ಬೆಂಗಳೂರು, ಮಾ.12-ಚುನಾವಣಾ ಆಯೋಗ ರೂಪಿಸಿರುವ ಶಿ ವಿಷಲ್ ಮೊಬೈಲ್ ಅಪ್ಲಿಕೇಷನ್ ಮೂಲಕ ದೂರು ಸಲ್ಲಿಸಿದರೆ 100 ನಿಮಿಷಗಳೊಳಗಾಗಿ ಕ್ರಮಕೈಗೊಳ್ಳುವ ಕ್ಷಿಪ್ರ ವ್ಯವಸ್ಥೆಯನ್ನು ಚುನಾವಣಾ ಆಯೋಗ ರೂಪಿಸಿದೆ.
ಕಳೆದ ಬಾರಿ ಬೆಂಗಳೂರಿನ ಬಿಬಿಎಂಪಿ ವ್ಯಾಪ್ತಿಯ ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ ಪ್ರಾಯೋಗಿಕವಾಗಿ ಬಳಸಲಾಗಿದ್ದ ಈ ಮೊಬೈಲ್ ಅಪ್ಲಿಕೇಷನ್ನನ್ನು ಇಂದು ದೇಶಾದ್ಯಂತ ಅನುಷ್ಠಾನಕ್ಕೆ ತರಲಾಗುತ್ತಿದ್ದು, ಮಾ.18 ರಿಂದ ಇದು ಚಾಲ್ತಿಗೆ ಬರಲಿದೆ.
ಚುನಾವಣೆ ವೇಳೆ ಹಣ, ಸೀರೆ, ಕುಕ್ಕರ್, ಬಟ್ಟೆಗಳು ಸೇರಿದಂತೆ ಯಾವುದೇ ರೀತಿಯ ವಸ್ತುಗಳನ್ನು ಮತದಾರರಿಗೆ ಹಂಚಿಕೆ ಮಾಡಿದರೆ ಅಥವಾ ಫ್ಲೆಕ್ಸ್, ಬ್ಯಾನರ್ಗಳನ್ನು ಅನಧಿಕೃತವಾಗಿ ಅಳವಡಿಸುವುದು, ಇನ್ನೊಬ್ಬರ ಪ್ರಚಾರಕ್ಕೆ ಅಡ್ಡಿಪಡಿಸುವುದು, ವೈಷಮ್ಯದ ಹೇಳಿಕೆಗಳು, ಅಪಪ್ರಚಾರ, ವದಂತಿಗಳನ್ನು ಹರಡುವುದು ಸೇರಿದಂತೆ ಯಾವುದೇ ರೀತಿಯ ಚುನಾವಣಾ ಅಕ್ರಮಗಳು ನಡೆದರೂ ಸಿವಿಜಿಲ್ (ಸಿವಿಜಿಲ್) ಮೊಬೈಲ್ ಅಪ್ಲಿಕೇಷನ್ನಲ್ಲಿ ಪೋಟೋ, ವಿಡಿಯೋ ತೆಗೆದು ದೂರು ನೀಡಬಹುದಾಗಿದೆ.
ದೂರುದಾರರು ಬಯಸಿದರೆ ಅವರ ಹೆಸರಿನಲ್ಲಿ ದೂರು ನೋಂದಣಿ ಮಾಡಿಕೊಳ್ಳಲಾಗುವುದು, ಬೇಡ ಎಂದಾದರೆ, ಮಾಹಿತಿದಾರರ ಹೆಸರನ್ನು ಗೌಪ್ಯವಾಗಿಟ್ಟು ತಪ್ಪಿತಸ್ಥರ ವಿರುದ್ಧ ಮುಂದಿನ ಕ್ರಮಕೈಗೊಳ್ಳಲಾಗುವುದು.
ಸಿವಿಜಿಲ್ ಮೊಬೈಲ್ ಅಪ್ಲಿಕೇಷನ್ ಕಳೆದ ಬಾರಿ ವಿಧಾನಸಭೆ ಚುನಾವಣೆಯಲ್ಲಿ ಬೆಂಗಳೂರಿನಲ್ಲಿ ಪರಿಚಯಿಸಿದಾಗ ಜನರಿಗೆ ಹೆಚ್ಚಿನ ಮಾಹಿತಿ ಇರಲಿಲ್ಲ. ಆದಾಗ್ಯೂ 150 ದೂರುಗಳು ದಾಖಲಾಗಿದ್ದವು. ಇದು ಅತ್ಯಂತ ಆಧುನಿಕ ಮೊಬೈಲ್ ಅಪ್ಲಿಕೇಷನ್ ಆಗಿದ್ದು, ಅಕ್ರಮ ನಡೆಯುವ ಜಾಗದಲ್ಲಿ ನಿಂತು ಮೊಬೈಲ್ ಅಪ್ಲಿಕೇಷನ್ನಿಂದ ಪೋಟೋ ಅಥವಾ ವಿಡಿಯೋ ತೆಗೆದು ತಕ್ಷಣವೇ ರವಾನಿಸಬಹುದು.
ಈ ರೀತಿ ದಾಖಲಾಗುವ ದೂರುಗಳು ನೇರವಾಗಿ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಸ್ಥಾಪಿಸಲಾಗಿರುವ ದಿನದ 24 ಗಂಟೆ ಕೆಲಸ ಮಾಡುವ ಕಂಟ್ರೋಲ್ ರೂಂಗೆ ರವಾನೆಯಾಗುತ್ತವೆ. ಅಲ್ಲಿನ ಸಿಬ್ಬಂದಿಗಳು ದೂರು ಮತ್ತು ಮಾಹಿತಿಯನ್ನು ಅಕ್ರಮ ನಡೆದ ಸ್ಥಳದ ಸಮೀಪದಲ್ಲಿರುವ ವಿಚಕ್ಷಣ ದಳಕ್ಕೆ ರವಾನಿಸುತ್ತಾರೆ.
ಈಗಾಗಲೇ ರಾಜ್ಯಾದ್ಯಂತ 6600 ಕ್ಷೇತ್ರ ಘಟಕಗಳನ್ನು ಸ್ಥಾಪಿಸಲಾಗಿದ್ದು, ಆ ಘಟಕಗಳ ಸಿಬ್ಬಂದಿಗಳು 15 ನಿಮಿಷದಲ್ಲಿ ಸ್ಥಳಕ್ಕೆ ತಲುಪುತ್ತಾರೆ. ದೂರು ಅಥವಾ ಮಾಹಿತಿಯ ಸತ್ಯಾಸತ್ಯತೆಯ ಬಗ್ಗೆ ಕಂಟ್ರೋಲ್ ರೂಂಗೆ 30 ನಿಮಿಷದಲ್ಲಿ ವರದಿ ಮಾಡುತ್ತಾರೆ. ದೂರು ನೀಡಿದ 100 ನಿಮಿಷಗಳೊಳಗಾಗಿ ದೂರುದಾರರಿಗೆ ಚುನಾವಣಾ ಆಯೋಗ ತೆಗೆದುಕೊಂಡ ಕ್ರಮಗಳ ಕುರಿತು ಮಾಹಿತಿ ನೀಡಲಾಗುತ್ತದೆ ಎಂದು ಜಂಟಿ ಚುನಾವಣಾ ಆಯುಕ್ತ ಸೂರ್ಯಸೇನ್ ತಿಳಿಸಿದ್ದಾರೆ.
ಅಧಿಸೂಚನೆ ಜಾರಿಯಾಗಿ ಮೊದಲ ಹಂತದ ಚುನಾವಣೆಗೆ ನಾಮಪತ್ರ ಸಲ್ಲಿಕೆ ಆರಂಭವಾಗುವ ಮಾ.18 ರಿಂದ ಈ ಮೊಬೈಲ್ ಅಪ್ಲಿಕೇಷನ್ ಚಾಲನೆಗೊಳ್ಳಲಿದೆ. ಪ್ರಸ್ತುತ ಅದನ್ನು ಆಂಡ್ರಾಯ್ಡ್ನಿಂದ ಡೌನ್ಲೋಡ್ ಮಾಡಿಕೊಳ್ಳಲಾಗಿದೆ. ಮೊಬೈಲ್ ಅಪ್ಲಿಕೇಷನ್ನಲ್ಲಿ ಹಳೇ ಪೋಟೋ ಅಥವಾ ವಿಡಿಯೋ ಅಪ್ಲೋಡ್ ಮಾಡಲು ಸಾಧ್ಯವಿಲ್ಲ. ದೂರುದಾರರು ತೆಗೆದ ಪೋಟೋ ಅಥವಾ ವಿಡಿಯೋದ ಸ್ಥಳ ಜಿಯೋ ಟ್ಯಾಗ್, ಸಮಯ ಮತ್ತು ದಿನಾಂಕದ ಸ್ಪಷ್ಟ ವಿವರಣೆಗಳು ಕಂಟ್ರೋಲ್ ರೂಂಗೆ ಬ್ಯಾಕ್ ಎಂಡ್ನಲ್ಲಿ ಲಭ್ಯವಾಗಲಿದೆ. ಹೀಗಾಗಿ ಈ ಮಾಹಿತಿಗಳನ್ನು ಪ್ರಕರಣದ ವಿಚಾರಣೆ ವೇಳೆ ಪ್ರಮುಖ ಸಾಕ್ಯಗಳನ್ನು ಪರಿಗಣಿಸಲಾಗುತ್ತದೆ ಎಂದು ಅವರು ತಿಳಿಸಿದರು.
ಸುವಿಧಾ ಅಪ್ಲಿಕೇಷನ್ನನ್ನು ಕೂಡ ಚುನಾವಣಾ ಆಯೋಗ ಬಳಸುತ್ತಿದ್ದು, ಅಭ್ಯರ್ಥಿಗಳು ಸಲ್ಲಿಸುವ ಯಾವುದೇ ಅಫಿಡೆವಿಟ್ ಮತ್ತು ದಾಖಲೆಗಳನ್ನು ತಕ್ಷಣವೇ ಈ ಅಪ್ಲಿಕೇಷನ್ನಲ್ಲಿ ಅಪ್ಲೋಡ್ ಮಾಡಲಾಗುತ್ತದೆ. ಅದನ್ನು ಕ್ಷೇತ್ರದ ಜನರು ಪರಿಶೀಲನೆ ನಡೆಸಿ ಅಭ್ಯರ್ಥಿ ಸಲ್ಲಿಸಿರುವ ಮಾಹಿತಿ ತಪ್ಪು ಎಂದು ಕಂಡುಬಂದರೆ ಕೂಡಲೇ ಸ್ಥಳೀಯ ಚುನಾವಣಾಧಿಕಾರಿಗೆ ಕೌಂಟರ್ ಅಫಿಡೆವಿಟ್ನ್ನು ಸಲ್ಲಿಸಿ ಸ್ಪಷ್ಟ ಮಾಹಿತಿ ನೀಡಬಹುದಾಗಿದೆ ಎಂದು ಅವರು ತಿಳಿಸಿದ್ದಾರೆ.
ಈ ಬಾರಿಯ ಚುನಾವಣೆಯಲ್ಲಿ ಸಾಮಾಜಿಕ ಜಾಲತಾಣಗಳ ಮೇಲೆ ತೀವ್ರ ನಿಗಾ ವಹಿಸಲಾಗಿದೆ. ಸಾರ್ವಜನಿಕರು ಅಭ್ಯರ್ಥಿಯ ಪರವಾಗಿ ಮಾತನಾಡಲು ಯಾವುದೇ ಆಕ್ಷೇಪಣೆ ಇಲ್ಲ. ಆದರೆ ಅಪಪ್ರಚಾರ ಮಾಡುವುದು, ಅವಹೇಳನ ಮಾಡುವುದು, ಫೇಕ್ ನ್ಯೂಸ್, ಲಾಭಾಂಶಕ್ಕಾಗಿ ಪ್ರಚಾರ ಮಾಡುವುದು ಕಂಡುಬಂದರೆ ಆಯೋಗ ಕ್ರಮ ಜರುಗಿಸಲಿದೆ. ರಾಜಕೀಯ ಪಕ್ಷಗಳ ಖಾತೆಗಳು, ಫ್ಯಾನ್ಸ್ ಕ್ಲಬ್ಗಳ ಖಾತೆಗಳ ಮೇಲೆ ತೀವ್ರ ನಿಗಾ ಇಡಲಾಗುವುದು ಎಂದು ತಿಳಿಸಿದರು.