ದೇಶಕ್ಕೆ ನರೇಂದ್ರ ಮೋದಿಯಂತಹ ನಾಯಕತ್ವದ ಅಗತ್ಯವಿದೆ-ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ

ತುಮಕೂರು,ಮಾ.2- ಕಳೆದ ಚುನಾವಣೆಗಿಂತಲೂ ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಹೆಚ್ಚಿನ ಸ್ಥಾನ ಗಳಿಸಲಿದ್ದು, ಒಟ್ಟು 545 ಲೋಕಸಭಾ ಕ್ಷೇತ್ರಗಳಲ್ಲಿ ನಿಸ್ಸಂದೇಹವಾಗಿ 300 ಸ್ಥಾನಗಳನ್ನು ಪಕ್ಷ ಗೆಲ್ಲಲಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಹೇಳಿದರು.

ಗೊಲ್ಲರ ಸಮಾವೇಶದಲ್ಲಿ ಪಾಲ್ಗೊಳ್ಳುವ ಮುನ್ನ ಮಾತನಾಡಿದ ಅವರು, ದೇಶಕ್ಕೆ ನರೇಂದ್ರ ಮೋದಿಯಂತಹ ನಾಯಕತ್ವ ಅಗತ್ಯವಿದೆ.

ಮಹಾಘಟ್‍ಬಂಧನ್ ಎನ್‍ಡಿಎಗೆ ಸರಿಸಾಟಿಯಲ್ಲ ಎಂದು ಹೇಳಿದರು.

2014ರ ಲೋಕಸಭೆ ಚುನಾವಣೆಗಿಂತಲೂ ನಾವು ಹೆಚ್ಚಿನ ಸ್ಥಾನವನ್ನು ಈ ಬಾರಿ ಗಳಿಸಲಿದ್ದೇವೆ. ಒಟ್ಟು 545 ಲೋಕಸಭಾ ಕ್ಷೇತ್ರಗಳ ಪೈಕಿ ಬಿಜೆಪಿ ನಿಸ್ಸಂದೇಹವಾಗಿ 300 ಸ್ಥಾಗಳನ್ನು ಗೆಲ್ಲಲಿದೆ.ದೇಶಕ್ಕೆ ನರೇಂದ್ರ ಮೋದಿಯಂತಹ ನಾಯಕತ್ವ ಅಗತ್ಯವಿದೆ. ಮಹಾಘಟ್‍ಬಂಧನ್ ಎನ್‍ಡಿಎಗೆ ಸರಿಸಾಟಿಯಲ್ಲ ಎಂದರು.

ಇನ್ನು ಒಂದು ವಾರದಲ್ಲಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಅವರನ್ನು ಭೇಟಿ ಮಾಡಿ 28 ಲೋಕಸಭಾ ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಅಂತಿಮಗೊಳಿಸಲಾಗುವುದು. ಪ್ರತಿ ಕ್ಷೇತ್ರದಲ್ಲೂ 5ಕ್ಕಿಂತ ಹೆಚ್ಚು ಆಕಾಂಕ್ಷಿಗಳಿದ್ದಾರೆ. ಅಂತಿಮವಾಗಿ ಗೆಲ್ಲುವ ಅಭ್ಯರ್ಥಿಗಳಿಗೆ ಆದ್ಯತೆ ನೀಡಲಾಗುವುದು ಎಂದು ಹೇಳಿದರು.

ಬಿಎಸ್‍ವೈ ಯಡವಟ್ಟು:
ತುಮಕೂರಿನಲ್ಲಿ ಯಾರು ಅಭ್ಯರ್ಥಿ ಎಂಬುದು ಈವರೆಗೂ ಖಚಿತವಾಗಿಲ್ಲ. ಇಲ್ಲಿಯೂ ಕೂಡ ಅನೇಕ ಆಕಾಂಕ್ಷಿಗಳಿದ್ದಾರೆ. ಮಾಜಿ ಸಂಸದ ಜಿ.ಎಸ್.ಬಸವರಾಜ್ ಸೇರಿದಂತೆ ಅನೇಕರು ಸ್ಪರ್ಧೆಗೆ ಒಲವು ತೋರಿದ್ದಾರೆ.

ಜಿಲ್ಲಾ ಮುಖಂಡರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಸರ್ವಸಮ್ಮತ ಅಭ್ಯರ್ಥಿಯನ್ನು ಚುನಾವಣಾ ಕಣಕ್ಕಿಳಿಸಲಾಗುವುದು ಎಂದರು.

ಇನ್ನು ಮಂಡ್ಯದಿಂದ ಸ್ಪರ್ಧಿಸಲು ಚಿತ್ರನಟ ದಿ.ಅಂಬರೀಶ್ ಅವರ ಪತ್ನಿ ಸುಮಲತಾ ಬಿಜೆಪಿಗೆ ಸೇರ್ಪಡೆಯಾಗಲಿದ್ದಾರೆಯೇ ಎಂದು ಮಾಧ್ಯಮದವರು ಪ್ರಶ್ನಿಸಿದಾಗ ಅಂಥ ಯಾವ ಬೆಳವಣಿಗೆಗಳು ನಡೆದಿಲ್ಲ. ಯಾರಿಗೆ ಎಲ್ಲಿಂದ ಟಿಕೆಟ್ ನೀಡಬೇಕು ಎಂಬುದನ್ನು ಮುಖಂಡರು ತೀರ್ಮಾನಿಸುತ್ತಾರೆ. ಅಭ್ಯರ್ಥಿಗಳ ಪರ ಪ್ರಚಾರ ನಡೆಸುವುದಷ್ಟೇ ನಮ್ಮ ಕೆಲಸ.

ಊಹಾಫೋಹ ನಾನು ಉತ್ತರಿಸುವುದಿಲ್ಲ ಎಂದು ತುಸು ಅಸಮಾಧಾನದಿಂದಲೇ ನುಡಿದರು.

ಮುಂಬರುವ ಲೋಕಸಭೆ ಚುನಾವಣೆಯಲ್ಲಿ ರಾಜ್ಯದಿಂದ 120 ಕ್ಷೇತ್ರಗಳನ್ನು ಗೆದ್ದು ಪ್ರಧಾನಿ ನರೇಂದ್ರಮೋದಿ ಅವರ ಕೈ ಬಲಪಡಿಸಬೇಕಾದ ಅಗತ್ಯವಿದೆ ಎಂದು ಹೇಳಿ ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಯಡವಟ್ಟು ಮಾಡಿದ ಪ್ರಸಂಗ ನಡೆಯಿತು.

20 ಕ್ಷೇತ್ರಗಳನ್ನು ಗೆಲ್ಲುತ್ತೇವೆ ಎಂದು ಹೇಳುವ ಭರದಲ್ಲಿ ರಾಜ್ಯದಿಂದಲೇ 120 ಕ್ಷೇತ್ರಗಳನ್ನು ಗೆಲ್ಲುತ್ತೇವೆ ಎಂದು ಹೇಳಿದರು. ನಂತರ ತಡವರಿಸಿಕೊಂಡು 20 ಕ್ಷೇತ್ರಗಳಲ್ಲಿ ಗೆದ್ದೇ ಗೆಲ್ಲುತ್ತೇವೆ. ಇದರ ಬಗ್ಗೆ ಯಾರಿಗೂ ಯಾವ ರೀತಿಯ ಅನುಮಾನ ಬೇಡ. ರಾಜ್ಯದಲ್ಲಿ ನರೇಂದ್ರ ಮೋದಿ ಪರವಾದ ವಾತಾವರಣ ಇದೆ. ಕಾಂಗ್ರೆಸ್-ಜೆಡಿಎಸ್ ಏನೇ ಸರ್ಕಸ್ ಮಾಡಿದರೂ 10ಕ್ಕಿಂತ ಹೆಚ್ಚು ಸ್ಥಾನವನ್ನು ಗೆಲ್ಲಲು ಸಾಧ್ಯವೇ ಇಲ್ಲ ಎಂದು ಖಂಡಾತುಂಡವಾಗಿ ಹೇಳಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ