ಮಾದಕ ವಸ್ತು ಮಾರಾಟ ಮಾಡುತ್ತಿದ ವ್ಯಕ್ತಿಯನ್ನು ಬಂಧಿಸಿದ ಪೊಲೀಸರು

ಬೆಂಗಳೂರು, ಮಾ.2- ಮಾದಕ ವಸ್ತುಗಳನ್ನು ಮಾರಾಟ ಮಾಡುತ್ತಿದ್ದ ನೈಜೀರಿಯಾ ಪ್ರಜೆಯೊಬ್ಬನನ್ನು ಸಿಸಿಬಿ ಪೋಲೀಸರು ಬಂಧಿಸಿ 3 ಲಕ್ಷ ರೂ. ಮೌಲ್ಯದ ಮಾದಕ ವಸ್ತುವನ್ನು ವಶಪಡಿಸಿಕೊಂಡಿದ್ದಾರೆ.

ಜೋಸೆಫ್ ಬೆಂಜಮಿನ್ (29) ಬಂಧಿತ ನೈಜೀರಿಯಾ ಪ್ರಜೆಯಾಗಿದ್ದು, ಈತನಿಂದ 20 ಗ್ರಾಂ ತೂಕದ ಕೊಕೈನ್, 9 ಗ್ರಾಂ ತೂಕದ ಎಂಡಿಎಂಎ ಮಾದಕ ವಸ್ತು, 12 ಗ್ರಾಂ ತೂಕದ 36 ಎಸ್ಕಸ್ಟಿ ಎಂಬ ಮಾದಕ ಮಾತ್ರೆಗಳನ್ನು ಹಾಗೂ ಬೈಕ್, ಮೊಬೈಲ್ ವಶಪಡಿಸಿಕೊಳ್ಳಲಾಗಿದೆ.

ವಶಪಡಿಸಿಕೊಂಡಿರುವ ಒಟ್ಟು ಮೌಲ್ಯ 3 ಲಕ್ಷ ರೂ.ಗಳೆಂದು ಅಂದಾಜಿಸಲಾಗಿದ್ದು, ಈ ಸಂಬಂಧ ಕೆಆರ್ ಪುರಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಆರೋಪಿ ಜೋಸೆಫ್ ಭಾರತ ದೇಶದಲ್ಲಿ ನೆಲೆಸಿ ಪಾಸ್‍ಪೋರ್ಟ್ ಇಟ್ಟುಕೊಳ್ಳದೆ ವೀಸಾ ನಿಯಮಗಳನ್ನು ಉಲ್ಲಂಘಿಸಿ ಕಾನೂನು ಬಾಹಿರ ಕೃತ್ಯಗಳಲ್ಲಿ ಭಾಗಿಯಾಗಿದ್ದನು. ಯುವಕ-ಯುವತಿಯರಿಗೆ , ಕಾಲೇಜು ವಿದ್ಯಾರ್ಥಿಗಳು, ಉದ್ಯೋಗಿಗಳಿಗೆ ಗಾಂಜಾ ಮಾರಾಟ ಮಾಡಿ ಅಕ್ರಮ ಸಂಪಾದನೆ ಮಾಡುತ್ತ ಸಾಮಾಜಿಕ ಸ್ವಾಸ್ಥ್ಯ ಹಾಳು ಮಾಡುತ್ತಿದ್ದುದು ಪ್ರಾಥಮಿಕ ವಿಚಾರಣೆಯಿಂದ ತಿಳಿದುಬಂದಿದೆ.

ಕೆಆರ್ ಪುರಂ ವ್ಯಾಪ್ತಿಯ ಟಿ.ಸಿ.ಪಾಳ್ಯ ಮುಖ್ಯರಸ್ತೆ, ಕಾವೇರಿ ಲೇಔಟ್‍ಗೆ ಹೋಗುವ 1ನೆ ಕ್ರಾಸ್‍ನಲ್ಲಿ ಈತ ಕೊಕೈನ್ ಮಾರಾಟ ಮಾಡುತ್ತಿದ್ದಾಗ ಖಚಿತ ಮಾಹಿತಿ ಆಧರಿಸಿ ಸಿಸಿಬಿ ಅಧಿಕಾರಿಗಳು ಈತನನ್ನು ಬಂಧಿಸಿದ್ದಾರೆ.

ಕೇಂದ್ರ ಅಪರಾಧ ವಿಭಾಗದ ಅಪರ ಆಯುಕ್ತ ಅಲೋಕ್‍ಕುಮಾರ್, ಉಪ ಪೋಲೀಸ್ ಆಯುಕ್ತ ಗಿರೀಶ್ ಅವರ ಮಾರ್ಗದರ್ಶನದಲ್ಲಿ ಸಿಸಿಬಿಯ ಸಹಾಯಕ ಪೋಲೀಸ್ ಆಯುಕ್ತ ಮೋಹನ್‍ಕುಮಾರ್ ನೇತೃತ್ವದಲ್ಲಿ ಇನ್ಸ್‍ಪೆಕ್ಟರ್ ನಾರಾಯಣಗೌಡ ಅವರನ್ನೊಳಗೊಂಡ ತಂಡ ಈ ಕಾರ್ಯಾಚರಣೆ ನಡೆಸಿತ್ತು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ