ಸಂಸದ ಎಂ.ವೀರಪ್ಪ ಮೊಯ್ಲಿ ಸಿಡಿಸಿರುವ ಬಾಂಬ್ ಕಾಂಗ್ರೆಸ್‍ನಲ್ಲಿ ತಳಮಳ ಸೃಷ್ಟಿಸಿದೆ:

ಬೆಂಗಳೂರು,ಮಾ.16-ವಿಧಾನಸಭೆ ಚುನಾವಣೆ ಸಮೀಪಿಸಿರುವ ಸಂದರ್ಭದಲ್ಲೇ ಲೋಕೋಪಯೋಗಿ ಸಚಿವ ಎಚ್.ಸಿ.ಮಹದೇವಪ್ಪ ವಿರುದ್ಧ ಚುನಾವಣಾ ಪ್ರಣಾಳಿಕೆ ಸಮಿತಿ ಮುಖ್ಯಸ್ಥ ಹಾಗೂ ಸಂಸದ ಎಂ.ವೀರಪ್ಪ ಮೊಯ್ಲಿ ಸಿಡಿಸಿರುವ ಬಾಂಬ್ ಕಾಂಗ್ರೆಸ್‍ನಲ್ಲಿ ತಳಮಳ ಸೃಷ್ಟಿಸಿದೆ.
ಮೊಯ್ಲಿ ಹೇಳಿಕೆಯನ್ನೇ ಅಸ್ತ್ರ ಮಾಡಿಕೊಂಡಿರುವ ಬಿಜೆಪಿ, ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ತಿರುಗೇಟು ನೀಡಿದೆ.
ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಇಂದು ಬೆಳಗ್ಗೆ ಟ್ವೀಟ್ ಮಾಡಿ. ಪ್ರಧಾನಿ ನರೇಂದ್ರ ಮೋದಿ ಅವರು ಕಾಂಗ್ರೆಸ್ ಸರ್ಕಾರವನ್ನು 10% ಸರ್ಕಾರವೆಂದು ಟೀಕೆ ಮಾಡಿದ್ದಕ್ಕೆ ಕಾಂಗ್ರೆಸ್‍ನ ಹಲವಾರು ನಾಯಕರು ಕಿಡಿಕಾರಿದ್ದರು. ಈಗ ಮೊಯ್ಲಿ ಹೇಳಿರುವುದಕ್ಕೆ ಏನು ಉತ್ತರ ಹೇಳುತ್ತೀರಿ ಎಂದು ಸಿದ್ದರಾಮಯ್ಯನವರ ಕಾಲು ಎಳೆದಿದ್ದಾರೆ.
ಕಡೇ ಪಕ್ಷ ಸಿದ್ದರಾಮಯ್ಯನವರ ಸರ್ಕಾರ ಏನು ಎಂಬುದು ಕಾಂಗ್ರೆಸ್ ಹಿರಿಯ ನಾಯಕರಿಗೆ ತಡವಾಗಿಯಾದರೂ ಅರ್ಥವಾಗಿದೆ. ಲೋಕೋಪಯೋಗಿ ಸಚಿವರು ಮತ್ತು ಗುತ್ತಿಗೆದಾರರ ನಡುವೆ ಮೊದಲಿನಿಂದಲೂ ನಂಟಿದೆ. ನಾವು ಹೇಳಿದರೆ ಆರೋಪ ಎನ್ನುತ್ತಿದ್ದರು. ಮೊಯ್ಲಿ ಹೇಳಿರುವುದು ಸರಿಯಾಗಿದೆ ಎಂದು ಬಿಎಸ್‍ವೈ ಟ್ವೀಟ್ ಮೂಲಕ ಟಾಂಗ್ ಕೊಟ್ಟಿದ್ದಾರೆ.
ಮೊಯ್ಲಿ ಅವರ ಟ್ವೀಟ್‍ಗೆ ಕೇಂದ್ರ ಸಚಿವ ಡಿ.ವಿ.ಸದಾನಂದ ಗೌಡ ತಮ್ಮ ಟ್ವಿಟರ್‍ನಲ್ಲಿ ಲೋಕೋಪಯೋಗಿ ಸಚಿವ ಎಚ್.ಸಿ.ಮಹದೇವಪ್ಪ ಎಲ್ಲಿದ್ದಾರೆ. 10% ಸರ್ಕಾರದ ಪೆÇೀಸ್ಟರ್ ಬಾಯ್ ಸಿದ್ದರಾಮಯ್ಯ ಕಣ್ಣಿಗೆ ಕಾಣುತ್ತಿಲ್ಲ. ಪ್ರಾಯಶಃ ಅವರು ಕಪ್ಪು ಹಣವನ್ನು ಸಂಗ್ರಹಿಸುವುದರಲ್ಲಿ ನಿರತರಾಗಿದ್ದಾರೆ. ಮುಖ್ಯಮಂತ್ರಿಗಳು ಚುನಾವಣೆಯಲ್ಲಿ ಸೋತು ನಿರ್ಗಮನದ ಹಾದಿಯಲ್ಲಿದ್ದಾರೆ. ವಿಶ್ರಾಂತಿ ಜೀವನಕ್ಕೆ ಸಿದ್ದರಾಗಿರಿ ಎಂದು ವ್ಯಂಗ್ಯವಾಡಿದ್ದಾರೆ.
ಇನ್ನು ಸಂಸದೆ ಶೋಭ ಕರಂದ್ಲಾಜೆ ಕೂಡ ಕೂಡ ಮೊಯ್ಲಿ ಟ್ವೀಟ್‍ಗೆ ಪ್ರತಿಕ್ರಿಯಿಸಿದ್ದು, ಭ್ರಷ್ಟಾಚಾರದ ಬಗ್ಗೆ ಮಾತನಾಡುವ ಎಐಸಿಸಿ ರಾಹುಲ್ ಗಾಂಧಿ ಈ ಟ್ವೀಟ್‍ಗೆ ಏನು ಪ್ರತಿಕ್ರಿಯೆ ನೀಡುತ್ತಾರೆ ಎಂಬುದನ್ನು ಕಾದು ನೋಡಬೇಕು ಎಂದಿದ್ದಾರೆ.
ಲೋಕೋಪಯೋಗಿ ಸಚಿವ ಎಚ್.ಸಿ.ಮಹದೇವಪ್ಪ ಜೊತೆ ಅಕ್ರಮ ವ್ಯವಹಾರ ಇಟ್ಟುಕೊಂಡಿರುವುದು ಗುಟ್ಟಾಗಿ ಉಳಿದಿಲ್ಲ. ಭ್ರಷ್ಟಾಚಾರ ರಹಿತ ಆಡಳಿತ ನೀಡಿದ್ದೇವೆ ಎಂದು ಹೇಳುತ್ತಿರುವುದು ಸಿದ್ದರಾಮಯ್ಯನವರು ಇದಕ್ಕೆ ಪ್ರತಿಕ್ರಿಯಿಸಬೇಕು ಎಂದು ಟ್ವಿಟರ್‍ನಲ್ಲಿ ಒತ್ತಾಯಿಸಿದ್ದಾರೆ.
ನಾನು ಆ ರೀತಿ ಹೇಳಿಲ್ಲ:
ಯಾವಾಗ ಟ್ವಿಟರ್‍ನಲ್ಲಿ ತಮ್ಮ ಹೇಳಿಕೆ ಭಾರೀ ವಿವಾದವನ್ನು ಸೃಷ್ಟಿಸಿತೋ ಎಚ್ಚೆತ್ತುಕೊಂಡಿರುವ ವೀರಪ್ಪ ಮೊಯ್ಲಿ, ನಾನು ಆ ರೀತಿ ಟ್ವೀಟ್ ಮಾಡಿಲ್ಲ. ನನ್ನ ಮಗ ಹರ್ಷ ಮೊಯ್ಲಿ ಕೂಡ ಇಂತಹ ಟ್ವೀಟ್ ಎಂದಿಗೂ ಮಾಡುವುದಿಲ್ಲ. ಪಕ್ಷಕ್ಕೆ ಮುಜುಗರ ತರುವ ಉದ್ದೇಶದಿಂದ ಕೆಲವರು ಮಾಡಿರಬಹುದು. ಟ್ವಿಟರ್‍ನ್ನು ತೆಗೆದು ಹಾಕುವಂತೆ ಸೂಚಿಸಿರುವುದಾಗಿ ಹೇಳಿದ್ದಾರೆ.  ಒಟ್ಟಿನಲ್ಲಿ ಸಂಸದ ವೀರಪ್ಪ ಮೊಯ್ಲಿ ಅವರ ಟ್ವೀಟ್ ಕಾಂಗ್ರೆಸ್‍ನಲ್ಲಿ ಅಸಮಾಧಾನ ಸೃಷ್ಟಿಸಿರುವುದು ಸುಳ್ಳಲ್ಲ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ