ಅಡೀಸ್ ಅಬಾಬಾ: 157 ಪ್ರಯಾಣಿಕರ ಸಾವಿಗೆ ಕಾರಣವಾದ ಬೋಯಿಂಗ್ ವಿಮಾನ ದುರಂತದಲ್ಲಿ ನಾಲ್ವರು ಭಾರತೀಯರು ಸಾವಿಗೀಡಾಗಿದ್ದು, ಈ ಪೈಕಿ ಪರಿಸರ ಮತ್ತು ಅರಣ್ಯ ಸಚಿವಾಲಯದಲ್ಲಿ ಸಲಹೆಗಾರರಾಗಿದ್ದ ಶಿಖಾ ಗರ್ಗ್ ಕೂಡ ಮೃತಪಟ್ಟಿದ್ದಾರೆ.
ಪರಿಸರ ಮತ್ತು ಅರಣ್ಯ ಸಚುವಾಲಯದಲ್ಲಿ ಸಲಹೆಗಾರರಾಗಿ ಕಾರ್ಯ ನಿರ್ವಹಿಸುತಿದ್ದ ಶಿಖಾ ಗರ್ಗ್ ನೈರೋಬಿಯಾದಲ್ಲಿ ನಡೆಯುತಿದ್ದ ವಿಶ್ವಸಂಸ್ಥೆಯ ಪರಿಸರ ಕಾರ್ಯಕ್ರಮ(UNEP)ದಲ್ಲಿ ಪಾಲ್ಗೊಳ್ಳಲು ಹೋಗುತ್ತಿದ್ದರು ಎಂದು ಸುಶ್ಮಾ ಸ್ವರಾಜ್ ತಿಳಿಸಿದ್ದಾರೆ.
ಸುದ್ದಿ ತಿಳಿಯುತಿದ್ದಂತೆ ಪರಿಸರ ಖಾತೆ ಸಚಿವ ಡಾ. ಹರ್ಷವರ್ಧನ್ ಅವರೂ ಕೂಡ ಟ್ವಿಟ್ಟರ್ ಮೂಲಕ ಸಂತಾಪ ಸೂಚಿಸಿದ್ದಾರೆ.
ಅಡೀಸ್ ಅಬಾಬಾದಿಂದ 62 ಕಿ.ಮೀ. ದೂರದಲ್ಲಿರುವ ಬಿಶೋಫ್ತು ಎಂಬಲ್ಲಿ ವಿಮಾನ ಪತನಗೊಂಡಿದೆ. ‘ಅಡೀಸ್ ಅಬಾಬಾದಿಂದ ಸ್ಥಳೀಯ ಕಾಲಮಾನ 8.38ಕ್ಕೆ ಪ್ರಯಾಣ ಬೆಳೆಸಿದ್ದ ಬೋಯಿಂಗ್ 737 -800 ಮ್ಯಾಕ್ಸ್ ವಿಮಾನವು 8.44ರ ಸುಮಾರಿಗೆ ರಾಡಾರ್ನಿಂದ ತನ್ನ ಸಂಪರ್ಕವನ್ನು ಕಳೆದುಕೊಂಡಿದೆ. ದುರ್ಘಟನಾ ಸ್ಥಳದಲ್ಲಿ ಪರಿಹಾರ ಮತ್ತು ಹುಡುಕಾಟ ಕಾರ್ಯಾಚರಣೆ ಭರದಿಂದ ಸಾಗಿದೆ’ ಎಂದು ಇಥಿಯೋಪಿಯನ್ ಏರ್ಲೈನ್ಸ್ ಪ್ರಕಟಣೆಯಲ್ಲಿ ತಿಳಿಸಿದೆ.