ಸೇನಾ ಬತ್ತಳಿಕೆಗೆ INSAS ಬದಲು ಶಕ್ತಿಶಾಲಿ AK-203 ರೈಫಲ್ಸ್

ನವದೆಹಲಿ: ಉಗ್ರರ ಕೈಯಲ್ಲಿ ಅತ್ಯಾಧುನಿಕ ಆಯುಧಗಳಿರುತ್ತವೆ. ಆ ರಾಕ್ಷಸರನ್ನ ಮಟ್ಟ ಹಾಕಲು ಅಷ್ಟೇ ಬಲಶಾಲಿ ಇಲ್ಲವೇ ಅದಕ್ಕಿಂತ ಹೆಚ್ಚು ತೀವ್ರತೆ ರೈಫಲ್ಸ್‌ ಬೇಕು. ಅಂಥ ಕೊರತೆ ಈಗಲೂ ಭಾರತೀಯ ಸೇನೆ ಹಾಗೂ ಅರೆಸೇನಾ ಪಡೆಗಳು ಎದುರಿಸುತ್ತಿವೆ. ಅದನ್ನ ನೀಗಿಸಲು ಪ್ರಧಾನಿ ನರೇಂದ್ರ ಮೋದಿ ಒಂದು ಐಡಿಯಾ ಮಾಡಿದ್ದಾರೆ.

ಅಮೇಥಿಯಲ್ಲಿ ಆರ್ಮ್ಸ್‌ ತಯಾರಿಕಾ ಘಟಕ :

ವಿಶ್ವದ ಐದು ಅತ್ಯುನ್ನತ ಸೇನೆಗಳಲ್ಲಿ ಭಾರತವೂ ಒಂದು. ಇಂಡಿಯಾ ಸ್ಮಾಲ್ ಆರ್ಮ್ಸ್‌ ಸಿಸ್ಟಂ ಅಂದ್ರೇ INSAS  ರೈಫಲ್ಸ್‌  ಅನ್ನು ಈಗ ಸೇನೆ, ಅರೆಸೇನೆಯಲ್ಲಿ ಬಳಸಲಾಗುತ್ತಿದೆ. ಆದರೆ, ಇವುಗಳ ಬಗ್ಗೆ ಸಾಕಷ್ಟು ದೂರುಗಳಿವೆ. ಉಗ್ರರು ವಿರುದ್ಧ ಸೆಣಸಲು ಇವು ಸಾಕಾಗಲ್ಲ. INSAS ಬದಲು AK-203 ರೈಫಲ್ಸ್‌ ನೀಡಲಾಗುತ್ತಂತೆ.  ಅಮೇಥಿಯಲ್ಲಿ AK-203 ರೈಫಲ್ಸ್‌ ತಯಾರಿಕಾ ಘಟಕಕ್ಕೆ ಭಾನುವಾರವಷ್ಟೇ ಪ್ರಧಾನಿ ಮೋದಿ ಅಡಿಗಲ್ಲಿರಿಸಿದ್ದಾರೆ. ಮೇಕ್ ಇನ್‌ ಇಂಡಿಯಾ ಯೋಜನೆಯಡಿ  AK-203 ರೈಫಲ್ಸ್‌ ತಯಾರಾಗಲಿವೆ. ಇವು ಸೇನೆ ಮತ್ತು ಸೈನಿಕರ ಬಲ ಮತ್ತಷ್ಟು ಹೆಚ್ಚಿಸಲಿವೆ.

ಸೇನೆ, ಅರೆಸೇನೆ ಬಳಸುವ Insas ಸಮಸ್ಯೆ ಜಾಸ್ತಿ :
Insas ಗನ್‌ ಜಾಮಿಂಗ್‌, ಇದ್ದಕ್ಕಿದ್ದಂತೆ  ಸ್ವಯಂ ಚಾಲಿತವಾಗಿ  3 ಸುತ್ತು ಗುಂಡು ಸಿಡಿಯುತ್ತಿದ್ದವು. ಕಾರ್ಯಾಚರಣೆ ವೇಳೆ ಕಣ್ಣಿಗೆ ಆಯಿಲ್‌ ಸಿಡಿಯುತ್ತಲಿತ್ತು. ಹೆಚ್ಚು ಬಿಸಿಲಿನ ವೇಳೆ ಕಾರ್ಯಾಚರಣೆ ನಡೆಸುವಾಗ  ಮ್ಯಾಗಜೀನ್‌ ಕ್ರ್ಯಾಕಿಂಗ್‌ ಆಗಿ ವೈರಿಗಳ ಹಿಮ್ಮೆಟ್ಟಿಸಲು ಕಷ್ಟವಾಗುತ್ತಿತ್ತು. 1999ರ ಕಾರ್ಗಿಲ್ ಯುದ್ಧದ ವೇಳೆ ಯೋಧರು,  INSAS ಗನ್‌ ಗುಣಮಟ್ಟದ ಬಗ್ಗೆ ಅಪಸ್ವರ ಎತ್ತಿ, ನಿರಾಸೆಗೊಂಡಿದ್ದರು. ಈಗ ಉಗ್ರರ ವಿರುದ್ಧ ಪ್ರತಿ ದಾಳಿ ನಡೆಸಲು  ಜಮ್ಮು-ಕಾಶ್ಮೀರ ಮತ್ತು ಉತ್ತರಭಾರತದಲ್ಲಿ ವಿಶ್ವದ ವಿಶ್ವಾಸಾರ್ಹ ಆಯುಧ AK-47 ಅಥವಾ ಇಂಪೋರ್ಟೆಡ್‌ ಗನ್ಸ್‌ ಬಳಸಲಾಗುತ್ತಿದೆ. ಉಗ್ರರು ಉಪಟಳ ಪ್ರದೇಶಗಳಲ್ಲಾದರೂ ಸಿಆರ್‌ಪಿಎಫ್‌ ಯೋಧರಿಗೀಗ ಎಕೆ-47 ನೀಡಲಾಗಿದೆ.

ವಿಶೇಷ ಭದ್ರತಾ ಪಡೆಗಳಾದ ಪ್ಯಾರಾ ಕಮಾಂಡೋಸ್‌, ಮರೀನ್ ಕಮಾಂಡೋಸ್‌ (ಮಾರ್ಕೋಸ್) ಗರುಡ ಕಮಾಂಡೋ ಫೋರ್ಸ್( IAFನಲ್ಲಿ ವಿಶೇಷ ಬಳಕೆ) ಮತ್ತು ಉಗ್ರರ ವಿರುದ್ಧ ನ್ಯಾಷನಲ್ ಸೆಕ್ಯುರಿಟಿ ಗಾರ್ಡ್ (NSG) ಈಗ ಜರ್ಮನ್‌ ಅಥವಾ ಇಸ್ರೇಲ್‌ ಆಟೋಮ್ಯಾಟಿಕ್‌ ರೈಫಲ್ಸ್‌ಗಳಾದ ಹೆಕ್ಲರ್‌ ಮತ್ತು ಕೊಚ್ Mp5 ಸಬ್‌-ಮೆಷಿನ್ ಗನ್ಸ್‌ ಮತ್ತು ಟವೊರ್ ರೈಫಲ್ಸ್‌ ಬಳಸಲಾಗುತ್ತಿದೆ. ವಿವಿಐಪಿ, ಪ್ರಧಾನಮಂತ್ರಿಯ ಆಂತರಿಕ ಭದ್ರತೆಗಿರುವ ವಿಶೇಷ ಭದ್ರತಾ ಗ್ರೂಪ್ (SPG) ಬೆಲ್ಜಿಯಂ ಮೇಡ್  FN F2000 ಬುಲ್‌ಪಪ್‌ ಅಸಲ್ಟ್‌ ರೈಫಲ್ಸ್‌ ನೀಡಲಾಗಿದೆ. ಇದು ಅತ್ಯಂತ ಹತ್ತಿರದ ಕಾರ್ಯಾಚರಣೆಗೆ ಸೂಕ್ತ.

INSAS ರೈಫಲ್ಸ್‌ ತಿರುಚಿನಾಪಳ್ಳಿ ಆರ್ಡಿನೆನ್ಸ್ ಫ್ಯಾಕ್ಟರಿಯಲ್ಲಿ ತಯಾರಾಗುತ್ತಿವೆ. ಕಾನಪುರದ ಸಣ್ಣ ಶಸ್ತ್ರಾಸ್ತ್ರ ಕಾರ್ಖಾನೆ ಮತ್ತು ಪಶ್ಚಿಮ ಬಂಗಾಳದ ಇಚ್ಚಾಪುರದ ರೈಫಲ್‌ ಫ್ಯಾಕ್ಟರಿಗಳಲ್ಲಿ ತಯಾರಾಗುವ ಗನ್‌ಗಳು ವೈರಿಗಳನ್ನ ಮಟ್ಟ ಹಾಕಲಾಗಲ್ಲ. ಜಮ್ಮು-ಕಾಶ್ಮೀರ, ಉತ್ತರಭಾರತ ಹಾಗೂ ನಕ್ಸಲ್‌ಪೀಡಿತ ಕೆಂಪು ಉಗ್ರರು AK-47 ಬಳಸುತ್ತಾರೆ. ಇದರಿಂದಾಗಿ ಹೆಚ್ಚು ಸೈನಿಕರ ಸಾವುಗಳಾಗುತ್ತಿವೆ.

INSAS ಮತ್ತು AK-203 ಸಾಕಷ್ಟು ವ್ಯತ್ಯಾಸ :

INSAS ಬುಲೆಟ್‌ 400 ಮೀಟರ್‌ ರೇಂಜ್‌ಗೆ ಸಿಡಿಯುತ್ತವೆ. ಈ ಗನ್‌ ಮ್ಯಾಗಜೀನ್‌ 20 ಸುತ್ತು ಗುಂಡು ಹಾರಿಸುತ್ತೆ. ಕೆಲ ಸಾರಿ ಮ್ಯಾಗಜೀನ್‌ ಬ್ರೇಕ್ ಆಗಿ ಕೆಳಗೆ ಬೀಳುತ್ತೆ. ಮ್ಯಾಗಜೀನ್ ಮತ್ತು ಬಾಯ್‌ನೆಟ್‌ ಬಿಟ್ಟು ಇದು 4.15 ಕೆಜಿ ತೂಗುವುದರಿಂದ ಹೊತ್ತೊಯ್ಯಲೂ ಕಷ್ಟ. AK-203 ರೈಫಲ್‌ AK-47ನ ಅಡ್ವಾನ್ಸ್‌ ವರ್ಷನ್. AK-203 ಮ್ಯಾಗ್‌ಜೀನ್‌ನಲ್ಲಿ 30 ಗುಂಡು ಹಾಕಬಹುದು. 400 ಮೀಟರ್‌ ಎಫೆಕ್ಟ್‌ ರೇಂಜ್‌ ಜತೆ ಶೇ.100ರಷ್ಟು ನಿಶ್ಚಿತ ಗುರಿ ಇರುತ್ತೆ.

INSASಗಿಂಗ AK-203 ಹಗುರ ಮತ್ತು ಚಿಕ್ಕದು. ಇದು ಅಂಡರ್‌ಬ್ಯಾರೆಲ್‌ ಗ್ರೈನೇಡ್ ಲಾಂಚರ್‌ ಅಥವಾ ಬಾಯ್‌ನೆಟ್‌ ಹೊಂದಿದೆ. ತಕ್ಷಣ ಬಿಚ್ಚಿಡುವ ಸಾಧನಗಳಿವೆ. ಆಪರೇಷನ್‌ ವೇಳೆ ಹೆಚ್ಚು ಶಬ್ಧ ಹೊಮ್ಮಿಸಲ್ಲ.

7.62 mm ಗುಂಡುಗಳಿರುವ AK-203 ಗನ್‌ NATO ಶ್ರೇಣಿ ಹೊಂದಿದೆ. ಸಾಕಷ್ಟು ಪವರ್‌ಫುಲ್ ಅಂತಾ ಸಾಬೀತಾಗಿದೆ.  ಒಂದೇ ನಿಮಿಷಕ್ಕೆ 600 ಗುಂಡು ಸಿಡಿಯುತ್ತವೆ. ಅಂದ್ರೇ ಪ್ರತಿ ಸೆಕೆಂಡ್‌ಗೆ 10 bullets ಸಿಡಿದಿರುತ್ತವೆ. AK-203 ಗನ್‌ನ ಅಟೋಮ್ಯಾಟಿಕ್‌ ಹಾಗೂ ಸೆಮಿ ಆಟೋಮ್ಯಾಟಿಕ್ ಮೋಡ್‌ನಲ್ಲಿರಿಸಹುದು.

50 ದೇಶದ ಸೇನೆ ಬಳಸುತ್ತವೆ AK ಸರಣಿ ರೈಫಲ್ಸ್ :
AK ಸರಣಿಯ ರೈಫಲ್ಸ್‌ ಜಾಮ್ ಆಗಲ್ಲ. ಪ್ರತಿಕೂಲ ವಾತಾವರಣದಲ್ಲೂ ಕಾರ್ಯಾಚರಣೆ ನಡೆಸಲು AK-47 ರೈಫಲ್‌ನ ಕಲಾಷ್ನಿಕೋವ್‌  ರೂಪಿಸಿದ್ದರು. ಕಲ್ಲು, ಮಣ್ಣು ಹಾಗೂ ನೀರಿನಲ್ಲಿ ಕಾರ್ಯಾಚರಣೆಗೆ ಹೇಳಿ ಮಾಡಿಸಿದಂತಿವೆ. AK-47 ವಿಶ್ವಾಸಾರ್ಹವಾದ್ದರಿಂದ 50 ದೇಶದ ಸೈನಿಕರು ಬಳಸುತ್ತಿದ್ದಾರೆ.

ರಷ್ಯನ್ ಅಸಲ್ಟ್‌ ರೈಫಲ್‌ ತಯಾರಿಸಲು 30 ದೇಶಗಳಿಗೆ ಪರವಾನಗೆ ಇದೆ. ರಷ್ಯನ್‌ ವಿಶೇಷ ಭದ್ರತಾ ಪಡೆ ಕೂಡ AK-203 ರೈಫಲ್ಸ್‌ ಬಳಸುತ್ತೆ. ಸೇನೆ, ಅರೆಸೇನೆಗೆ INSAS ಬದಲು 7 ಲಕ್ಷ AK-203 ರೈಫಲ್ಸ್‌ ಒದಗಿಸಲಾಗುತ್ತಿದೆ. ಬಳಿಕ ರಾಜ್ಯಗಳ ಪೊಲೀಸರಿಗೂ AK-203 ರೈಫಲ್ಸ್‌ ನೀಡಲಾಗುತ್ತಂತೆ. ಲಕ್ಷ ಲಕ್ಷ ದೇಸಿ ನಿರ್ಮಿತ ಅತ್ಯಾಧುನಿಕ AK-203 ತಯಾರಿಸಲು ಅಮೇಥಿಯಲ್ಲಿ ಭರದ ಸಿದ್ಧತೆ ನಡೆದಿದೆ.
ಭಾರತದ ಬಲಿಷ್ಠ ರಕ್ಷಣಾ ಕ್ಷೇತ್ರಕ್ಕೆ ರಷ್ಯಾ ಸಾಥ್‌ :

ಒಡಂಬಡಿಕೆಯ ರೈಫಲ್‌ ತಯಾರಿಕಾ ಘಟಕದಲ್ಲಿ ಭಾರತ ಶೇ. 50.5 ಶೇರು ಹೂಡಿದ್ರೇ, ರಷ್ಯಾದ ಕಲಾಷ್ನಿಕೋವಾ ಕಂಪನಿ ಶೇ. 49.5 ಶೇರು ಹೂಂದಿದೆ. 2018ರ ಅಕ್ಟೋಬರ್‌ನಲ್ಲಿ ಭಾರತ ಪ್ರವಾಸ ಕೈಗೊಂಡಿದ್ದ ರಷ್ಯಾ ಅಧ್ಯಕ್ಷ ವ್ಲಾಡಿಮಿರ್‌ ಪುಟಿನ್‌, ಆಗ ಪ್ರಧಾನಿ ಮೋದಿ ಜತೆಗೆ ಭಾರತದಲ್ಲಿ Kalashnikov ರೈಫಲ್ಸ್‌ ತಯಾರಿಕೆ ಬಗೆಗಿನ ಒಪ್ಪಂದಕ್ಕೆ ಸಹಿ ಹಾಕಿದ್ದರು. ಅಷ್ಟೇ ಅಲ್ಲ, ಭಾರತ ರಕ್ಷಣಾ ವಲಯದಲ್ಲಿ ಅತ್ಯಾಧುನಿಕ ಸಣ್ಣ ಆಯುಧಗಳ ಬೇಡಿಕೆಯನ್ನ ಈ ಒಪ್ಪಂದ ಈಡೇರಿಸುತ್ತದೆ.

ಭಾರತೀಯ ಸೇನೆ ಮತ್ತಷ್ಟು ಬಲಶಾಲಿಗೊಳ್ಳಲು ರಷ್ಯಾ ಕೊಡುಗೆ ನೀಡಲಿದೆ ಅಂತ ವ್ಲಾಡಿಮಿರ್‌ ಪುಟಿನ್ ಹೇಳಿದ್ದರು. ಅಂತೂ ಅಂದುಕೊಂಡಂತಾದ್ರೇ, ಇನ್ನೇನು ಉಗ್ರರು ಬಾಲ ಬಿಚ್ಚದಂತೆ ಮಟ್ಟ ಹಾಕಲು AK-203 ರೈಫಲ್ಸ್‌ ಯೋಧರ ಕೈ ಸೇರಲಿವೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ