ನನ್ನ ನಿವೃತ್ತಿ ವೇತನ ಸೆಟ್ಲ್ ಮಾಡಿ… ಇಲ್ಲ ಅಂದ್ರೆ ಸಾಯಲು ಅನುಮತಿ ನೀಡಿ

ಬೆಂಗಳೂರು, ಮಾ.15-ನನ್ನ ನಿವೃತ್ತಿ ವೇತನ ಸೆಟ್ಲ್ ಮಾಡಿ… ಇಲ್ಲ ಅಂದ್ರೆ ಸಾಯಲು ಅನುಮತಿ ನೀಡಿ ಎಂದು ವಿಷದ ಬಾಟಲಿ ಹಾಗೂ ದಯಾಮರಣ ಪತ್ರ ಕೈಯಲ್ಲಿಡಿದು ವ್ಯಕ್ತಿಯೊಬ್ಬ ಪಾಲಿಕೆ ಕೇಂದ್ರ ಕಚೇರಿ ಬಳಿ ಓಡಾಡುತ್ತಿದ್ದ ದೃಶ್ಯ ನೋಡುಗರ ಗಮನ ಸೆಳೆಯಿತು.
ಕಂದಾಯ ಮೌಲ್ಯಮಾಪಕರಾಗಿ ಕಾರ್ಯನಿರ್ವಹಿಸುತ್ತಿದ್ದ ಎಸ್.ಜಿ.ರೋಗಿ ಎಂಬುವರು ಕಳೆದ 2007ರಲ್ಲಿ ನಿವೃತ್ತಿ ಹೊಂದಿದ್ದು, ಇಲ್ಲಿಯವರೆಗೂ ಇವರಿಗೆ ಬರಬೇಕಾದ ನಿವೃತ್ತಿವೇತನ ಬಾರದ ಹಿನ್ನೆಲೆಯಲ್ಲಿ ಇಂದು ಈ ನಿರ್ಧಾರ ಕೈಗೊಂಡಿದ್ದರು.
ಸೇವೆಯಲ್ಲಿದ್ದಾಗ 60 ಸಾವಿರ ಮೌಲ್ಯದ ವಿದ್ಯುತ್ ಉಪಕರಣಗಳು ಕಳ್ಳತನವಾಗಿವೆ ಎಂದು ಇವರ ಮೇಲೆ ಆರೋಪ ಹೊರಿಸಿ ನಿವೃತ್ತಿ ವೇತನವನ್ನು ಅಧಿಕಾರಿಗಳು ತಡೆಹಿಡಿದಿದ್ದರು.
ಈ ಸಂಬಂಧ ನ್ಯಾಯಾಲಯದಲ್ಲೂ ಸಹ ವಿಚಾರಣೆ ನಡೆದಿದ್ದು, 2017ರಲ್ಲಿ ಇವರ ಮೇಲಿನ ಆರೋಪಕ್ಕೆ ಸೂಕ್ತ ದಾಖಲೆಗಳಿಲ್ಲದ ಕಾರಣ ನಿರ್ದೋಷಿ ಎಂದು ನ್ಯಾಯಾಲಯ ತೀರ್ಪು ನೀಡಿರುತ್ತದೆ. ತದನಂತರ ಇಲಾಖಾ ವಿಚಾರಣೆಗೆ ಒಳಪಡಿಸಿ ಅಲ್ಲಿಯೂ ಸಹ ಆರೋಪದಿಂದ ಮುಕ್ತರಾಗಿದ್ದು, ಇವರಿಗೆ ತಡೆಹಿಡಿಯಲಾಗಿದ್ದ ನಿವೃತ್ತಿ ವೇತನ ಮಂಜೂರು ಮಾಡುವಂತೆ ಆದೇಶ ಹೊರಡಿಸಲಾಗಿತ್ತು.
ಆದರೆ ಇಲ್ಲಿಯವರೆಗೂ ನನಗೆ ಬರಬೇಕಾದ ಹಣವನ್ನು ನೀಡದೆ ಸಾವಿರಾರು ಬಾರಿ ಕಚೇರಿಗೆ ಅಲೆಸುತ್ತಿದ್ದು, ರೋಗಿ ಪಾಲಿಕೆ ಕಚೇರಿ ಮುಂದೆ ಅರೆಬೆತ್ತಲೆ ಉರುಳು ಸೇವೆ ಸಹ ಮಾಡಿದ್ದಾರೆ. ಇದಕ್ಕೂ ಜಗ್ಗದ ಕಲ್ಲು ಮನಸ್ಸಿನ ಅಧಿಕಾರಿಗಳ ವಿರುದ್ಧ ಅಂತಿಮವಾಗಿ ನನಗೆ ನಿವೃತ್ತ ವೇತನ ನೀಡಿ ಇಲ್ಲ, ದಯಾಮರಣ ನೀಡಿ ಎಂದು ಅಲವತ್ತುಕೊಂಡು ವಿಷದ ಬಾಟಲಿ ಹಿಡಿದು ಕೇಂದ್ರ ಕಚೇರಿ ಮುಂದೆ ಧರಣಿ ಕುಳಿತಿದ್ದಾರೆ.
ಇನ್ನಾದರೂ ಅಧಿಕಾರಿಗಳು ಈ ವೃದ್ಧ ಜೀವಕ್ಕೆ ನಿವೃತ್ತ ವೇತನ ನೀಡಿ ನ್ಯಾಯ ಒದಗಿಸುವರೇ ಕಾದು ನೋಡಬೇಕಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ