ಮೈಸೂರು, ಫೆ.28- ಅಪರಿಚಿತ ವ್ಯಕ್ತಿಯೊಬ್ಬನನ್ನು ದುಷ್ಕರ್ಮಿಗಳು ಕೊಲೆಗೈದು ರಸ್ತೆ ಬದಿ ಬಿಸಾಕಿ ಹೋಗಿರುವ ಘಟನೆ ಜಯಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಮೈಸೂರು ತಾಲೂಕಿನ ಅರಸನ ಗೇಟ್ ಮತ್ತು ಮಹದೇವಪುರ ಗ್ರಾಮದ ನಡುವಿನ ಮೈಸೂರು, ಎಚ್.ಡಿ.ಕೋಟೆ ರಸ್ತೆಯಲ್ಲಿ ಇಂದು ಬೆಳಿಗ್ಗೆ ಶವ ಪತ್ತೆಯಾಗಿದೆ.
ದಾರಿಹೋಕರು ಶವವನ್ನು ಕಂಡು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು ಪರಿಶೀಲಿಸಿದ್ದು ಕೊಲೆಯಾದ ವ್ಯಕ್ತಿ ಸುಮಾರು 35ವರ್ಷದಂತೆ ಕಾಣುತ್ತಿದ್ದು ಈತನ ಹೆಸರು, ವಿಳಾಸ ತಿಳಿದುಬಂದಿಲ್ಲ.
ಈತನನ್ನು ದುಷ್ಕರ್ಮಿಗಳು ಬೇರೆಡೆ ಕೊಲೆ ಮಾಡಿ ಇಲ್ಲಿ ತಂದು ಹಾಕಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. ಕೊಲೆಗೀಡಾದ ವ್ಯಕ್ತಿಯ ಬಲಗೈ ಉಂಗುರದ ಬೆರಳಿನಲ್ಲಿ ಗಣಪತಿ ಚಿತ್ರವಿರುವ ಹಿತ್ತಾಳೆ ಉಂಗುರುವಿದೆ ಎಂದು ಪೊಲೀಸರು ತಿಳಿಸಿದ್ದಾರೆ.