿ ಸುಮಲತಾ ಅವರು ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯುವುದು ಬಹುತೇಕ ಖಚಿತವಾಗಿದೆ.
ಕಾಂಗ್ರೆಸ್ ಟಿಕೆಟ್ ಸಿಗಬಹುದೆಂಬ ನಿರೀಕ್ಷೆ ಹುಸಿಯಾಗಿರುವುದರಿಂದ ಸುಮಲತಾ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಲಿದ್ದಾರೆ. ಅವರಿಗೆ ಬಾಹ್ಯ ಬೆಂಬಲ ನೀಡುವ ಮೂಲಕ ಒಂದೇ ಕಲ್ಲಿನಲ್ಲಿ ಎರಡು ಹಕ್ಕಿ ಹೊಡೆಯಲು ಬಿಜೆಪಿ ರಣತಂತ್ರ ರೂಪಿಸಿದೆ.
ಅಭ್ಯರ್ಥಿ ಹಾಕಿ ಮುಖಭಂಗ ಅನುಭವಿಸುವ ಬದಲು ಸುಮಲತಾಗೆ ಬೆಂಬಲ ನೀಡಿದರೆ ಕುಮಾರಸ್ವಾಮಿ ಅವರನ್ನು ಚುನಾವಣೆಯಲ್ಲಿ ಕಟ್ಟಿ ಹಾಕಬಹುದು. ಮಂಡ್ಯದಲ್ಲಿ ಅಪ್ಪಿತಪ್ಪಿ ಫಲಿತಾಂಶ ಏರುಪೇರಾದರೆ ಸರ್ಕಾರದ ಮೇಲೂ ಪರಿಣಾಮ ಬೀರಿದರೆ ದೋಸ್ತಿ ಅಸ್ತಿತ್ವವೇ ಅಲುಗಾಡುತ್ತದೆ ಎಂಬ ಲೆಕ್ಕಾಚಾರದಲ್ಲಿ ಬಿಜೆಪಿ ಇದೆ.
ಕುಮಾರಸ್ವಾಮಿ ತಮ್ಮ ಪುತ್ರನನ್ನು ಗೆಲ್ಲಿಸಿಕೊಳ್ಳಲು ಮಂಡ್ಯ ಜಿಲ್ಲೆಗೆ ಹೆಚ್ಚು ಗಮನಹರಿಸಬೇಕಾಗುತ್ತದೆ.
ಸುಮಲತಾ ಸ್ಫರ್ಧಿಸಿದ್ದೇ ಆದಲ್ಲಿ ಜೆಡಿಎಸ್ಗೆ ಗೆಲುವು ಅಂದುಕೊಂಡಷ್ಟು ಸರಳವಾಗಿಲ್ಲ. ಅಂಬರೀಶ್ ಸಾವಿನ ಅನುಕಂಪದ ಲಾಭವನ್ನು ಪಡೆಯಲು ಸುಮಲತಾ ಯತ್ನಿಸುತ್ತಿದ್ದಾರೆ. ಈಗಾಗಲೇ ಬಿಜೆಪಿಯ ಕೆಲವು ನಾಯಕರನ್ನು ಭೇಟಿ ಮಾಡಿ ಬೆಂಬಲ ನೀಡುವಂತೆ ಮನವಿ ಮಾಡಿಕೊಂಡಿದ್ದಾರೆ.
ಮಂಡ್ಯದಿಂದ ಕಣಕ್ಕಿಳಿಯಬೇಕೆಂದು ನಿರ್ಧರಿಸಿದ್ದ ನಿವೃತ್ತ ಅಧಿಕಾರಿ ಸಿದ್ದರಾಮಯ್ಯಗೆ ಪಕ್ಷದಲ್ಲಿ ಬೇರೊಂದು ಸ್ಥಾನಮಾನ ನೀಡುವ ಬಗ್ಗೆ ಚಿಂತನೆ ನಡೆದಿದೆ.
ಮಂಡ್ಯದಲ್ಲಿರುವ ಬಿಜೆಪಿ ಕಾರ್ಯಕರ್ತರಿಗೆ ಸುಮಲತಾ ಅವರನ್ನು ಬೆಂಬಲಿಸುವಂತೆ ರಾಜ್ಯ ಘಟಕ ಸೂಚನೆ ಕೊಟ್ಟಿದೆ.
ಸುಮಲತಾ ಗೆದ್ದರೆ ರಾಜ್ಯ ರಾಜಕಾರಣದಲ್ಲಿ ಇದರ ಪರಿಣಾಮ ಬೀರುವುದರಲ್ಲಿ ಯಾವುದೇ ಅನುಮಾನವಿಲ್ಲ. ನಿಖಿಲ್ ಕುಮಾರಸ್ವಾಮಿ ಸ್ಪರ್ಧೆಗೆ ಮಂಡ್ಯ ಜಿಲ್ಲಾ ಕಾಂಗ್ರೆಸ್ನವರು ಕೂಡ ಮುನಿಸಿಕೊಂಡಿದ್ದಾರೆ. ಪರೋಕ್ಷವಾಗಿ ಸುಮಲತಾ ಅವರಿಗೆ ಬೆಂಬಲ ನೀಡುವ ಬಗ್ಗೆಯೂ ಚಿಂತನೆ ನಡೆದಿದೆ.
ಸುಮಲತಾ ಅವರನ್ನು ಬೆಂಬಲಿಸುವ ಬಗ್ಗೆ ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ, ಕೇಂದ್ರ ಮಾಜಿ ಸಚಿವ ಎಸ್.ಎಂ.ಕೃಷ್ಣ, ಮುಖಂಡರಾದ ಆರ್.ಅಶೋಕ್ ಸೇರಿದಂತೆ ಮತ್ತಿತರರು ಪ್ರಚಾರವನ್ನು ನಡೆಸಲಿದ್ದಾರೆ.
ಅದರಲ್ಲೂ ಎಸ್.ಎಂ.ಕೃಷ್ಣ ಮೂಲತಃ ಮಂಡ್ಯದವರಾಗಿದ್ದು, ಈಗಲೂ ಜಿಲ್ಲಾ ರಾಜಕಾರಣದ ಮೇಲೆ ಸಾಕಷ್ಟು ಹಿಡಿತ ಹೊಂದಿದ್ದಾರೆ. ಜಿಲ್ಲೆಯಲ್ಲಿ ಅವರು ಸುಮಲತಾ ಪರ ಸಕ್ರಿಯವಾಗಿ ಪ್ರಚಾರ ನಡೆಸಲಿದ್ದಾರೆ ಎಂದು ತಿಳಿದುಬಂದಿದೆ.