ತುಮಕೂರು, ಫೆ.26-ಕೈಗಾರಿಕೆಗಳನ್ನು ಸ್ಥಾಪಿಸಿದಲ್ಲಿ ನೂರಾರು ನಿರುದ್ಯೋಗಿಗಳಿಗೆ ಉದ್ಯೋಗ ಕಲ್ಪಿಸಿದಂತಾಗುತ್ತದೆ ಎಂದು ಮಹಾನಗರ ಪಾಲಿಕೆ ಸದಸ್ಯ ಮಲ್ಲಿಕಾರ್ಜುನ್ ಅಭಿಪ್ರಾಯಪಟ್ಟರು.
ಕೈಮಗ್ಗ ಮತ್ತು ಜವಳಿ ಇಲಾಖೆ ಹಾಗೂ ಜಿಲ್ಲಾ ಪಂಚಾಯತ್ ಸಹಯೋಗದಲ್ಲಿ ನಗರದ ಶ್ರೀ ಸಿದ್ಧಾರ್ಥ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಸ್ಟೆಪ್ ಸಭಾಂಗಣದಲ್ಲಿ ಏರ್ಪಡಿಸಿದ್ದ ಇಲಾಖಾ ಯೋಜನೆಗಳ ಹಾಗೂ ಜವಳಿ ಉದ್ದಿಮೆದಾರರ ಉದ್ಯಮಶೀಲತಾಭಿವೃದ್ಧಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಜಿಲ್ಲೆಯ ಪೂರ್ವ ವಲಯ ಕೈಮಗ್ಗ ಮತ್ತು ಜವಳಿ ಇಲಾಖೆಯ ಜಂಟಿ ನಿರ್ದೇಶಕ ಸಿ.ಎಸ್. ಯೋಗೇಶ್ ಮಾತನಾಡಿ, ಕೈಗಾರಿಕೆ ಘಟಕಗಳನ್ನು ಸ್ಥಾಪನೆ ಮಾಡಿ ಉತ್ಪಾದನೆಯಲ್ಲಿ ತೊಡಗಿಕೊಳ್ಳುವವರಿಗೆ ಅರಿವು ಮೂಡಿಸುವುದು ಕಾರ್ಯಕ್ರಮದ ಮುಖ್ಯ ಉದ್ದೇಶವಾಗಿದೆ. ಜವಳಿ ಕ್ಷೇತ್ರ ವಿಶಾಲವಾದುದು. ಉದ್ಯಮದಲ್ಲಿ ಕೃಷಿ ಮೊದಲನೇ ಸ್ಥಾನ ಹೊಂದಿದ್ದರೆ, ಜವಳಿ ಎರಡನೇ ಸ್ಥಾನ ಪಡೆದಿದೆ. ಉಡುಪುಗಳು ಎಲ್ಲರಿಗೂ ಅತ್ಯಾವಶ್ಯಕವಾಗಿದ್ದು, ಬೇಡಿಕೆ ನಿರಂತರವಾಗಿರುತ್ತದೆ. ಈ ನಿಟ್ಟಿನಲ್ಲಿ ಕೈಗಾರಿಕೆ ಸ್ಥಾಪಿಸುವವರು ಜವಳಿ ಕ್ಷೇತ್ರವನ್ನು ಆಯ್ಕೆ ಮಾಡಿಕೊಂಡಲ್ಲಿ ಆರ್ಥಿಕವಾಗಿ ಅಭಿವೃದ್ಧಿ ಹೊಂದಬಹುದು ಎಂದು ತಿಳಿಸಿದರು.
ಶ್ರೀ ಸಿದ್ಧಾರ್ಥ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಕಾಲೇಜಿನ ಪ್ರಾಂಶುಪಾಲ ಡಾ|| ಎಂ.ಕೆ. ವೀರಯ್ಯ ಮಾತನಾಡಿ, ಉಡುಪುಗಳಿಗೆ ನಿರಂತರ ಬೇಡಿಕೆ ಹೆಚ್ಚಾಗುತ್ತಿದ್ದು, ಉದ್ಯಮಶೀಲರು ಅಭಿವೃದ್ಧಿ ಹೊಂದಲು ಜವಳಿ ಕ್ಷೇತ್ರದಲ್ಲಿ ತೊಡಗಿಸಿ ಕೊಂಡಲ್ಲಿ ಸೋಲನ್ನು ಕಾಣುವ ಸಾಧ್ಯತೆ ಇಲ್ಲ ಎಂದು ಅವರು ತಿಳಿಸಿದರು.
ಜಿಲ್ಲಾ ಮಾರ್ಗದರ್ಶಿ ಬ್ಯಾಂಕ್ನ ಮುಖ್ಯ ವ್ಯವಸ್ಥಾಪಕ ವಿ.ಎಸ್. ಜ್ಯೋತಿಗಣೇಶ್, ಜಿಲ್ಲಾ ಕೌಶಲ್ಯಾಭಿವೃದ್ಧಿ ಅಧಿಕಾರಿ ಕೆ. ಶ್ರೀನಿವಾಸ್, ಕೈಮಗ್ಗ ಮತ್ತು ಜವಳಿ ಇಲಾಖೆಯ ಉಪ ನಿರ್ದೇಶಕ ಎಸ್. ವಿರೂಪಾಕ್ಷಪ್ಪ ಮತ್ತಿತರರು ಹಾಜರಿದ್ದರು.