ತುಮಕೂರು, ಫೆ.26- ಚಾಲಕನ ನಿಯಂತ್ರಣ ತಪ್ಪಿದ ಕಾರೊಂದು ರಸ್ತೆ ಬದಿಯ ತಡೆಗೋಡೆಗೆ ಡಿಕ್ಕಿ ಹೊಡೆದ ಪರಿಣಾಮ ಬೆಂಗಳೂರಿನ ಮಾರತ್ಹಳ್ಳಿ ಮೂಲದ ಮೂವರು ಯುವಕರು ಮೃತಪಟ್ಟಿರುವ ಘಟನೆ ಶಿರಾ-ಹಿರಿಯೂರು ರಾಷ್ಟ್ರೀಯ ಹೆದ್ದಾರಿ- 48ರ ಮಾನಂಗಿ ಬಳಿ ಇಂದು ಮುಂಜಾವ ಸಂಭವಿಸಿದೆ.
ಚೇತನ್(24), ವಿನಯ್(25) ಹಾಗೂ ಲಿಖಿತ್(25) ಮೃತಪಟ್ಟ ಯುವಕರು.
ಹೇಮಂತ್(28) ಹಾಗೂ ಲೋಹಿತ್(27) ಎಂಬವರು ಗಾಯಗೊಂಡಿದ್ದು, ಅವರನ್ನು ತುಮಕೂರು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.
ಇಂದು ಮುಂಜಾವ 3.40 ಸುಮಾರಿಗೆ ಈ ಅಪಘಾತ ಸಂಭವಿಸಿದ್ದು, ಬೆಂಗಳೂರಿನಿಂದ ಗೋವಾಗೆ ಪ್ರವಾಸಕ್ಕೆ ಹುಂಡಾಯ್ ಐ20 ಕಾರಿನಲ್ಲಿ ತೆರಳುತ್ತಿದ್ದಾಗ ಈ ಘಟನೆ ಸಂಭವಿಸಿದೆ.
ಘಟನೆಯಲ್ಲಿ ಚೇತನ್ ಮತ್ತು ವಿನಯ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಲಿಖಿತ್ ತುಮಕೂರು ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆಗೆ ಸ್ಪಂದಿಸದೆ ಕೊನೆಯುಸಿರೆಳೆದಿದ್ದಾರೆ.
ಘಟನಾ ಸ್ಥಳಕ್ಕೆ ತಾವರೆಕೆರೆ ಎಸ್ಐ ಪ್ರವೀಣ್ಕುಮಾರ್, ಸಿಪಿಐ ಶಿವಕುಮಾರ್, ವೆಂಕಟೇಶ್ ಭೇಟಿ ನೀಡಿ ಪರಿಶೀಲಿಸಿ ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.