ಲಕ್ಷ್ಮಣ್ ಕೊಲೆ ಪ್ರಕರಣ-ಕುಖ್ಯಾತ ರೌಡಿಯನ್ನು ವಶಕ್ಕೆ ತೆಗೆದುಕೊಂಡ ಪೊಲೀಸರು

ಬೆಂಗಳೂರು, ಮಾ.9- ಲಕ್ಷ್ಮಣ್ ಕೊಲೆ ಪ್ರಕರಣ ಸಂಬಂಧ ಉತ್ತರ ವಿಭಾಗದ ಪೊಲೀಸರು ಕುಖ್ಯಾತ ರೌಡಿಯೊಬ್ಬನನ್ನು ವಶಕ್ಕೆ ತೆಗೆದುಕೊಂಡು ತೀವ್ರ ವಿಚಾರಣೆ ನಡೆಸುತ್ತಿದ್ದಾರೆ.

ಲಕ್ಷ್ಮಣ್ ಕೊಲೆಯ ನಂತರ ಬೇರೆ ರಾಜ್ಯಕ್ಕೆ ಪರಾರಿಯಾಗಿದ್ದ ಕುಖ್ಯಾತ ರೌಡಿಯ ಬಗ್ಗೆ ಮಾಹಿತಿ ಕಲೆ ಹಾಕಿದ ಉತ್ತರ ವಿಭಾಗದ ಪೊಲೀಸ್ ತಂಡ, ಖಚಿತ ಸುಳಿವಿನ ಮೇರೆಗೆ ಅಲ್ಲಿಗೆ ತೆರಳಿ ಆತನನ್ನು ವಶಕ್ಕೆ ತೆಗೆದುಕೊಂಡು ನಗರಕ್ಕೆ ಕರೆತಂದಿದೆ.

ಹೆಣ್ಣಿನ ವಿಚಾರದಲ್ಲಿ ರೌಡಿ ಲಕ್ಷ್ಮಣ್‍ನ ಕೊಲೆ ಆಗಿದೆ ಎಂಬುದನ್ನು ಬಲವಾಗಿ ಶಂಕಿಸಿರುವ ತನಿಖಾ ತಂಡ ಈ ನಿಟ್ಟಿನಲ್ಲಿ ತೀವ್ರ ತನಿಖೆ ಕೈಗೊಂಡಿದೆ. ಆರೋಪಿಗಳ ಬಂಧನಕ್ಕಾಗಿ ರಚಿಸಿರುವ ನಾಲ್ಕು ವಿಶೇಷ ತಂಡಗಳು ಈಗಾಗಲೇ ಹಲವಾರು ಸೂಕ್ತ ಹಾಗೂ ಉಪಯುಕ್ತ ಮಾಹಿತಿಗಳನ್ನು ಕಲೆ ಹಾಕಿದೆ.

ಲಕ್ಷ್ಮಣ್ ಕೊಲೆಗೆ ಬಳಸಲಾಗಿರುವ ವಾಹನ ಯಾರಿಗೆ ಸೇರಿದ್ದು ಎಂಬುದನ್ನು ಸಹ ತಂಡ ಪತ್ತೆಹಚ್ಚಿರುವುದಲ್ಲದೆ ಯಾವ ಕಾರಣಕ್ಕಾಗಿ ಈ ಕೊಲೆ ನಡೆದಿದೆ ಎಂಬುದನ್ನು ಸಹ ಮಾಹಿತಿ ಕಲೆ ಹಾಕಿದೆ.

ಜೈಲಿನಿಂದ ಬಿಡುಗಡೆಯಾದ ನಂತರ ಲಕ್ಷ್ಮಣ್ ಗೆಳತಿಯೊಬ್ಬರಿಗೆ ಪದೇ ಪದೇ ದೂರವಾಣಿ ಮಾಡುತ್ತಿದ್ದ ಎಂಬುದು ಪೊಲೀಸ್ ತನಿಖೆಯಿಂದ ಗೊತ್ತಾಗಿದೆ.

ಈ ಕೊಲೆ ಹಿಂದೆ ಕೆಲವು ಕುಖ್ಯಾತ ರೌಡಿಗಳು ಇರುವುದರಿಂದ ನಗರ ಪೊಲೀಸ್ ಆಯುಕ್ತರು ಪ್ರಕರಣವನ್ನು ಸಿಸಿಬಿಗೆ ವರ್ಗಾಯಿಸಿದ್ದಾರೆ. ಈಗಾಗಲೇ ಸಿಸಿಬಿ ಪೊಲೀಸರು ಕಾರ್ಯಾಚರಣೆಕೈಗೊಂಡಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ