ರಾಜಸ್ತಾನ ನಂತರ ಕರ್ನಾಟಕ ಹೆಚ್ಚು ಹೊಣ ಭೂಮಿ ಹೊಂದಿರುವ ರಾಜ್ಯ: ಸಚಿವ ಡಿ.ಕೆ.ಶಿವಕುಮಾರ್

ಬೆಂಗಳೂರು, ಮಾ.6-ಕರ್ನಾಟಕ ಅತೀ ಹೆಚ್ಚು ಒಣಭೂಮಿ ಹೊಂದಿರುವ ರಾಜ್ಯವಾಗಿದ್ದು, ರಾಜಸ್ಥಾನದ ನಂತರದ ಸ್ಥಾನದಲ್ಲಿದೆ ಹಾಗಾಗಿ ನಮ್ಮ ರೈತರು ನೀರಾವರಿಯಂತಹ ಸಮಸ್ಯೆಗಳನ್ನು ಹೆಚ್ಚು ಎದುರಿಸುತ್ತಿದ್ದಾರೆ ಎಂದು ಭಾರೀ ಮತ್ತು ಮಧ್ಯಮ ನೀರಾವರಿ ಸಚಿವ ಡಿ.ಕೆ.ಶಿವಕುಮಾರ್ ತಿಳಿಸಿದರು.

ನಗರದಲ್ಲಿ ಇಂದು ಇಂಡಿಯಾ ಟೆಕ್ನಾಲಜಿ ಕಾಂಗ್ರೆಸ್ ಅಸೋಸಿಯೇಶನ್ ಹಮ್ಮಿಕೊಂಡಿದ್ದ ಇಂಡೋ ಇಸ್ರೇಲ್ ಉಪಕ್ರಮದ ಭಾಗವಾಗಿ ರೈತ ಕೇಂದ್ರಿತ ನೀರಾವರಿ ಕಾರ್ಯಾಗಾರದಲ್ಲಿ ಪಾಲ್ಗೊಂಡು ಮಾತನಾಡಿದರು.

1000ರಿಂದ 2000 ಅಡಿ ವರೆಗೂ ಅಂತರ್ಜಲ ಕುಸಿತ ಕಂಡಿರುವ ಕೋಲಾರ, ಚಿಕ್ಕಬಳ್ಳಾಪುರ ಜಿಲ್ಲೆಯ ರೈತರು ಕಷ್ಟಪಟ್ಟು ಹಾಲು, ರೇಷ್ಮೆ ಉದ್ಯಮದೊಂದಿಗೆ ತರಕಾರಿ ಸಹ ಬೆಳೆಯುತ್ತಿದ್ದಾರೆ. ಹಾಗಾಗಿ ಆ ಭಾಗದಲ್ಲಿ ರೈತರ ಆತ್ಮಹತ್ಯೆ ಪ್ರಕರಣಗಳು ಹೆಚ್ಚಾಗಿ ಕಂಡು ಬಂದಿಲ್ಲ, ಆದರೆ ನೀರಾವರಿ ಭೂಮಿ ಇರುವ, ಸೌಲಭ್ಯ ಹೆಚ್ಚಿರುವ ಪ್ರದೇಶದಲ್ಲಿ ಆತ್ಮಹತ್ಯೆ ಪ್ರಕರಣ ಹೆಚ್ಚಾಗಿರುವುದು ವಿಷಾದನೀಯ ಎಂದರು.

ರಾಜ್ಯದಲ್ಲಿ ಶೇ. 40ರಷ್ಟು ನಗರಪ್ರದೇಶವಿದ್ದರೆ ಶೇ. 60ರಷ್ಟು ಗ್ರಾಮೀಣ ಪ್ರದೇಶವಿದೆ. ಹೆಚ್ಚು ಮಂದಿ ಕೃಷಿ ಅವಲಂಬಿತರಾಗಿದ್ದು ಗ್ರಾಮೀಣ ಭಾಗದ ಉಪಕಸುಬುಗಳನ್ನು ಮಾಡಿಕೊಳ್ಳುತ್ತಿದ್ದಾರೆ.

ಗ್ರಾಮೀಣ ಭಾಗದಲ್ಲಿ ಶಿಕ್ಷಣ, ಆರೋಗ್ಯ, ಉದ್ಯೋಗಕ್ಕೆ ಹೆಚ್ಚು ಗೌರವ ಸಿಗುತ್ತಿಲ್ಲ ಹಾಗಾಗಿ ಪ್ರತಿವರ್ಷ 40ರಿಂದ 50ಸಾವಿರ ಮಂದಿ ನಗರಪ್ರದೇಶಗಳಿಗೆ ವಲಸೆ ಹೋಗುತ್ತಿದ್ದಾರೆ. ಇದನ್ನು ತಡೆಯಲು ನಗರಪ್ರದೇಶದಂತೆ ಗ್ರಾಮೀಣಗಳಲ್ಲಿನ ದುಡಿಮೆಗೂ ಗೌರವ ಸಿಗುವಂತಾಗಬೇಕು ಎಂದರು.

ಗ್ರಾಮೀಣ ಪ್ರದೇಶದ ಜನರಲ್ಲಿ ಕೀಳರಿಮೆ ಹೆಚ್ಚಿದೆ. ಹಾಗಾಗಿ ನಗರಪ್ರದೇಶದಲ್ಲಿ ಉತ್ತಮ ಕೆಲಸ, ಮತ್ತಿತರರ ಉದ್ಯೋಗ ಅರಸಿ ವಲಸೆ ಬರುತ್ತಿದ್ದಾರೆ.

ಅವಿಭಕ್ತ ಕುಟುಂಬಗಳು ವಿಭಜನೆಯಾಗಿ ವಿಭಕ್ತ ಕುಟುಂಬಗಳಿಗೆ ಒಂದೆರಡು ಎಕರೆ ಭೂಮಿ ಸಿಗುವುದರಿಂದ ದುಡಿಮೆ ಮಾಡಲು ಸಾಧ್ಯವಾಗದೆ ಹೋಗುತ್ತಿದೆ ಕೆಲವೊಮ್ಮೆ ಐದಾರು ಎಕರೆ ಭೂಮಿ ಇದ್ದರೂ ಸ್ವಾಭಿಮಾನದಿಂದ ಬದುಕಲು ಸಾಧ್ಯವಾಗದೇ ಪರಿತಪಿಸುತ್ತಿದ್ದಾರೆ ಎಂದು ವಿಷಾದಿಸಿದರು.

ರೈತರು ಸೋಲಬಾರದು, ಕೃಷಿಯಲ್ಲಿ ಆಧುನಿಕ ತಂತ್ರಜ್ಞಾನಗಳನ್ನು ಬಳಸಿ ಇರುವ ಜಮೀನಿನಲ್ಲೇ ಒಳ್ಳೆಯ ಲಾಭ ಪಡೆಯುವ ನಿಟ್ಟಿನಲ್ಲಿ ಚಿಂತನೆ ನಡೆಸಿ ಮುನ್ನುಡಿ ಇಡಬೇಕಿದೆ ಇದಕ್ಕೆ ನೆರವು ನೀಡಲು ಸರಕಾರವು ಸಿದ್ಧವಿದೆ ಎಂದರು.

ಸಚಿವ ಎನ್.ಎಚ್.ಶಿವಶಂಕರ ರೆಡ್ಡಿ ಮಾತನಾಡಿ ನಮ್ಮ ರಾಜ್ಯದಲ್ಲಿ ಎರಡು ರೀತಿಯ ವಾತಾವರಣವಿದೆ ಅತೀವೃಷ್ಟಿ ಅನಾವೃಷ್ಟಿ ಎರಡನ್ನು ನಮ್ಮ ರೈತರು ಅನುಭವಿಸುತ್ತಿದ್ದಾರೆ ಎಂದರು.

ನೀರಿನ ಸದ್ಬಳಕೆ ಸರಿಯಾದ ರೀತಿಯಲ್ಲಿ ಆಗಬೇಕಿದೆ. ನೀರಿನ ಮರುಬಳಕೆ ಸೇರಿದಂತೆ ನೀರಿನ ಸೂಕ್ತ ಬಳಕೆಗೆ ಎಲ್ಲರೂ ಮುಂದಾಗಬೇಕು ಆದರೆ ಸಣ್ಣರೈತರಿಗೆ ನೀರಿನ ಸಮಸ್ಯೆ ಎದುರಾಗದಂತೆ ಪ್ರಾಯೋಗಿಕವಾಗಿ ಕೃಷಿ ನಡೆಸಲು ಅನುವಾಗುವ ಪದ್ಧತಿ ಪರಿಶೀಲನೆ ನಡೆಸಲಾಗುತ್ತಿದೆ ಎಂದು ತಿಳಿಸಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ