ಮದುರೈ, ಮಾ.15- ಆಡಳಿತಾರೂಢ ಎಐಎಡಿಎಂಕೆಯ ಬಂಡಾಯ ನಾಯಕ ಹಾಗೂ ಆರ್.ಕೆ.ನಗರ ಶಾಸಕ ಟಿಟಿವಿ ದಿನಕರನ್ ಇಂದು ತಮ್ಮ ಪಕ್ಷದ ಅಧಿಕೃತ ಹೆಸರನ್ನು ಘೋಷಿಸಿದ್ದಾರೆ. ಇದರೊಂದಿಗೆ ತಮಿಳುನಾಡಿನಲ್ಲಿ ಮತ್ತೊಂದು ರಾಜಕೀಯ ಪಕ್ಷ ಅಸ್ತಿತ್ವಕ್ಕೆ ಬಂದಂತಾಗಿದೆ. ದಿನಕರನ್ ನೇತೃತ್ವದ ಹೊಸ ಪಕ್ಷಕ್ಕೆ ಅಮ್ಮಾ ಮಕ್ಕಳ ಮುನ್ನೇತ್ರ ಕಳಗಂ(ಎಎಂಎಂಕೆ) ಎಂದು ಹೆಸರಿಡಲಾಗಿದೆ.
ಮಧುರೈ ಜಿಲ್ಲೆಯ ಮೇಲೂರಿನಲ್ಲಿ ಇಂದು ನಡೆದ ಬೃಹತ್ ರ್ಯಾಲಿಯಲ್ಲಿ ದಿನಕರನ್ ತಮ್ಮ ಪಕ್ಷದ ಹೆಸರನ್ನು ಘೋಷಿಸಿ ದ್ವಜವನ್ನು ಅನಾವರಣಗೊಳಿಸಿದರು. ದಿನಕರನ್ ಪಕ್ಷದ ಧ್ವಜದಲ್ಲಿ ತಮಿಳುನಾಡು ಮುಖ್ಯಮಂತ್ರಿಯಾಗಿದ್ದ ಜಯಲಲಿತಾ ಅವರ ಭಾವಚಿತ್ರವಿದೆ.
ಈ ಸಂದರ್ಭದಲ್ಲಿ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ತಮ್ಮ ಪಕ್ಷವು ರೈತರು, ಬಡವರು ಮತ್ತು ಶ್ರೀಸಾಮಾನ್ಯನ ಪರವಾಗಿ ಕಾರ್ಯನಿರ್ವಹಿಸಲಿದೆ ಎಂದು ಘೋಷಿಸಿದರು. ತಮಿಳುನಾಡು ಮುಖ್ಯಮಂತ್ರಿ ಎಡಪ್ಪಾಡಿ ಪಳನಿಸ್ವಾಮಿ ಮತ್ತು ಉಪ ಮುಖ್ಯಮಂತ್ರಿ ಪನ್ನೀರ್ ಸೆಲ್ವಂ ಎಐಎಡಿಎಂಕೆಗೆ ದ್ರೋಹ ಬಗೆದಿದ್ದಾರೆ. ಇಂಥ ಸ್ವಾರ್ಥ ನಾಯಕರು ಮತ್ತು ದ್ರೋಹಿಗಳಿಂದ ತಮಿಳುನಾಡು ಜನತೆ ಏನನ್ನು ತಾನೆ ನಿರೀಕ್ಷಿಸಲು ಸಾಧ್ಯ ಎಂದು ದಿನಕರನ್ ಟೀಕಿಸಿದರು. ತಮ್ಮ ಪಕ್ಷದ ಚಿಹ್ನೆ ಮತ್ತು ಧ್ವಜ ಪೂರ್ಣ ವಿನ್ಯಾಸವನ್ನು ಸದ್ಯಸಲ್ಲೇ ಅನಾವರಣಗೊಳಿಸುವುದಾಗಿ ಅವರು ತಿಳಿಸಿದರು.
ಅನರ್ಹಗೊಂಡಿರುವ ಶಾಸಕ ವೆಟ್ರಿವೆಲ್ ಅವರು ದಿನಕರನ್ ಅವರಿಗೆ ಬೆಳ್ಳಿ ವಸ್ತ್ರದ ಶಾಲನ್ನು ಸಮರ್ಪಿಸಿದರು. ಎಐಎಡಿಎಂಕೆಯಿಂದ ಹೊರಬಂದಿರುವ ಮುಖಂಡರೂ ಸಮಾರಂಭದಲ್ಲಿ ಭಾಗವಹಿಸಿದ್ದರು. ಮಧುರೈನ ಮೇಲೂರಿನಲ್ಲಿ ಶಶಿಕಲಾ ನಟರಾಜನ್ ಅವರ ಭಾವಚಿತ್ರಗಳು ಮತ್ತು ಕಟೌಟ್‍ಗಳು ರಾರಾಜಿಸುತ್ತಿದ್ದವು.