ಟಿ.ನರಸೀಪುರ, ಮಾ.2-ಮೂಗೂರು ಗ್ರಾಮದ ತ್ರಿಪುರ ಸುಂದರಿ ಅಮ್ಮನವರ ಹಾಗೂ ಶಿವ ದೇವಾಲಯ ಸೇರಿದಂತೆ ಗ್ರಾಮ ಸಮಗ್ರ ಅಭಿವೃದ್ಧಿಗೆ ಮಾಡಲು ಇನ್ನೂ 5 ಕೋಟಿ ನೀಡಲು ಸಿದ್ಧನಿದ್ದೇನೆ ಎಂದು ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ತಿಳಿಸಿದರು
ಮೂಗೂರು ಗ್ರಾಮದಲ್ಲಿ ಪುರಾತತ್ವ ಸಂಗ್ರಹಾಲಯ, ಪರಂಪರೆ ಇಲಾಖೆ, 5 ಕೋಟಿ ವೆಚ್ಚದಲ್ಲಿ ಕೈಗೊಂಡಿರುವ ದೇಗುಲ ರಾಜಗೋಪುರ ನಿರ್ಮಾಣ ಹಾಗೂ ಸಂರಕ್ಷಣಾ ಕಾಮಗಾರಿಗೆ ಶಿಲಾನ್ಯಾಸ ನೆರವೇರಿಸಿ ಅವರು ಮಾತನಾಡಿದರು. ಅಮ್ಮನವರ ದೇಗುಲ ಅಭಿವೃದ್ಧಿ ಮಾಡಲು ಚಿಂತನೆ ನಡೆದಿದೆ. ಇದಕ್ಕೆ ಹೆಚ್ಚುವರಿ ಆಗಿ ಅನುದಾನ ಬೇಕಾದಲ್ಲಿ ಸರ್ಕಾರದಲ್ಲಿ ಅನುದಾನ ಕೊರತೆ ಇದೆ ಎಂಬ ಚಿಂತೆ ಬೇಡ. ಕಲ್ಯಾಣಿ ಅಭಿವೃದ್ಧಿಯ ಜತೆಗೆ ಎರಡು ದೇವಾಲಯಗಳ ಅಭಿವೃದ್ಧಿ ಕೈಗೊಳ್ಳುವಂತೆ ಅವರು ತಿಳಿಸಿದರು.
ಅಮ್ಮನವರ ಆರ್ಶೀವಾದದಿಂದ ಮಳೆ ಬೆಳೆ ಚೆನ್ನಾಗಿ ಆದಲ್ಲಿ ರೈತರ ಬದುಕು ಹಸನಾಗುತ್ತದೆ.ರೈತರು ನೆಮ್ಮದಿಯಿಂದ ಬದುಕಲು ತಾಯಿಯ ಆಶೀರ್ವಾದ ಮುಖ್ಯ, ಯಾವುದೇ ಸರ್ಕಾರಿ ಕಾರ್ಯಕ್ರಮ ಯಶಸ್ವಿಯಾಗಲು ದೇವರ ಕೃಪೆ ಅಗತ್ಯ. ಜಾತಿಯ ತಾರತಮ್ಯ ತೊರೆದು ಎಲ್ಲರೂ ಬಡತನ ಮುಕ್ತರಾಗಿ ನೆಮ್ಮದಿಯಿಂದ ಪ್ರತಿ ಕುಟುಂಬಗಳು ಬಾಳಬೇಕು ಎಂದರು.
ರೈತರು ಯಾವುದೇ ಕಾರಣಕ್ಕೂ ಆತ್ಮಹತ್ಯೆ ಮಾಡಿಕೊಳ್ಳುವ ಪ್ರಯತ್ನ ಮಾಡಬೇಡಿ. ಎಲ್ಲವನ್ನು ಎದುರಿಸುವ ಧೈರ್ಯ ಬೆಳೆಸಿಕೊಳ್ಳಿ.ರೈತರ ಮಕ್ಕಳಿಗೆ ಒಳ್ಳೆಯ ಶಿಕ್ಷಣ ಸಿಗಬೇಕು. ಸರ್ಕಾರ ನಿಮ್ಮ ಪರವಾಗಿದೆ. ತೆರಿಗೆ ಹಣವನ್ನು ದುರುಪಯೋಗವಾಗದಂತೆ ಎಚ್ಚರಿಕೆ ವಹಿಸಿ ರೈತರ ಕೃಷಿ ಪಂಪ್ಸೆಟ್ಗಳಿಗೆ ವಿದ್ಯುತ್ ಕೊರತೆ ಪೂರೈಕೆಗೆ ಟಿಸಿ ಸಮಸ್ಯೆಗಳ ದುರಸ್ತಿ ಸರಿಪಡಿಸಿ ತ್ರಿಫೇಸ್ನಲ್ಲಿ 7 ಗಂಟೆ ವಿದ್ಯುತ್ ನೀಡಲು ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದ್ದೇನೆ ಎಂದು ತಿಳಿಸಿದರು
ನೀರಾವರಿ ಸಚಿವ ಸಿ. ಎಸ್. ಪುಟ್ಟರಾಜು ಮಾತನಾಡಿ, ಹೊಸ ರಥ ನಿರ್ಮಾಣ ಮಾಡಲು ಕೂಡ ಚಿಂತನೆ ಮಾಡಲಾಗಿದೆ. 1.5 ಕೋಟಿ ವೆಚ್ಚದಲ್ಲಿ ಕಲ್ಯಾಣಿ ಅಭಿವೃದ್ಧಿ ಕೆರೆ ಅಭಿವೃದ್ಧಿ ಪಡಿಸಿ ಪ್ರವಾಸೋದ್ಯಮ ಪ್ರದೇಶವಾಗಿ ರೂಪಿಸಲು ಚಿಂತನೆ ಇದೆ ಎಂದರು.
ಪ್ರವಾಸೋದ್ಯಮ ಸಚಿವ ಸಾ.ರಾ. ಮಹೇಶ್, ಉಸ್ತುವಾರಿ ಸಚಿವ ಜಿ.ಟಿ. ದೇವೇಗೌಡ, ಜೆಡಿಎಸ್ ರಾಜ್ಯಾಧ್ಯಕ್ಷ ಅಡಗೂರು ಎಚ್. ವಿಶ್ವನಾಥ್, ವಾಟಾಳು ಸಿದ್ದಲಿಂಗಶಿವಚಾರ್ಯ ಸ್ವಾಮೀಜಿ , ಉಪಸಭಾಪತಿ ಮರಿತಿಬ್ಬೇಗೌಡ, ಶಾಸಕರಾದ ಕೆ. ಮಹದೇವ್, ಎಂ. ಅಶ್ವಿನ್ ಕುಮಾರ್, ಜಿ.ಪಂ ಸದಸ್ಯ ಜಯಪಾಲ್ ಭರಣಿ, ಮಾಜಿ ಸದಸ್ಯ ಎಂ. ಆರ್. ಸೋಮಣ್ಣ, ತಾ.ಪಂ ಸದಸ್ಯ ಚಂದ್ರಶೇಖರ್, ತಾಲ್ಲೂಕು ಮಟ್ಟದ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಜರಿದ್ದರು