ತುಮಕೂರು, ಮಾ.15-ಹಾಲಿ ಶಾಸಕರಿರುವ ಕ್ಷೇತ್ರದಲ್ಲಿ ಆ ಪಕ್ಷದಿಂದ ಇನ್ನೊಬ್ಬರು ಟಿಕೆಟ್ಗಾಗಿ ಅರ್ಜಿ ಹಾಕಲು ಹಿಂದೇಟು ಹಾಕುತ್ತಾರೆ. ಆದರೆ ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ಅವರು ಸ್ಪರ್ಧಿಸಲು ಮುಂದಾಗಿರುವ ಕೊರಟಗೆರೆ ಕ್ಷೇತ್ರದಲ್ಲಿ ಕಾಂಗ್ರೆಸ್ನಿಂದಲೇ ಇನ್ನೊಬ್ಬ ಆಕಾಂಕ್ಷಿ ಟಿಕೆಟ್ಗೆ ಫೈಟ್ ನಡೆಸುತ್ತಿದ್ದಾರೆ.
ಕೆಪಿಸಿಸಿ ಮಾಹಿತಿ ತಂತ್ರಜ್ಞಾನ ವಿಭಾಗದ ರಾಜ್ಯಕಾರ್ಯದರ್ಶಿ ಪರಮೇಶ್ವರ್ ನಾಯಕ್ ಕೊರಟಗೆರೆಯಿಂದ ನನಗೆ ಟಿಕೆಟ್ ನೀಡಿ ಎಂದು ಕೆಪಿಸಿಸಿಗೆ ಅರ್ಜಿ ಹಾಕಿದ್ದಾರೆ.
ಇದೇ ಸಂದರ್ಭದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ನಾನು ಕಳೆದ 27 ವರ್ಷಗಳಿಂದ ಕಾಂಗ್ರೆಸ್ನಲ್ಲಿ ವಿವಿಧ ಹುದ್ದೆಗಳಲ್ಲಿ ಕರ್ತವ್ಯ ನಿಭಾಯಿಸಿದ್ದೇನೆ. ಬಂಜಾರ ಸಮುದಾಯದ ರಾಜ್ಯಾಧ್ಯಕ್ಷನಾಗಿ ಸಮುದಾಯ ಸಂಘಟನೆ ಮಾಡಿದ್ದೇನೆ. ನನಗೆ ಈ ಬಾರಿ ಪ್ರಾತಿನಿಧ್ಯ ನೀಡಬೇಕು ಎಂದು ಅರ್ಜಿ ಸಲ್ಲಿಸಿರುವೆ ಎಂದು ತಿಳಿಸಿದ್ದಾರೆ.
ಕೊರಟಗೆರೆ ವಿಧಾನಸಭಾ ಕ್ಷೇತ್ರಕ್ಕೆ ಮುಂಬರುವ ಚುನಾವಣೆಗೆ ಕಾಂಗ್ರೆಸ್ನಿಂದ ಟಿಕೆಟ್ ನೀಡಬೇಕೆಂದು ಎಐಸಿಸಿ ಅಧ್ಯಕ್ಷ ರಾಹುಲ್ಗಾಂಧಿಯವರನ್ನು ಭೇಟಿಯಾಗಿ ಮನವಿ ಮಾಡಿಕೊಂಡಿರುವೆ. ಅವರೂ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದಿದ್ದಾರೆ.
ತುಮಕೂರು ಜಿಲ್ಲಾ ಕಾಂಗ್ರೆಸ್ ಕಚೇರಿಗೆ ವೀಕ್ಷಕರು ಬಂದಾಗ ಪರಮೇಶ್ವರ್ ನಾಯಕ್ ಅರ್ಜಿ ಸಲ್ಲಿಸಿದರು. ಜಿಲ್ಲಾ ಕಾಂಗ್ರೆಸ್ ಅದನ್ನು ಮಾನ್ಯ ಮಾಡಲಿಲ್ಲ. ಹಾಗಾಗಿ ನೇರವಾಗಿ ಕೆಪಿಸಿಸಿಗೆ ಅರ್ಜಿ ಸಲ್ಲಿಸಿರುವುದಾಗಿ ಅವರು ತಿಳಿಸಿದ್ದಾರೆ.