ಬೆಂಗಳೂರು, ಫೆ.16- ಮತದಾರರೆ ಮತದಾರರ ಪಟ್ಟಿಯಲ್ಲಿ ನಿಮ್ಮ ಹೆಸರಿಲ್ಲವೆ..? ಈಗಲೂ ಕಾಲ ಮಿಂಚಿಲ್ಲ. ನಾಮಪತ್ರ ಸಲ್ಲಿಕೆಗೆ 10 ದಿನಗಳು ಇರುವವರೆಗೂ ಹೆಸರು ಸೇರಿಸಬಹುದು.ಅದಕ್ಕಾಗಿ ವಿಶೇಷ ಸೌಲಭ್ಯ ಕಲ್ಪಿಸಲಾಗಿದೆ.ಇದನ್ನು ಬಳಸಿಕೊಂಡು ಹೆಸರು ಸೇರ್ಪಡೆಗೊಳಿಸಿ ಮತದಾನದ ಮಹತ್ತರ ಪ್ರಕ್ರಿಯೆಯಲ್ಲಿ ಭಾಗವಹಿಸಿ ಎಂದು ಜಿಲ್ಲಾ ಚುನಾವಣಾಧಿಕಾರಿಯೂ ಆಗಿರುವ ಬಿಬಿಎಂಪಿ ಆಯುಕ್ತ ಮಂಜುನಾಥ್ ಪ್ರಸಾದ್ ಇಂದಿಲ್ಲಿ ಮನವಿ ಮಾಡಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಬಿಎಂಪಿ ವ್ಯಾಪ್ತಿಯ ಮೂರು ಲೋಕಸಭಾ ಕ್ಷೇತ್ರ ಹಾಗೂ ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಮೂರು ವಾರ್ಡ್ ಹಾಗೂ ಚಿಕ್ಕಬಳ್ಳಾಪುರ ಕ್ಷೇತ್ರದ ಯಲಹಂಕ ವಾರ್ಡ್ನಲ್ಲಿ ಚುನಾವಣೆ ನಡೆಸುವ ಹೊಣೆ ನಮ್ಮ ಬಿಬಿಎಂಪಿಗೆ ಸಿಕ್ಕಿದೆ.ಅದಕ್ಕಾಗಿ ಎಲ್ಲ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.
ಮತದಾರರ ಹೆಸರು ಸೇರ್ಪಡೆ ಹಾಗೂ ಲೋಪದೋಷ ಸರಿಪಡಿಸಲು ಒಂದು ಚುನಾವಣಾ ಆ್ಯಪ್ ಮಾಡಲಾಗಿದೆ.ಮತದಾರರ ಗುರುತಿನ ಸಂಖ್ಯೆ ಎಂಟ್ರಿ ಮಾಡಿದರೆ ಮತದಾರರ ಪಟ್ಟಿಯಲ್ಲಿ ನಿಮ್ಮ ಹೆಸರು ಇದೆಯೇ, ಇಲ್ಲವೇ ಎಂಬುದು ಗೊತ್ತಾಗುತ್ತದೆ.
ಬಸ್ ನಿಲ್ದಾಣ, ರೈಲ್ವೆ ನಿಲ್ದಾಣ ಮತ್ತಿತರೆಡೆ ಕಿಯೋನಿಕ್ಸ್ ಇಡಲಾಗಿರುತ್ತದೆ. ಇದರಲ್ಲಿ ಸಿಇಒ ಕರ್ನಾಟಕ, ರಾಷ್ಟ್ರೀಯ ಮತದಾರರ ವೆಬ್ಸೈಟ್ಗೆ ಹೋದರೆ ಎಲ್ಲ ಮಾಹಿತಿ ಸಿಗಲಿದೆ.ಒಂದು ವೇಳೆ ಹೆಸರಿಲ್ಲದಿದ್ದರೆ ಆನ್ಲೈನ್ನಲ್ಲಿ ಈ ಕೂಡಲೇ ಹೆಸರು ನೊಂದಾಯಿಸಿಕೊಳ್ಳಬಹುದು ಎಂದು ಹೇಳಿದರು.
ಬೆಂಗಳೂರು ಒನ್, ಎಆರ್ಒ, ಆರ್ಒ ಕಚೇರಿಗಳಲ್ಲಿ ವೋಟರ್ ಫೆಸಿಲಿಟೇಷನ್ ಕೇಂದ್ರ ಮಾಡಿದ್ದೇವೆ. ಅಲ್ಲೂ ಕೂಡ ಹೆಸರು ನೊಂದಾಯಿಸಬಹುದು.ಲೋಕಸಭೆ ಚುನಾವಣೆ ಬಗ್ಗೆ ಮಾಹಿತಿ ಅಥವಾ ದೂರು ನೀಡಲು 1950 ಸಹಾಯವಾಣಿ ಮೂಲಕ ನೆರವು ಪಡೆಯಬಹುದು.ಎರಡು ಪಾಳಿಯಲ್ಲಿ ನೌಕರರು ಕೆಲಸ ಮಾಡುತ್ತಾರೆ. ಉಚಿತ ಕರೆ ಮಾಡಿ ಮಾಹಿತಿ ಪಡೆಯಬಹುದು.
ಕಳೆದ ಚುನಾವಣೆಯಲ್ಲಿ ಬಿಬಿಎಂಪಿಯಲ್ಲಿ ವಿಶೇಷ ಆ್ಯಪ್ ಸಿದ್ಧಪಡಿಸಿತ್ತು. ಅದು ಈಗ ಇಡೀ ದೇಶಕ್ಕೆ ಮಾದರಿಯಾಗಿದೆ. ಸಾರ್ವಜನಿಕರು ಈ ಆ್ಯಪ್ ಡೌನ್ಲೋಡ್ ಮಾಡಿಕೊಂಡು ಚುನಾವಣೆ ಬಗ್ಗೆ ಸಂಪೂರ್ಣ ಮಾಹಿತಿ ಪಡೆಯಬಹುದು ಎಂದು ಹೇಳಿದರು.
ಅಕ್ರಮ ಗುರುತಿನ ಚೀಟಿ ಇಟ್ಟುಕೊಳ್ಳುವುದು ಶಿಕ್ಷಾರ್ಹ ಅಪರಾಧ: ಕಳೆದ ಚುನಾವಣೆಯಲ್ಲಿ ಒಂದೇ ಸ್ಥಳದಲ್ಲಿ ನೂರಾರು ಗುರುತಿನ ಚೀಟಿಗಳು ಸಿಕ್ಕಿದ್ದವು. ಇದನ್ನು ಗಂಭೀರವಾಗಿ ಪರಿಗಣಿಸಲಾಗಿದೆ.ಯಾವುದೇ ವ್ಯಕ್ತಿ ತಮ್ಮ ಕುಟುಂಬಕ್ಕೆ ಸಂಬಂಧಿಸಿದವರ ಗುರುತಿನ ಚೀಟಿ ಇಟ್ಟುಕೊಳ್ಳಬಹುದು.ತಮ್ಮ ಗುರುತಿನ ಚೀಟಿ ಇನ್ನೊಬ್ಬರಿಗೆ ಕೊಡುವುದು, ಬೇರೆಯವರ ಗುರುತಿನ ಚೀಟಿ ಇಟ್ಟುಕೊಳ್ಳುವುದು ಎರಡೂ ಶಿಕ್ಷಾರ್ಹ. ಆದ್ದರಿಂದ ಹೀಗೆ ಅಕ್ರಮವಾಗಿ ಗುರುತಿನ ಚೀಟಿ ಇಟ್ಟುಕೊಳ್ಳಬಾರದು ಎಂದು ಸಲಹೆ ನೀಡಿದರು.
ಇದರ ಬಗ್ಗೆ ಒಂದು ನಿಮಿಷದ ಜಾಹೀರಾತು ಸಿದ್ಧಪಡಿಸಿದ್ದು, ಇದನ್ನು ಎಲ್ಲ ಮಾಧ್ಯಮಗಳಲ್ಲೂ ಪ್ರಚಾರಪಡಿಸಿ ಸಾರ್ವಜನಿಕರಲ್ಲಿ ಅರಿವು ಮೂಡಿಸಲಿದ್ದೇವೆ ಎಂದು ಹೇಳಿದರು.
ಮ್ಯಾಜಿಸ್ಟ್ರೇಟ್ ಪವರ್: ಮೂರು ಲೋಕಸಭಾ ಕ್ಷೇತ್ರಗಳಿಗೆ ನ್ಯಾಯ ಸಮ್ಮತ ಚುನಾವಣೆ ನಡೆಸುವ ಸಂಬಂಧ 8515 ಮತದಾನ ಕೇಂದ್ರಗಳನ್ನು ನಾವು ಗುರುತಿಸಿದ್ದೇವೆ. ಪ್ರತಿ 10 ರಿಂದ 12 ಮತದಾನ ಕೇಂದ್ರಗಳನ್ನು ಒಂದು ಸೆಕ್ಟರ್ ಎಂದು ಮಾಡಿ ಅಲ್ಲಿಗೆ ಬಿಬಿಎಂಪಿ ಅಧಿಕಾರಿಗಳು ಹಾಗೂ ಒಬ್ಬ ಪೊಲೀಸ್ ಅಧಿಕಾರಿ ಸೇರಿದಂತೆ ಒಂದು ಸೆಕ್ಟರ್ ಮ್ಯಾನೇಜ್ಮೆಂಟ್ ಟೀಮ್ ಮಾಡಿದ್ದೇವೆ. ಈ ತಂಡದ ಉಸ್ತುವಾರಿ ನೋಡಿಕೊಳ್ಳುವ ಪಾಲಿಕೆ ಅಧಿಕಾರಿಗೆ ಮ್ಯಾಜಿಸ್ಟ್ರೇಟ್ ಪವರ್ ಕೊಟ್ಟಿದ್ದೇವೆ. ಇದೇ ರೀತಿ 410 ಮ್ಯಾನೇಜ್ಮೆಂಟ್ ಸೆಕ್ಟರ್ ಟೀಮ್ ನಿಯೋಜನೆ ಮಾಡಿದ್ದೇವೆ. ಈಗಾಗಲೇ ಈ ಎಲ್ಲ ಅಧಿಕಾರಿಗಳಿಗೂ ಕೂಡ ತರಬೇತಿ ನೀಡಿದ್ದೇವೆ ಎಂದರು.
ಒತ್ತಡ ಹೇರಿದರೆ ಕ್ರಮ: ವಲ್ಗರೆಬೆಲಿಟಿ ಮ್ಯಾಪಿಂಗ್ ಟೀಮ್ಅನ್ನು ಸಿದ್ಧಪಡಿಸಿದ್ದು, ಈ ಟೀಮ್ನ ಸದಸ್ಯರು ಮತದಾನ ಕೇಂದ್ರಗಳಿರುವ ಎಲ್ಲ ಬಡಾವಣೆಗಳಲ್ಲಿ ಸಂಚರಿಸುತ್ತಾರೆ. ಈ ಸಂದರ್ಭದಲ್ಲಿ ಯಾವುದೇ ವ್ಯಕ್ತಿ ಯಾವುದೇ ಪಕ್ಷದ ಬಗ್ಗೆ ಒತ್ತಡ ಹೇರುವುದು ಕಂಡುಬಂದರೆ ಅಂತಹವರ ವಿರುದ್ಧ ಸಮಗ್ರ ಮಾಹಿತಿ ನೀಡಿ ಚುನಾವಣಾ ಆಯೋಗಕ್ಕೆ ರವಾನಿಸಲಾಗುತ್ತದೆ.
ಆ ತಂಡ ರವಾನಿಸುವ ಮಾಹಿತಿಯನ್ನು ಗೌಪ್ಯವಾಗಿಟ್ಟು ,ಅಂತಹ ವ್ಯಕ್ತಿಗಳ ಬಗ್ಗೆ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುತ್ತದೆ ಎಂದು ತಿಳಿಸಿದರು.
ಸೂಕ್ಷ್ಮ ಮತಗಟ್ಟೆಗಳ ಬಗ್ಗೆಯೂ ನಮ್ಮ ತಂಡ ವಿಶೇಷ ಕಣ್ಣಿಟ್ಟಿರುತ್ತದೆ.ಚುನಾವಣಾ ಅಕ್ರಮ ತಡೆಗಟ್ಟಲು 18 ಫ್ಲೈಯಿಂಗ್ ಸ್ಕ್ವಾಡ್, 18 ವಿಡಿಯೋ ಚಿತ್ರೀಕರಣ ತಂಡ ವ್ಯವಸ್ಥೆ ಮಾಡಿದ್ದೇವೆ. ಇದರ ಜತೆಗೆ ಆರು ವಿಡಿಯೋ ವೀಕ್ಷಣಾ ತಂಡ ಇರುತ್ತದೆ.ಈ ತಂಡ ಆಯಾ ಕ್ಷೇತ್ರಗಳಲ್ಲಿ ಏನೇನು ಪ್ರಮುಖ ಕಾರ್ಯಕ್ರಮಗಳು ನಡೆಯುತ್ತವೆ ಇತ್ಯಾದಿ ವೀಕ್ಷಿಸಿ ಅದನ್ನು ಮಾಧ್ಯಮ ಕೇಂದ್ರಕ್ಕೆ ಕಳುಹಿಸುತ್ತದೆ ಎಂದು ಹೇಳಿದರು.
ಕೇಂದ್ರ ಸರ್ಕಾರದ ಅಧಿಕಾರಿಗಳನ್ನೊಳಗೊಂಡ ಮೈಕ್ರೋ ಅಬ್ಸರ್ವರ್ ಟೀಮ್ ಕೂಡ ಸಿದ್ಧವಿರುತ್ತದೆ.ಈ ತಂಡ ಕೂಡ ಚುನಾವಣಾ ಪ್ರಕ್ರಿಯೆ ಮೇಲೆ ಹದ್ದಿನ ಕಣ್ಣಿಡಲಿದೆ ಎಂದರು.
51 ಸಾವಿರ ಸಿಬ್ಬಂದಿ: ಕಳೆದ ಚುನಾವಣೆ ಸಂದರ್ಭದಲ್ಲಿ ಪ್ರತಿ ಮತಗಟ್ಟೆ ಕೇಂದ್ರಗಳಲ್ಲಿ ವಿವಿ ಪ್ಯಾಟ್ ಬಗ್ಗೆ ಗಮನ ಹರಿಸಲು ಹೆಚ್ಚುವರಿ ಸಿಬ್ಬಂದಿ ನೇಮಿಸಿದ್ದೆವು. ಈ ಬಾರಿ ಮತಗಟ್ಟೆ ಅಧಿಕಾರಿಗಳೇ ವಿವಿ ಪ್ಯಾಟ್ ಉಸ್ತುವಾರಿ ನೋಡಿಕೊಳ್ಳುವುದರಿಂದ ಒಬ್ಬ ಸಿಬ್ಬಂದಿ ಕಡಿಮೆ ಮಾಡಿದ್ದೇವೆ. ಒಟ್ಟಾರೆ ಬಿಬಿಎಂಪಿ ವ್ಯಾಪ್ತಿಗೆ ಒಳಪಡುವ ಕ್ಷೇತ್ರಗಳಲ್ಲಿ ನ್ಯಾಯಸಮ್ಮತ ಚುನಾವಣೆ ನಡೆಸಲು 51 ಸಾವಿರ ಸಿಬ್ಬಂದಿ ನೇಮಿಸಿದ್ದೇವೆ. ಎಲ್ಲರಿಗೂ ತರಬೇತಿ ನೀಡಲಾಗುತ್ತದೆ ಎಂದು ಹೇಳಿದರು.
ಒಟ್ಟು ಮತದಾರರು: 36,97,211 ಪುರುಷ ಮತದಾರರು, 34,03,597 ಮಹಿಳಾ ಮತದಾರರು, ಇತರೆ 703 ಮತದಾರರು ಸೇರಿದಂತೆ ಬೆಂಗಳೂರು ನಾರ್ತ್, ಬೆಂಗಳೂರು ಸೆಂಟ್ರಲ್, ಬೆಂಗಳೂರು ಸೌತ್ ಲೋಕಸಭಾ ಕ್ಷೇತ್ರಗಳಲ್ಲಿ 71,01,561 ಮತದಾರರಿದ್ದಾರೆ ಎಂದು ಮಂಜುನಾಥ್ ಪ್ರಸಾದ್ ಹೇಳಿದರು.