ಬೆಂಗಳೂರು, ಫೆ.28- ಪತ್ನಿಯನ್ನು ಕೊಲೆ ಮಾಡಿದ ಪ್ರಕರಣ ಸಾಬೀತಾದ ಹಿನ್ನೆಲೆಯಲ್ಲಿ ಪತಿ ವಿನಯ್ಕುಮಾರ್ ಎಂಬಾತನಿಗೆ ಇಲ್ಲಿನ ಸಿಟಿ ಸಿವಿಲ್ ನ್ಯಾಯಾಲಯ ಜೀವಾವಧಿ ಶಿಕ್ಷೆ ಹಾಗೂ 15 ಸಾವಿರ ರೂ. ದಂಡ ವಿಧಿಸಿ ತೀರ್ಪು ನೀಡಿದೆ.
ಪ್ರಕರಣದಲ್ಲಿ ಎರಡನೆ ಆರೋಪಿಯಾದ ಸೋಮಶೇಖರ್ಗೆ 5 ವರ್ಷಗಳ ಸಾದಾ ಸಜೆ ಹಾಗೂ 5 ಸಾವಿರ ರೂ. ದಂಡ ವಿಧಿಸಿದೆ.
ಕಳೆದ 2005ರಲ್ಲಿ ವಿನಯ್ಕುಮಾರ್ ವನಜಾಕ್ಷಿ ಎಂಬುವವರನ್ನು ಮದುವೆಯಾಗಿದ್ದ. ಹುಳಿಮಾವು ಪೊಲೀಸ್ ಠಾಣೆ ವ್ಯಾಪ್ತಿಯ ಗೊಟ್ಟಿಗೆರೆಯಲ್ಲಿ ವಾಸವಾಗಿದ್ದ ಈತ ವನಜಾಕ್ಷಿಯ ಎಲ್ಲ ಒಡವೆಗಳನ್ನು ಅಡವಿಟ್ಟು ಊರಿನಲ್ಲಿ ಜಮೀನು ವ್ಯವಹಾರ ಮಾಡಿದ್ದ.
ಒಡವೆಗಳನ್ನು ಬಿಡಿಸಿಕೊಡುವಂತೆ ಪತ್ನಿ ಒತ್ತಾಯಿಸುತ್ತಿದ್ದಳು. ಈಕೆಗೆ ಸರಿಯಾಗಿ ಕಿವಿ ಕೇಳಿಸುವುದಿಲ್ಲ ಎಂಬ ಉದ್ದೇಶದಿಂದ ಆಕೆಯನ್ನು ಮುಗಿಸಬೇಕೆಂದು ತೀರ್ಮಾನಿಸಿ ಎರಡನೆ ಆರೋಪಿ ಸೋಮಶೇಖರ್ನೊಂದಿಗೆ ಸೇರಿಕೊಂಡು ಮಸಾಲಾಪುರಿ ತಂದು ನಿದ್ದೆಮಾತ್ರೆ ಬೆರೆಸಿ ತಿನ್ನಿಸಿ ಆಕೆ ಪ್ರಜ್ಞೆ ತಪ್ಪಿದಾಗ ಟಾಟಾಸುಮೋ ಕಾರಿನಲ್ಲಿ ಹಾಕಿಕೊಂಡು ಹೋಗಿ ಪುಂಗನೂರಿನ ಬಳಿ ಇರುವ ಮೂಗಾಡಿ ಕೆರೆ ಸೇತುವೆ ಬಳಿ ವಯರ್ನಿಂದ ಕುತ್ತಿಗೆಗೆ ಬಿಗಿದು ಕೊಲೆ ಮಾಡಿ ಶವವನ್ನು ಯಾರಿಗೂ ಕಾಣದಂತೆ ಸೇತುವೆಗೆ ಹಾಕಿ ದೊಡ್ಡ ಪೈಪ್ನಲ್ಲಿ ಮುಚ್ಚಿಟ್ಟಿದ್ದರು.
ಅಲ್ಲದೆ, ವಿನಯ್ಕುಮಾರ್ ಮನೆಗೆ ಬಂದು ನಿಂಬೆಹಣ್ಣು ಕೊಯ್ದು ಹಾಕಿ ಅರಿಶಿನ-ಕುಂಕುಮ ಇಟ್ಟು ಮೊಟ್ಟೆಗಳನ್ನು ಒಡೆದು ವನಜಾಕ್ಷಿಯನ್ನು ಮಾಟ-ಮಂತ್ರ ಮಾಡಿ ಯಾರೋ ಕರೆದುಕೊಂಡು ಹೋಗಿದ್ದಾರೆಂದು ನಂಬಿಸಿ, ಸಾಕ್ಷ್ಯಾಧಾರಗಳನ್ನು ನಾಶ ಮಾಡಿರುತ್ತಾರೆಂದು ಪ್ರಕರಣ ದಾಖಲಾಗಿತ್ತು.
ಇನ್ಸ್ಪೆಕ್ಟರ್ ಬಲರಾಮ್ಗೌಡ ಅವರು ದೋಷಾರೋಪಣ ಪಟ್ಟಿ ಸಲ್ಲಿಸಿದ್ದರು. ನ್ಯಾಯಾಲಯದಲ್ಲಿ ವಿಚಾರಣೆ ನಡೆದು ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ನ್ಯಾಯಾಧೀಶರಾದ ಬಿ.ನಂದಕುಮಾರ್ ಅವರು ಪ್ರಕರಣದ ಮೊದಲ ಆರೋಪಿ ವಿನಯ್ಕುಮಾರ್ಗೆ ಜೀವಾವಧಿ ಶಿಕ್ಷೆ ಹಾಗೂ ಎರಡನೆ ಆರೋಪಿಗೆ ಐದು ವರ್ಷಗಳ ಸಾದಾ ಸಜೆ ವಿಧಿಸಿ ತೀರ್ಪು ನೀಡಿದ್ದಾರೆ.