ಬೆಂಗಳೂರು, ಫೆ.23- ಸಾರಿಗೆ ಇಲಾಖೆಯಲ್ಲಿ ಕಂಪ್ಯೂಟರ್ , ಬಿಡಿ ಭಾಗಗಳ ಖರೀದಿ ಹಾಗೂ ಸಹಿ ದುರ್ಬಳಕೆ ಆರೋಪದ ಮೇಲೆ 26 ಮಂದಿಯನ್ನು ಅಮಾನತು ಮಾಡಲಾಗಿದೆ ಎಂದು ಸಾರಿಗೆ ಸಚಿವ ಡಿ.ಸಿ.ತಮ್ಮಣ್ಣ ತಿಳಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರೆಗ್‍ಜಿನ್ ಖರೀದಿಗೆ ಸಂಬಂಧಿಸಿದಂತೆ ನಾಲ್ಕು ಮಂದಿ ಸಿಬ್ಬಂದಿಯನ್ನು ಅಮಾನತು ಮಾಡಲಾಗಿದೆ.
ಕಂಪ್ಯೂಟರ್ ಹಾಗೂ ಸರ್ವರ್ ಖರೀದಿಯಲ್ಲಿ 7 ಮಂದಿ ಸಿಬ್ಬಂದಿಗಳನ್ನು ಅಮಾನತು ಮಾಡಲಾಗಿದೆ. ವಾಯುವ್ಯ ರಸ್ತೆ ಸಾರಿಗೆ ನಿಗಮದ ವ್ಯವಸ್ಥಾಪಕ ನಿರ್ದೇಶಕರ ಸಹಿ ನಕಲಿ ಮಾಡಿ 140 ಮಂದಿ ವರ್ಗಾವಣೆಗೆ ಸಂಬಂಧಿಸಿದಂತೆ 15 ಮಂದಿಯನ್ನು ಅಮಾನತು ಮಾಡಲಾಗಿದೆ ಎಂದು ಹೇಳಿದರು.
ಬಿಡಿ ಭಾಗಗಳ ಮಳಿಗೆ:
ಸಾರಿಗೆ ಸಂಸ್ಥೆಗಳ ಆವರಣದಲ್ಲೇ ಟೈರು ಸೇರಿದಂತೆ ಬಿಡಿ ಭಾಗಗಳ ಮಳಿಗೆ ಆರಂಭಿಸಲಾಗುವುದು. ಮಾಸಿಕವಾರು ಅಗತ್ಯವಿರುವ ಬಿಡಿ ಭಾಗಗಳನ್ನು ಖರೀದಿಸಿ ನಷ್ಟವಾಗುವುದನ್ನು ತಪ್ಪಿಸಲು ಉದ್ದೇಶಿಸಲಾಗಿದೆ.ಬಿಡಿ ಭಾಗಗಳ ವಿಚಾರದಲ್ಲಿ ದುರುಪಯೋಗವಾಗುತ್ತಿರುವುದನ್ನು ಜಾಗೃತ ದಳ ಪತ್ತೆಹಚ್ಚಿದೆ.
ಬಿಎಂಟಿಸಿಯಲ್ಲಿ 2017-18ರಲ್ಲಿ 117 ಕೋಟಿ ರೂ.ವೆಚ್ಚದ ಸಾಮಗ್ರಿ ಖರೀದಿಸಲಾಗಿದೆ. ಇದಕ್ಕೆ ಸರಿಯಾದ ಲೆಕ್ಕ ವಿಲ್ಲ. ಹೀಗಾಗಿ ತನಿಖೆ ನಡೆಸಲಾಗುತ್ತಿದೆ ಎಂದರು.
ಸುಮಾರು ಎರಡು ವರ್ಷದ ವರೆಗೆ ಬಿಡಿ ಭಾಗಗಳ ಮೂಲ ತಯಾರಿಕೆ ಸಂಸ್ಥೆಯೊಂದಿಗೆ ಒಪ್ಪಂದ ಮಾಡಿಕೊಂಡು ಸಾರಿಗೆ ಸಂಸ್ಥೆ ಆವರಣದಲ್ಲಿ ಮಳಿಗೆ ತೆರೆಯಲು ಅವಕಾಶ ಮಾಡಿಕೊಡಲಾಗುವುದು.ಇದರಿಂದ ಅನಗತ್ಯ ಬಿಡಿ ಭಾಗಗಳ ದಾಸ್ತಾನು ವಾಗುವುದನ್ನು ತಪ್ಪಿಸುವುದಲ್ಲದೆ, ಅನಗತ್ಯ ನಷ್ಟವನ್ನು ಕೂಡ ತಪ್ಪಿಸಬಹುದಾಗಿದೆ.ಬಿಎಂಟಿಸಿಯಲ್ಲಿವ ವಾರ್ಷಿಕ 250 ಕೋಟಿ ನಷ್ಟವಾಗುತ್ತಿದೆ.ನಷ್ಟ ಪತ್ತೆಗೆ ಕಾರಣದ ಹುಡುಕಾಡವೂ ನಡೆಯುತ್ತಿದೆ ಎಂದು ಹೇಳಿದರು.
ಮಾರುಕಟ್ಟೆ ದರಕ್ಕಿಂತ ಹೆಚ್ಚಿನ ದರ ನೀಡಿ ಕಂಪ್ಯೂಟರ್ ಹಾಗೂ ಸರ್ವರನ್ನು ಖರೀದಿಸಲಾಗಿದೆ ಎಂದು ತಿಳಿಸಿದರು.