ಚುನಾವಣಾ ಪೂರ್ವ ಮೈತ್ರಿ ಏರುಪೇರಿನಿಂದ ಸಮ್ಮಿಶ್ರ ಸರ್ಕಾರಕ್ಕೆ ಧಕ್ಕೆಯಿಲ್ಲ: ಮಾಜಿ ಸಿಎಂ ಸಿದ್ದರಾಮಯ್ಯ

ನವದೆಹಲಿ, ಮಾ.11-ಲೋಕಸಭೆ ಚುನಾವಣಾ ಪೂರ್ವ ಮೈತ್ರಿ ಏರುಪೇರಿನಿಂದ ಸಮ್ಮಿಶ್ರ ಸರ್ಕಾರಕ್ಕೆ ಯಾವುದೇ ಧಕ್ಕೆಯಾಗುವುದಿಲ್ಲ ಎಂದು ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಸ್ಪಷ್ಟಪಡಿಸಿದ್ದಾರೆ.

ನವದೆಹಲಿಯಲ್ಲಿ ನಡೆಯುವ ಸ್ಕ್ರೀನಿಂಗ್ ಕಮಿಟಿ ಸಭೆಗೂ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜೆಡಿಎಸ್‍ಗೆ ಕ್ಷೇತ್ರಗಳನ್ನು ಬಿಟ್ಟುಕೊಡುವುದು, ಕಾಂಗ್ರೆಸ್ ಅಭ್ಯರ್ಥಿಗಳಿಗೆ ಟಿಕೆಟ್ ನೀಡುವುದು ಹೈಕಮಾಂಡ್‍ನ ನಿರ್ಧಾರಕ್ಕೆ ಬಿಟ್ಟಿದೆ ಎಂದು ಹೇಳಿದರು.

ಈ ಮೊದಲು ನಡೆದ ಸಮನ್ವಯ ಸಮಿತಿ ಸಭೆ ಮತ್ತು ರಾಜ್ಯ ಕಾಂಗ್ರೆಸ್ ಚುನಾವಣಾ ಸಮಿತಿ ಸಭೆಯಲ್ಲಿ ಜೆಡಿಎಸ್ ಜೊತೆ ಕ್ಷೇತ್ರಗಳ ಹಂಚಿಕೆ ಕುರಿತು ಚರ್ಚೆಯಾಗಿದೆ. ಕಾಂಗ್ರೆಸ್‍ನ ಹಾಲಿ ಸಂಸದರಿರುವ ಕ್ಷೇತ್ರಗಳನ್ನು ಬಿಟ್ಟುಕೊಡಬಾರದು ಎಂಬುದು ಖಚಿತವಾಗಿದೆ. ಮೈಸೂರು ಕ್ಷೇತ್ರವನ್ನು ಜೆಡಿಎಸ್‍ನವರು ಕೇಳುತ್ತಿದ್ದಾರೆ. ಆದರೆ ಆ ಬಗ್ಗೆ ಯಾವುದೇ ನಿರ್ಧಾರ ಆಗಿಲ್ಲ. ನಾನು ಎಲ್ಲಿಯೂ ನನ್ನ ಅಭಿಪ್ರಾಯವನ್ನು ವ್ಯಕ್ತಪಡಿಸಿಲ್ಲ. ಇಂದು ನಡೆಯುವ ಸ್ಕ್ರೀನಿಂಗ್ ಕಮಿಟಿ ಸಭೆಯಲ್ಲಿ ನನ್ನ ಅಭಿಪ್ರಾಯ ಹೇಳುತ್ತೇನೆ ಎಂದು ತಿಳಿಸಿದರು.

ಸುಮಲತಾ ಅಂಬರೀಶ್ ಅವರು ಕಾಂಗ್ರೆಸ್‍ನಿಂದ ಸ್ಪರ್ಧೆ ಮಾಡುತ್ತಿಲ್ಲ. ಮಂಡ್ಯದಲ್ಲಿ ಈಗಾಗಲೇ ಜೆಡಿಎಸ್‍ನ ಸಂಸದರಿದ್ದಾರೆ. ಆ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿಯನ್ನು ಕಣಕ್ಕಿಳಿಸಲಾಗುವುದಿಲ್ಲ. ಜೆಡಿಎಸ್‍ನಿಂದ ಅಭ್ಯರ್ಥಿ ಸ್ಪರ್ಧಿಸುತ್ತಾರೆ. ಹೀಗಾಗಿ ಕಾಂಗ್ರೆಸ್‍ನಿಂದಲೇ ನಾನು ಸ್ಪರ್ಧಿಸುತ್ತೇನೆ ಎಂದು ಸುಮಲತಾ ಅವರು ಹೇಳಿಕೊಳ್ಳುತ್ತಿರುವುದು ಆಧಾರ ರಹಿತ. ಸುಮಲತಾ ಅವರಿಗೆ ಕಾಂಗ್ರೆಸ್ ಯಾವ ನಾಯಕರೂ ಬೆಂಬಲ ನೀಡಿಲ್ಲ. ನಾಯಕರ ಮನವೊಲಿಸಲು ಡಿ.ಕೆ.ಶಿವಕುಮಾರ್ ನಿನ್ನೆ ಸಭೆ ಕರೆದಿರುವುದೂ ನನಗೆ ಗೊತ್ತಿಲ್ಲ ಎಂದು ಸಿದ್ದರಾಮಯ್ಯ ಹೇಳಿದರು.

ಹಾಸನದ ಎ.ಮಂಜು ಬಿಜೆಪಿಗೆ ಹೋಗುತ್ತಾರೆ ಎಂಬ ವದಂತಿಗಳಿಗೆ ಪ್ರತಿಕ್ರಿಯಿಸಿದ ಅವರು, ನನ್ನ ಮಾಹಿತಿ ಪ್ರಕಾರ ಎ.ಮಂಜು ಬಿಜೆಪಿಗೆ ಹೋಗುವುದಿಲ್ಲ ಎಂದು ಹೇಳಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ