ವಿಮಾನ ನಿಲ್ದಾಣದಲ್ಲಿ ಯೋಧನ ಪಾರ್ಥೀವ ಶರೀರಕ್ಕೆ ಗೌರವ ವಂದನೆ ಸಲ್ಲಿಸಿದ ಗಣ್ಯರು

ಬೆಂಗಳೂರು,ಫೆ.16- ಪಾಕಿಸ್ತಾನದ ಜೈಷ್-ಎ-ಮೊಹಮ್ಮದ್ ಆತ್ಮಾಹುತಿ ಉಗ್ರರು ನಡೆಸಿದ ಬಾಂಬ್ ಸ್ಫೋಟದಲ್ಲಿ ವೀರ ಮರಣವನ್ನಪ್ಪಿದ ಕರ್ನಾಟಕದ ಕಲಿ ಮಂಡ್ಯ ಜಿಲ್ಲೆ ಮದ್ದೂರು ತಾಲ್ಲೂಕಿನ ವೀರಯೋಧ ಗುರು ಅವರ ಪಾರ್ಥೀವ ಶರೀರ ಇಂದು ನಗರಕ್ಕೆ ಆಗಮಿಸಿತು.

ಮಧ್ಯಾಹ್ನ 1 ಗಂಟೆಗೆ ಸರಿಯಾಗಿ ಭಾರತೀಯ ವಾಯುಪಡೆಗೆ ಸೇರಿದ ವಿಶೇಷ ವಿಮಾನದಲ್ಲಿ ಗುರು ಅವರ ಪಾರ್ಥೀವ ಶರೀರವನ್ನು ಎಚ್‍ಎಎಲ್ ವಿಮಾನ ನಿಲ್ದಾಣಕ್ಕೆ ತರಲಾಯಿತು.

ಈ ವೇಳೆ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಗೃಹಸಚಿವ ಎಂ.ಬಿ.ಪಾಟೀಲ್, ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ, ಸಂಸದರಾದ ಪಿ.ಸಿ.ಮೋಹನ್, ಶೋಭ ಕರಂದ್ಲಾಜೆ, ರಾಜ್ಯಸಭಾ ಸದಸ್ಯ ರಾಜೀವ್ ಚಂದ್ರಶೇಖರ್, ಮಾಜಿ ಸಚಿವ ಎಚ್.ಕೆ.ಪಾಟೀಲ್, ಮುಖಂಡರಾದ ಅರವಿಂದ ಲಿಂಬಾವಳಿ, ಬಿಬಿಎಂಪಿ ಮೇಯರ್ ಗಂಗಾಂಬಿಕೆ, ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ವಿಜಯ ಭಾಸ್ಕರ್, ಪೊಲೀಸ್ ಮಹಾನಿರ್ದೇಶಕರಾದ ನೀಲಮಣಿ ಎಂ.ರಾಜು, ನಗರ ಪೊಲೀಸ್ ಆಯುಕ್ತ ಟಿ.ಸುನೀಲ್‍ಕುಮಾರ್, ಸೇನಾ ಅಧಿಕಾರಿಗಳು, ರಕ್ಷಣಾ ಪಡೆ ಅಧಿಕಾರಿಗಳು ಪಾರ್ಥೀವ ಶರೀರಕ್ಕೆ ಗೌರವ ವಂದನೆ ಸಲ್ಲಿಸಿದರು.

ಬೆಳಗ್ಗೆ 10.30ಕ್ಕೆ ಎಚ್‍ಎಎಲ್ ವಿಮಾನ ನಿಲ್ದಾಣಕ್ಕೆ ಪಾರ್ಥೀವ ಶರೀರ ಬರಬೇಕಾಗಿತ್ತು.ಆದರೆ ತಮಿಳುನಾಡು ಮತ್ತು ಕೇರಳದಲ್ಲಿ ವೀರಯೋಧರ ಪಾರ್ಥೀವ ಶರೀರವನ್ನು ಕೊಂಡೊಯ್ಯಲು ವಿಳಂಬವಾಗಿದ್ದರಿಂದ ಬೆಂಗಳೂರಿಗೆ ಬರಲು ತಡವಾಯಿತು.

ಮಧ್ಯಾಹ್ನ 12.45ಕ್ಕೆ ಸರಿಯಾಗಿ ವಿಶೇಷ ವಿಮಾನ ಎಚ್‍ಎಎಲ್‍ಗೆ ಬಂದಿಳಿಯಿತು. ನಂತರ ಸೇನಾ ವಾಹನದ ಮೂಲಕ ಗುರು ಅವರ ಪಾರ್ಥೀವ ಶರೀರವನ್ನು ರಸ್ತ ಮಾರ್ಗವಾಗಿ ಹುಟ್ಟೂರಿಗೆ ಕೊಂಡಯ್ಯಲಾಯಿತು.

ಜನಸಾಗರ:
ವೀರಯೋಧ ಗುರು ಅವರ ಪಾರ್ಥೀವ ಶರೀರ ಹೊತ್ತ ಸೇನಾ ವಾಹನ ಅವರ ಹುಟ್ಟೂರು ಪ್ರವೇಶಿಸುತ್ತಿದ್ದಂತೆ ರಸ್ತೆಯುದ್ದಕ್ಕೂ ನಿಂತಿದ್ದ ಗ್ರಾಮಸ್ಥರು ಹೂವಿನ ಮಳೆಗರೆದರು.

ಎಲ್ಲರ ಕಣ್ಣಾಲಿಗಳು ತುಂಬಿ ಬಂದಿದ್ದವು. ಸೇನಾ ವಾಹನ ಮನೆಯತ್ತ ಆಗಮಿಸುತ್ತಿದ್ದಂತೆ ಕುಟುಂಬಸ್ಥರ ಆಕ್ರಂಧನ ಮುಗಿಲು ಮುಟ್ಟಿತ್ತು. ತಂದೆತಾಯಿ, ಮಡದಿಯ ರೋಧನ ಹೇಳತೀರದಾಗಿತ್ತು.

ಯೋಧರು ಪಾರ್ಥೀವ ಶರೀರದ ಪೆಟ್ಟಿಗೆಯನ್ನು ಇಳಿಸುತ್ತಿದ್ದಂತೆ ಗ್ರಾಮಸ್ಥರು ಗುರು ಅವರ ಅಂತಿಮ ದರ್ಶನ ಪಡೆಯಲು ಮುಗಿಬಿದ್ದರು.ಕಣ್ಣೀರ ಧಾರೆ ನಡುವೆ ಜನಸಾಗರವೇ ಯೋಧನಿಗೆ ಭಾವಪೂರ್ಣ ಅಂತಿಮ ನಮನ ಸಲ್ಲಿಸಿತು.

ಮದ್ದೂರು, ಮಳವಳ್ಳಿ ದಾರಿಯುದ್ಧಕ್ಕೂ ಯೋಧರಿಗೆ ನಮನ ಸಲ್ಲಿಸುವ ಪೋಸ್ಟರ್‍ಗಳು ರಾರಾಜಿಸಿದ್ದವು. ಹುತಾತ್ಮ ಯೋಧನ ಗೌರವಾರ್ಥ ಗುಡಿಗೆರೆ ಕಾಲೋನಿಯ ಸರ್ಕಾರಿ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಲಾಯಿತು. ಯೋಧನ ಪಾರ್ಥೀವ ಶರೀರವನ್ನು ಮಂಡ್ಯ ಜಿಲ್ಲಾಧಿಕಾರಿ ಮಂಜುಶ್ರೀ ಬರಮಾಡಿಕೊಂಡು ಅಂತಿಮ ಗೌರವ ಸಲ್ಲಿಸಿ ನಂತರ ಸ್ವಗ್ರಾಮಕ್ಕೆ ಕಳುಹಿಸಿಕೊಟ್ಟರು. ನೆರೆದಿದ್ದವರೆಲ್ಲ ಗುರು ಅಮರ್ ರಹೇ ಎಂದು ಘೋಷಣೆ ಕೂಗಿದರು. ಹುತಾತ್ಮರ ಬಲಿದಾನ ಯಾವುದೇ ಕಾರಣಕ್ಕೂ ವ್ಯರ್ಥವಾಗಬಾರದು ಎಂದು ಆಕ್ರೋಶ ವ್ಯಕ್ತಪಡಿಸಿದರು.

ಗುರು ಅವರ ಮಡದಿಯ ರೋಧನ ಮನಕಲುವಂತಿತ್ತು. ಶಾಲಾ ಮಕ್ಕಳು, ಗ್ರಾಮಸ್ಥರು ಅವರನ್ನು ಸಂತೈಸುತ್ತಿದ್ದ ದೃಶ್ಯ ಕಂಡುಬಂತು.

ಸರ್ಕಾರಿ ಗೌರವಗಳೊಂದಿಗೆ ಸಂಜೆ ಗುರು ಅವರ ಅಂತ್ಯಸಂಸ್ಕಾರ ನೆರವೇರಲಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ