ಬಿಕನೇರ್: ಪುಲ್ವಾಮ ಉಗ್ರರ ದಾಳಿಯಲ್ಲಿ 40ಕ್ಕೂ ಹೆಚ್ಚು ಯೋಧರನ್ನು ಬಲಿಪಡೆದ ಹಿನ್ನಲೆಯಲ್ಲಿ ಪಾಕಿಸ್ತಾನದ ವಿರುದ್ಧ ದೇಶಾದ್ಯಂತ ಆಕ್ರೋಶಗಳು ವ್ಯಕ್ತವಾಗುತ್ತಿದ್ದು, ಪಾಕ್ ವಿರುಧ ದಿನದಿಂದ ದಿನಕ್ಕೆ ಭಾರತ ಕಠಿಣ ಕ್ರಮಗಳನ್ನು ಕೈಗೊಳ್ಳುತ್ತಿದೆ. ಈ ನಡುವೆ ರಾಜಸ್ಥಾನದ ಬಿಕನೇರ್ ಜಿಲ್ಲೆಯಲ್ಲಿ ಪಾಕಿಸ್ತಾನ ಪ್ರಜೆಗಳು 48 ಗಂಟೆಗಳಲ್ಲಿ ಜಿಲ್ಲೆಯನ್ನು ತೊರೆಯುವಂತೆ ಅಲ್ಲಿನ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ.
ಜಮ್ಮು ಕಾಶ್ಮೀರದ ಪುಲ್ವಾಮಾದಲ್ಲಿ ಉಗ್ರ ದಾಳಿಯ ಹಿನ್ನೆಲೆಯಲ್ಲಿ ಎಚ್ಚೆತ್ತಿರುವ ಜಿಲ್ಲಾಡಳಿತವು ಸೆಕ್ಷನ್ 144 ಅಡಿಯಲ್ಲಿ ಪಾಕಿಸ್ತಾನದ ಪ್ರಜೆಗಳು ತಕ್ಷಣವೇ ಹೋಟೆಲ್ ಮತ್ತು ಲಾಡ್ಜ್ಗಳಲ್ಲಿ ತಂಗುವುದನ್ನು ನಿಷೇಧಿಸಲಾಗಿದೆ.
ಇದಲ್ಲದೆ ಭಾರತೀಯ ಪ್ರಜೆಗಳು ಪಾಕಿಸ್ತಾನದವರನ್ನು ಯಾವುದೇ ಉದ್ಯೋಗಕ್ಕಾಗಿ ನೇಮಿಸಿಕೊಳ್ಳುವ ಹಾಗಿಲ್ಲ ಮತ್ತು ಯಾವುದೇ ಪ್ರತ್ಯಕ್ಷ ಹಾಗೂ ಪರೋಕ್ಷ ಉದ್ಯೋಗದ ಸಂಬಂಧವನ್ನು ಹೊಂದುವಂತಿಲ್ಲ ಎಂದು ಆದೇಶಿಸಲಾಗಿದೆ.
ಪಾಕಿಸ್ತಾನದಿಂದ ಯಾವುದೇ ರೀತಿಯ ಕರೆಗಳನ್ನಾಗಲಿ, ಸೈನ್ಯಕ್ಕೆ ಸಂಬಂಧಿಸಿದ ಯಾವುದೇ ರಹಸ್ಯ ಮಾಹಿತಿಯನ್ನು ಹಂಚಿಕೊಳ್ಳುವಂತಿಲ್ಲ. ಅಪರಿಚಿತ ವ್ಯಕ್ತಿಗಳೊಂದಿಗೆ ಸೂಕ್ಷ್ಮ ವಿಚಾರಗಳನ್ನು ವಿನಿಮಯ ಮಾಡಿಕೊಳ್ಳುವಂತಿಲ್ಲ. ಮುಖ್ಯವಾಗಿ, ಬಿಕನೇರ್ನಲ್ಲಿ ವಾಸಿಸುವ ಯಾರೂ ಕೂಡ ಪಾಕಿಸ್ತಾನದಲ್ಲಿ ನೋಂದಣಿಯಾಗಿರುವ ಸಿಮ್ಕಾರ್ಡ್ಗಳನ್ನು ಕೂಡ ಉಪಯೋಗಿಸಿಕೊಳ್ಳುವಂತಿಲ್ಲ ಎಂದು ಜಿಲ್ಲಾಡಳಿತ ಸೂಚನೆ ನೀಡಿದೆ.
ಈ ಆದೇಶವು ಎರಡು ತಿಂಗಳು ಅನ್ವಯಿಸುತ್ತದೆ. ಆದರೆ, ವಿದೇಶಿ ನೋಂದಣಿ ಅಧಿಕಾರಿಗಳೊಂದಿಗೆ ನೋಂದಣಿ ಮಾಡಿದ ಪಾಕಿಸ್ತಾನಿ ಪ್ರಜೆಗಳಿಗೆ ಅನ್ವಯವಾಗುವುದಿಲ್ಲ ಎಂದು ಆದೇಶದಲ್ಲಿ ತಿಳಿಸಲಾಗಿದೆ.
Bikaner: Administration orders Pak citizens to leave district