ವಾಯುನೆಲೆಯಲ್ಲಿ ಸಂಭವಿಸಿದ ಅಗ್ನಿ ಅವಘಡ-ತಮ್ಮ ಕಾರುಗಳನ್ನು ಗುರುತಿಸಿದ ಬಹುತೇಕ ಮಾಲೀಕರು

ಬೆಂಗಳೂರು, ಫೆ.26- ಯಲಹಂಕ ವಾಯುನೆಲೆಯ ಪಾರ್ಕಿಂಗ್ ಸ್ಥಳದಲ್ಲಿ ಸಂಭವಿಸಿದ ಅಗ್ನಿ ಅವಘಡದಲ್ಲಿ ಬೆಂಕಿಗಾಹುತಿಯಾಗಿರುವ ಬಹುತೇಕ ಕಾರುಗಳ ಮಾಲೀಕರು ತಮ್ಮ ಕಾರುಗಳನ್ನು ಗುರುತಿಸಿದ್ದು, ಸಂಜೆ ವೇಳೆಗೆ ಉಳಿದ ಕಾರುಗಳ ಗುರುತಿಸುವ ಕಾರ್ಯ ಪೂರ್ಣಗೊಳ್ಳಲಿದೆ.

ನಿನ್ನೆವರೆಗೆ 119 ಕಾರುಗಳ ಮಾಲೀಕರು ತಮ್ಮ ತಮ್ಮ ಕಾರುಗಳನ್ನು ಗುರುತಿಸಿದ್ದಾರೆ. ಇಂದು ಸಂಜೆ ವೇಳೆಗೆ ಉಳಿದ ಕಾರುಗಳ ಗುರುತಿಸುವ ಕಾರ್ಯ ಬಹುತೇಕ ಪೂರ್ಣಗೊಳ್ಳುವ ಸಾಧ್ಯತೆಯಿದೆ.

ಯಲಹಂಕ ಠಾಣೆ ಪೊಲೀಸರು, ಆರ್‍ಟಿಒ ಅಧಿಕಾರಿಗಳು ಮತ್ತು ಇನ್ಸೂರೆನ್ಸ್ ಕಂಪೆನಿ ಅಧಿಕಾರಿಗಳು ಕಾರು ಮಾಲೀಕರುಗಳಿಗೆ ಎಲ್ಲ ರೀತಿಯ ಸಹಾಯ ಮಾಡುತ್ತಿದ್ದಾರೆ.

ಕಾರು ಮಾಲೀಕರಿಗೆ ಬೇಕಾದ ಅಗತ್ಯ ದಾಖಲೆಗಲಾದ ನೋಂದಣಿ ಪ್ರಮಾಣ ಪತ್ರದ ನಕಲು, ಚಾಲನಾ ಅನುಜ್ಞಾ ಪತ್ರ ನಕಲು ಪಡೆಯಲು ಸಾರಿಗೆ ಅಧಿಕಾರಿಗಳು ಸಹಕರಿಸಿದ್ದಾರೆ.

ಕಾರಣ ಇನ್ನೂ ತಿಳಿದುಬಂದಿಲ್ಲ: ವಾಯುನೆಲೆಯ ಕಾರು ಪಾರ್ಕಿಂಗ್ ಸ್ಥಳದಲ್ಲಿ ಬೆಂಕಿ ಹೇಗೆ ಕಾಣಿಸಿಕೊಂಡಿತು ಎಂಬುದು ಇನ್ನೂ ನಿಖರವಾಗಿ ತಿಳಿದುಬಂದಿಲ್ಲ.

ಈ ಬಗ್ಗೆ ವಾಯುದಳದ ಅಧಿಕಾರಿಗಳು, ಅಗ್ನಿಶಾಮಕ ದಳದ ಅಧಿಕಾರಿಗಳು, ಯಲಹಂಕ ಉಪವಿಭಾಗದ ಪೊಲೀಸರು ತೀವ್ರ ತನಿಖೆ ಕೈಗೊಂಡಿದ್ದಾರೆ.

ಕಳೆದ ಶನಿವಾರ (ಮಾ.23) ಮಧ್ಯಾಹ್ನ ಸುಮಾರು 12 ಗಂಟೆ ಸಮಯದಲ್ಲಿ ವಾಯುನೆಲೆಯ ಗೇಟ್ ನಂ.5ರ ಕಾರು ಪಾರ್ಕಿಂಗ್ ಸ್ಥಳದಲ್ಲಿ ತೀವ್ರ ಬೆಂಕಿ ಕಾಣಿಸಿಕೊಂಡು 277 ಕಾರುಗಳು ಅಗ್ನಿಗೆ ಆಹುತಿಯಾಗಿದ್ದರೆ, 26 ಕಾರುಗಳು ಭಾಗಶಃ ಹಾನಿಗೀಡಾಗಿದ್ದವು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ