ನವದೆಹಲಿ:ಪುಲ್ವಾಮ ದಾಳಿ ಸಮಯದಲ್ಲಿ ಭಾರತದ ಪರ ನಿಂತಿದ್ದ ಅಮೇರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇದೀಗ ಇದ್ದಕ್ಕಿದ್ದಂತೆಯೇ ಭಾರತಕ್ಕೆ ಭಾರೀ ಆಘಾತ ನೀಡಲು ಮುಂದಾಗಿದ್ದು, ಭಾರತಕ್ಕೆ ನೀಡುತ್ತಿದ್ದ ವ್ಯಾಪಾರ ವಿನಾಯಿತಿಯನ್ನು ಸ್ಥಗಿತಗೊಳಿಸಲು ನಿರ್ಧರಿಸಿದ್ದಾರೆ. ಜನರಲ್ ಸಿಸ್ಟಮ್ಸ್ ಆಫ್ ಪ್ರಾಫಿಶನ್ಸ್ (ಜಿಎಸ್ಪಿ) ಅನ್ನು ಭಾರತದಿಂದ ಹೊರಹಾಕುವ ಬಗ್ಗೆ ಯುಎಸ್ ಕಾಂಗ್ರೆಸ್ಗೆ ಮಂಗಳವಾರ ಟ್ರಂಪ್ ತಿಳಿಸಿದ್ದಾರೆ.
ಆದ್ಯತೆಯ ವಹಿವಾಟಿನ ಅಡಿಯಲ್ಲಿ ಭಾರತದಿಂದ ಅಮೆರಿಕಕ್ಕೆ ರಫ್ತಾಗುತ್ತಿದ್ದ 5.6 ಬಿಲಿಯನ್(3,97,13,80,00,000) ಅಮೆರಿಕನ್ ಡಾಲರ್ ಮೌಲ್ಯದ ಭಾರತೀಯ ವಸ್ತುಗಳ ಮೇಲಿದ್ದ ಸುಂಕರಹಿತ ರಫ್ತು ಸೌಲಭ್ಯವನ್ನು ಅಮೆರಿಕ ವಾಪಸ್ ಪಡೆಯುತ್ತಿರುವುದಾಗಿ ಯುಎಸ್ ತಿಳಿಸಿದೆ.
ಜಿಎಸ್ಪಿ ಕಾರ್ಯಕ್ರಮದ ಅಡಿಯಲ್ಲಿ ವಿಶ್ವದಲ್ಲೇ ಭಾರತವು ದೊಡ್ಡ ಫಲಾನುಭವಿ ರಾಷ್ಟ್ರವಾಗಿದೆ. ಟ್ರಂಪ್ ಸರ್ಕಾರದ ಈ ಕ್ರಮದಿಂದಾಗಿ ಭಾರತಕ್ಕೆ ಅಮೆರಿಕದ ಜತೆಗಿನ ವ್ಯಾಪಾರಕ್ಕೆ ಹಿನ್ನಡೆಯಾಗಲಿದ್ದು, ಇದನ್ನು ಪ್ರಬಲ ದಂಡನಾತ್ಮಕ ಕ್ರಮ ಎಂದೇ ವಿಶ್ಲೇಷಿಸಲಾಗುತ್ತಿದೆ.
ಅಮೆರಿಕದ ವಸ್ತುಗಳಿಗೆ ಭಾರತ ಅಧಿಕ ಸುಂಕ ವಿಧಿಸುತ್ತಿರುವ ಹಿನ್ನೆಲೆಯಲ್ಲಿ ವ್ಯಾಪಾರ ಆದ್ಯತೆಯನ್ನು ಕೊನೆಗೊಳಿಸಲು ಮುಂದಾಗಿರುವುದಾಗಿ ಟ್ರಂಪ್ ಹೇಳಿದ್ದಾರೆ.
ಇನ್ನು ಮೇಲೆ ಭಾರತಕ್ಕೆ ಸುಂಕ ರಹಿತ ಸೌಲಭ್ಯವನ್ನು ನೀಡುವುದಿಲ್ಲ. ಡಿಮೆ ತೆರಿಗೆ ಮತ್ತು ಅಮೆರಿಕ ಮಾರುಕಟ್ಟೆ ಸ್ನೇಹಿ ಪರಿಸರ ಸೃಷ್ಟಿ ಮಾಡಿಕೊಡುವುದಾಗಿ ಭರವಸೆ ನೀಡಿದ್ದ ಭಾರತ ಇದೀಗ ತಮ್ಮ ಮಾತು ತಪ್ಪುತ್ತಿದೆ. ಭಾರತ ಮತ್ತು ಅಮೆರಿಕದ ನಡುವೆ ಈ ಕುರಿತು ಹಲವು ಬಾರಿ ಮಾತುಕತೆ ನಡೆದಿದ್ದರೂ, ಭಾರತ ಅಮೆರಿಕದಿಂದ ರಫ್ತಾಗುವ ವಸ್ತುಗಳಿಗೂ ಸಮಾನ ಸೌಲಭ್ಯ ನೀಡದೆ ಇರುವುದು ಮತ್ತು ಭಾರತದ ಮಾರುಕಟ್ಟೆಗೆ ಅಮೆರಿಕದಿಂದ ರಫ್ತಾಗುವ ವಸ್ತುಗಳು ಹಲವು ಅಡೆತಡೆಗಳನ್ನು ಎದುರಿಸಬೇಕಾಗಿರುವುದರಿಂದ ಈ ನಿರ್ಧಾರ ತೆಗೆದುಕೊಂಡಿದ್ದೇನೆ ಎಂದು ಟ್ರಂಪ್ ತಿಳಿಸಿದ್ದಾರೆ.
ಇದಕ್ಕೆ ಹರ್ಲಿ-ಡೇವಿಡ್ಸನ್ ಬೈಕ್ನ ಉದಾಹರಣೆ ನೀಡಿದ ಟ್ರಂಪ್: “ನಾವು ಭಾರತಕ್ಕೆ ಮೋಟಾರ್ಸೈಕಲ್ ಕಳುಹಿಸಿದಾಗ, ಅವರು ನಮಗೆ 100 ಪ್ರತಿಶತ ಚಾರ್ಜ್ ಮಾಡುತ್ತಾರೆ. ಆದರೆ ಭಾರತವು ನಮಗೆ ಮೋಟಾರ್ಸೈಕಲ್ ಕಳುಹಿಸಿದಾಗ, ನಾವು ಅವರಿಗೆ ಯಾವುದೇ ಶುಲ್ಕ ವಿಧಿಸುವುದಿಲ್ಲ.” ಅದಕ್ಕಾಗಿಯೇ ನಾನು ಅದನ್ನು ಸಮೀಕರಣಗೊಳಿಸಲು ಬಯಸುತ್ತೇನೆ ಅಥವಾ ಶುಲ್ಕ ವಿಧಿಸಲು ನಾನು ಬಯಸುತ್ತೇನೆ ಎಂದು ತಿಳಿಸಿದ್ದಾರೆ.