ಪಾಂಡವಪುರ, ಫೆ.19- ಗ್ರಾಮದಲ್ಲಿ ರಾತ್ರಿ ದೇವಿರಮ್ಮ ಜಾತ್ರೆ ನಡೆಯುತ್ತಿದ್ದಾಗ ಗುಂಪೊಂದು ಲಾಂಗು, ಮಚ್ಚು, ಚಾಕುವಿನಿಂದ ದಾಳಿ ಮಾಡಿ ಗ್ರಾಮ ಪಂಚಾಯ್ತಿ ಸದಸ್ಯನನ್ನು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಮಂಡ್ಯ ಜಿಲ್ಲೆ ಪಾಂಡವಪುರ ತಾಲೂಕಿನ ಚಿಕ್ಕಾಡೆ ಗ್ರಾಮ ಪಂಚಾಯ್ತಿ ಸದಸ್ಯ ತಿಮ್ಮೇಗೌಡ(55) ಕೊಲೆಯಾದ ದುರ್ದೈವಿ.
ಘಟನೆ ವೇಳೆ ತಿಮ್ಮೇಗೌಡ ಅವರ ಜೊತೆಯಲ್ಲಿದ್ದ ಪುತ್ರರಾದ ವಿನಾಯಕ, ವಿನೋದ್, ಗೌತಮ್ ಸಹ ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಚಿಕ್ಕಾಡೆ ಗ್ರಾಮದಲ್ಲಿ ದೇವಿರಮ್ಮ ದೇವಾಲಯವಿದ್ದು, ವರ್ಷಕ್ಕೊಮ್ಮೆ ದೇವಾಲಯದ ಬಾಗಿಲು ತೆರೆದು ದೇವಿಗೆ ವಿಶೇಷ ಪೂಜೆ ಸಲ್ಲಿಸಿ ಜಾತ್ರೆ ಮಾಡಲಾಗುತ್ತದೆ.
ಅದರಂತೆ ನಿನ್ನೆ ದೇವಿರಮ್ಮ ಜಾತ್ರೆ ನಡೆಯುತ್ತಿತ್ತು.ಬೆಳಗಿನ ಜಾವ 1ಗಂಟೆ ಸಮಯದಲ್ಲಿ ದೇವಿಯ ಮೆರವಣಿಗೆ ಸಾಗುತ್ತಿತ್ತು.ಈ ಸಂದರ್ಭದಲ್ಲಿ ಗ್ರಾಮದ ಹಾಗೂ ಸುತ್ತಮುತ್ತಲಿನ ಜನರು ಪಾಲ್ಗೊಂಡಿದ್ದರು.
ಇದೇ ಸಮಯವನ್ನು ಕಾದಿದ್ದ ಇದೇ ಗ್ರಾಮದವರೇ ಆದ ದೇವೇಗೌಡ, ಇವರ ಅಣ್ಣ ಯೋಗೇಗೌಡ, ಮಗ ಮದನ ಹಾಗೂ ಸಂಬಂಧಿ ಕುಮಾರ್ ಏಕಾಏಕಿ ಲಾಂಗು, ಮಚ್ಚು, ಚಾಕು ಹಿಡಿದು ತಿಮ್ಮೇಗೌಡನ ಮೇಲೆ ದಾಳಿ ನಡೆಸಿ ಬರ್ಬರವಾಗಿ ಹತ್ಯೆ ಮಾಡಿದ್ದಾರೆ ಎನ್ನಲಾಗಿದೆ.
ಸುದ್ದಿ ತಿಳಿದು ಎಸ್‍ಪಿ ಶಿವಪ್ರಕಾಶ ದೇವರಾಜ್ ಹಾಗೂ ಗ್ರಾಮಾಂತರ ಠಾಣೆ ಪೊಲೀಸರು ಸ್ಥಳಕ್ಕೆ ದೌಡಾಯಿಸಿ ಸ್ಥಳ ಪರಿಶೀಲನೆ ನಡೆಸಿ ಮೃತದೇಹವನ್ನು ಸರಕಾರಿ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆಗೆ ಒಳಪಡಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.
ಹಳೆ ದ್ವೇಷದಿಂದ ತಿಮ್ಮೇಗೌಡರನ್ನು ಕೊಲೆ ಮಾಡಿರುವ ಶಂಕೆಯನ್ನು ಪೊಲೀಸರು ವ್ಯಕ್ತಪಡಿಸಿದ್ದಾರೆ.
ಮತ್ತೊಂದೆಡೆ ಇತ್ತೀಚೆಗೆ ಪ್ರೇಮಿಗಳ ವಿವಾಹ ಸಂಬಂಧ ತಿಮ್ಮೇಗೌಡ ತೀರ್ಪು ನೀಡಿದ್ದೇ ಕೊಲೆಗೆ ಕಾರಣವಿರಬಹುದೆಂಬ ಅನುಮಾನ ಸಹ ವ್ಯಕ್ತವಾಗಿದೆ.
ತಿಮ್ಮೇಗೌಡರು ಗ್ರಾಮದ ಯಜಮಾನರೂ ಸಹ ಆಗಿದ್ದರು. ಗ್ರಾಮದಲ್ಲಿ ಏನೇ ಸಮಸ್ಯೆಯಾದರೂ ಗ್ರಾಮಸ್ಥರೆಲ್ಲಾ ತಿಮ್ಮೇಗೌಡ ಅವರ ಬಳಿಯೇ ಬಂದು ಪರಿಹಾರ ಕಂಡು ಕೊಳ್ಳುತ್ತಿದ್ದರು.
ಉತ್ತಮ ವ್ಯಕ್ತಿತ್ವ ಹೊಂದಿದ್ದಂತಹ ತಿಮ್ಮೇಗೌಡ ಕೊಲೆ ಮಾಡಿ ಪರಾರಿಯಾಗಿರುವ ಆರೋಪಿಗಳಿಗಾಗಿ ಪೊಲೀಸರು ಶೋಧ ಕಾರ್ಯ ಕೈಗೊಂಡಿದ್ದಾರೆ.