ನವದೆಹಲಿ, ಮಾ.15-ಯುದ್ಧ ವಿಮಾನಗಳ ಕೊರತೆ ನೀಗಿಸುವ ನಿಟ್ಟಿನಲ್ಲಿ ಭಾರತೀಯ ವಾಯು ಪಡೆ (ಐಎಎಫ್) 324 ದೇಶೀಯ ನಿರ್ಮಿತ ಹಗುರ ಫೈಟರ್ ಜೆಟ್ಗಳ ಸೇರ್ಪಡೆಗೆ ಸಮ್ಮತಿಸಿದೆ. ಇದರೊಂದಿಗೆ 30 ವರ್ಷಗಳ ಬಳಿಕ ತೇಜಸ್ ಜೆಟ್ಗಳು ಪೂರ್ಣ ಪ್ರಮಾಣದಲ್ಲಿ ಐಎಎಫ್ಗೆ ಸೇರ್ಪಡೆಯಾಗುತ್ತಿರುವುದು ಮಹತ್ವದ ಬೆಳವಣಿಗೆಯಾಗಿದೆ. ಅಭಿವೃದ್ಧಿಗೊಂಡ ಮೂರು ದಶಕಗಳ ನಂತರವೂ ತೇಜಸ್ ಸಮರ ವಿಮಾನಗಳು ಯುದ್ಧ ಕಾರ್ಯಾಚರಣೆಗೆ ಪೂರ್ಣಪ್ರಮಾಣದಲ್ಲಿ ಸಿದ್ಧವಾಗಿಲ್ಲ. ಸೀಮಿತ ಶ್ರೇಣಿಗೆ ಮಾತ್ರ ಅದು ಕಾರ್ಯನಿರ್ವಹಿಸಬಲ್ಲದು ಎಂದು ಅನೇಕ ವರ್ಷಗಳಿಂದ ಐಎಎಫ್ ಹೇಳುತ್ತಾ ಬಂದಿತ್ತು.
ಈಗ ಐಎಎಫ್ ಮೊದಲ ಹಂತದಲ್ಲಿ ಈಗ ಹಿಂದುಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ನಿಂದ (ಎಚ್ಎಎಲ್) 75,000 ಕೋಟಿ ರೂ.ಗಳ ವೆಚ್ಚದಲ್ಲಿ 123 ತೇಜಸ್ ಫೈಟರ್ ಜೆಟ್ಗಳನ್ನು ಖರೀದಿಸಲು ಸಿದ್ಧವಾಗಿದೆ. ಹೊಸ ತೇಜಸ್ ಯುದ್ಧ ವಿಮಾನಗಳು ಉತ್ತಮ ಹಾರಾಟ ಕ್ಷಮತೆ, ರೇಡಾರ್, ಶಸ್ತ್ರಾಸ್ತ್ರಗಳನ್ನು ಕೊಂಡೊಯ್ಯಬಲ್ಲ ವರ್ಧಿತ ಸಾಮಥ್ರ್ಯ ಹಾಗೂ ಶಕ್ತಿಶಾಲಿ ಎಂಜಿನ್ಗಳೊಂದಿಗೆ ಸಂಪೂರ್ಣ ಹೊಸ ಫೈಟರ್ಗಳಾಗಿವೆ. ತೇಜಸ್ ಮಾರ್ಕ್-2 ಜೆಟ್ಗಳು ಅತ್ಯುತ್ತಮ ಕಾರ್ಯನಿರ್ವಹಣೆಗೆ ಸಹಕಾರಿಯಾಗಲಿದೆ ಎಂದು ವರದಿಗಳು ಹೇಳಿವೆ.