ಲೋಕಸಭಾ ಚುನಾವಣೆ; 8 ಕ್ಷೇತ್ರಗಳನ್ನು ಜೆಡಿಎಸ್​ಗೆ ಬಿಟ್ಟುಕೊಟ್ಟ ಕಾಂಗ್ರೆಸ್​; ಸದ್ಯದಲ್ಲೇ ಅಂತಿಮ ಪಟ್ಟಿ ಬಿಡುಗಡೆ

ಬೆಂಗಳೂರುಲೋಕಸಭಾ ಚುನಾವಣೆಯ ದಿನಾಂಕ ಇಂದು ಪ್ರಕಟವಾಗುವ ಸಾಧ್ಯತೆಯಿದ್ದು, ದೇಶದಲ್ಲಿ ರಾಜಕೀಯ ವಿದ್ಯಮಾನಗಳು ಚುರುಕಾಗಿವೆ. ರಾಜ್ಯದ ಮೈತ್ರಿ ಸರ್ಕಾರದ ಸೀಟು ಹಂಚಿಕೆ ಗೊಂದಲ ಇನ್ನೂ ಸಂಪೂರ್ಣ ಇತ್ಯರ್ಥವಾಗದಿದ್ದರೂ ಸದ್ಯಕ್ಕೆ ಕಾಂಗ್ರೆಸ್​ 8 ಕ್ಷೇತ್ರಗಳನ್ನು ಜೆಡಿಎಸ್​ಗೆ ಬಿಟ್ಟುಕೊಟ್ಟಿದೆ.

ಈ ಮೊದಲು 7 ಕ್ಷೇತ್ರಗಳಲ್ಲಿ ಜೆಡಿಎಸ್​ ಸ್ಪರ್ಧಿಸುವುದು ಖಚಿತ ಎನ್ನಲಾಗಿತ್ತು.  ಆದರೆ, ಜೆಡಿಎಸ್​ ವರಿಷ್ಠ ದೇವೇಗೌಡರು 12 ಸೀಟುಗಳಿಗೆ ಬೇಡಿಕೆಯಿಟ್ಟಿದ್ದರು.

12 ಆಗದಿದ್ದರೆ 10 ಕ್ಷೇತ್ರಗಳನ್ನಾದರೂ ಜೆಡಿಎಸ್​ಗೆ ಬಿಟ್ಟುಕೊಡಬೇಕು ಎಂದು ಕಾಂಗ್ರೆಸ್​ ಹೈಕಮಾಂಡ್​ ಮುಂದೆ ಪಟ್ಟು ಹಿಡಿದಿದ್ದರು. ಅವರ ಒತ್ತಡಕ್ಕೆ ಮಣಿದಿರುವ ಕಾಂಗ್ರೆಸ್ ಹೈಕಮಾಂಡ್​ ಸದ್ಯಕ್ಕೆ 8 ಕ್ಷೇತ್ರಗಳನ್ನು ಫೈನಲ್ ಮಾಡಿದೆ. ತಮ್ಮ ಪಕ್ಷದ ಹಾಲಿ ಸಂಸದರನ್ನು ಹೊಂದಿರುವ ತುಮಕೂರು ಕ್ಷೇತ್ರವನ್ನು ಕಾಂಗ್ರೆಸ್​ ಜೆಡಿಎಸ್​ಗೆ ಬಿಟ್ಟುಕೊಟ್ಟಿದೆ.

ಜೆಡಿಎಸ್​ ಪ್ರಭಾವ ಹೆಚ್ಚಾಗಿರುವ ಮಂಡ್ಯ, ಹಾಸನ ಸೇರಿದಂತೆ ಶಿವಮೊಗ್ಗ, ತುಮಕೂರು, ಉಡುಪಿ- ಚಿಕ್ಕಮಗಳೂರು, ಬೆಂಗಳೂರು ಉತ್ತರ, ವಿಜಯಪುರ, ಮೈಸೂರು ಕ್ಷೇತ್ರಗಳು ಜೆಡಿಎಸ್​ ತೆಕ್ಕೆಗೆ ಬಿದ್ದಿವೆ. 2 ದಿನಗಳ ಹಿಂದೆ ದೆಹಲಿಗೆ ತೆರಳಿ ಕಾಂಗ್ರೆಸ್​ ಅಧ್ಯಕ್ಷ ರಾಹುಲ್ ಗಾಂಧಿ ಅವರೊಂದಿಗೆ ಮಾತುಕತೆ ನಡೆಸಿದ್ದ ಎಚ್​.ಡಿ. ದೇವೇಗೌಡರು ಮೈಸೂರು ಮತ್ತು ತುಮಕೂರು ಕ್ಷೇತ್ರಗಳನ್ನು ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಅಲ್ಲಿಗೆ ಜೆಡಿಎಸ್​ ಪಾಲಿನ 8 ಕ್ಷೇತ್ರಗಳು ಅಂತಿಮವಾದಂತಾಗಿದೆ.

ಚಿಕ್ಕಬಳ್ಳಾಪುರ ಮತ್ತು ಉತ್ತರ ಕನ್ನಡ ಕ್ಷೇತ್ರಗಳನ್ನು ಜೆಡಿಎಸ್​ಗೆ ಬಿಟ್ಟುಕೊಡಲು ಕಾಂಗ್ರೆಸ್​ ಒಪ್ಪಿಗೆ ನೀಡಿಲ್ಲ.  ಇನ್ನೂ 2 ಕ್ಷೇತ್ರಗಳನ್ನು ಜೆಡಿಎಸ್​ಗೆ ನೀಡಬೇಕಾಗಿದ್ದು, ಆ ಕ್ಷೇತ್ರಗಳು ಯಾವುವು ಎಂದು ಅಂತಿಮವಾದ ಬಳಿಕ ಮೈತ್ರಿ ಸರ್ಕಾರದಿಂದ ಅಭ್ಯರ್ಥಿಗಳ ಪಟ್ಟಿಯನ್ನು ಅಧಿಕೃತವಾಗಿ ಘೋಷಣೆ ಮಾಡಲಾಗುವುದು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ