ರುದ್ರಭೂಮಿಯಲ್ಲಿ ಕಲ್ಲು ಎತ್ತಿಹಾಕಿ ವ್ಯಕ್ತಿಯೊಬ್ಬರ ಕೊಲೆ

ಬೆಂಗಳೂರು, ಮಾ.9-ಹಿಂದೂ ರುದ್ರಭೂಮಿಯಲ್ಲಿ ವ್ಯಕ್ತಿಯೊಬ್ಬರ ಮೇಲೆ ಕಲ್ಲು ಎತ್ತಿ ಹಾಕಿ ಕೊಲೆ ಮಾಡಿರುವ ಘಟನೆ ಎಚ್‍ಎಸ್‍ಆರ್ ಲೇಔಟ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ಹಾಸನ ಮೂಲದ ಮಂಜುನಾಥ (52) ಕೊಲೆಯಾದ ವ್ಯಕ್ತಿ ಎಂದು ಗುರುತಿಸಲಾಗಿದೆ. ನಗರದ ಗೋವಿಂದಶೆಟ್ಟಿ ಪಾಳ್ಯದಲ್ಲಿ ವಾಸವಾಗಿದ್ದ ಮಂಜುನಾಥ ಈ ಮೊದಲು ಕಂಪೆನಿಯೊಂದರಲ್ಲಿ ಲಾರಿ ಚಾಲಕನಾಗಿ ಕೆಲಸ ಮಾಡುತ್ತಿದ್ದನು.

ತದನಂತರ ಆ ಕೆಲಸ ಬಿಟ್ಟು ಸೆಕ್ಯೂರಿಟಿ ಗಾರ್ಡ್ ಕೆಲಸ ಮಾಡಿಕೊಂಡಿದ್ದ ಮಂಜುನಾಥ ಈ ಕೆಲಸವನ್ನೂ ತೊರೆದಿದ್ದು, ಯಾವುದೇ ಕೆಲಸ ಮಾಡುತ್ತಿರಲಿಲ್ಲ.

ಮೊನ್ನೆ ರಾತ್ರಿ ಮಂಜುನಾಥನನ್ನು ಬೊಮ್ಮನಹಳ್ಳಿ ಹಿಂದೂ ರುದ್ರಭೂಮಿಗೆ ಕರೆದೊಯ್ದ ದುಷ್ಕರ್ಮಿಗಳು ಕಲ್ಲು ಎತ್ತಿ ಹಾಕಿ ಕೊಲೆ ಮಾಡಿದ್ದಾರೆ.

ನಿನ್ನೆ ಬೆಳಗ್ಗೆ ವ್ಯಕ್ತಿಯ ಕೊಲೆಯಾಗಿರುವುದನ್ನು ಗಮನಿಸಿದ ಸ್ಥಳೀಯರೊಬ್ಬರು ಎಚ್‍ಎಸ್‍ಆರ್ ಲೇಔಟ್ ಪೊಲೀಸರಿಗೆ ತಿಳಿಸಿದ್ದಾರೆ.

ಸ್ಥಳಕ್ಕಾಗಮಿಸಿದ ಪೊಲೀಸರು ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡು ಸೆಂಟ್‍ಜಾನ್ ಆಸ್ಪತ್ರೆಯಲ್ಲಿ ಶವವನ್ನು ಮರಣೋತ್ತರ ಪರೀಕ್ಷೆಗೊಳಪಡಿಸಿ ನಂತರ ವಾರಸುದಾರರಿಗೆ ಹಸ್ತಾಂತರಿಸಿದ್ದಾರೆ.

ಎಚ್‍ಎಸ್‍ಆರ್ ಲೇಔಟ್ ಠಾಣೆ ಪೊಲೀಸರು ಕೊಲೆ ಆರೋಪಿಗಳ ಪತ್ತೆಗಾಗಿ ತನಿಖೆ ಕೈಗೊಂಡಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ