ಬೆಂಗಳೂರು, ಫೆ.15-ಏಕಕಾಲದಲ್ಲಿ 5000 ಅಧಿಕಾರಿಗಳಿಗೆ ಕರೆ ಮಾಡಿ ಸಂವಹನ ನಡೆಸಬಹುದಾದ ಗ್ರೂಪ್ ಟಾಕ್ನ್ನು ಜಿಲ್ಲಾಧಿಕಾರಿ ಕೆ.ದಯಾನಂದ್ ಅವರು ಶಿವಮೊಗ್ಗದಲ್ಲಿ ಬಿಡುಗಡೆ ಮಾಡಿದರು.
ಸಮೂಹ ಸಂಪರ್ಕಕ್ಕೆ ಹೆಸರುವಾಸಿಯಾಗಿರುವ ತೆಲೆಬು ಸಂಸ್ಥೆಯು ಕರ್ನಾಟಕದ ಆಡಳಿತ ವಿಭಾಗಕ್ಕಾಗಿ ಅಭಿವೃದ್ಧಿ ಪಡಿಸಿರುವ ಗ್ರೂಪ್ ಟಾಕ್ನ್ನು ಬಿಡುಗಡೆ ಮಾಡಿ ಮಾತನಾಡಿದ ಅವರು, ಈ ಗ್ರೂಪ್ ಟಾಕ್ ವ್ಯವಸ್ಥೆಯಿಂದ ಏಕಕಾಲದಲ್ಲಿ 5000 ಅಧಿಕಾರಿಗಳಿಗೆ ಕರೆ ಮಾಡಿ ಸಂವಹನ ನಡೆಸಬಹುದು.
ನಾವು ಕೆಲವು ವರ್ಷಗಳ ಹಿಂದೆ ಕೆಲಸ ಮಾಡುತ್ತಿದ್ದ ಹಳೆಯ ಪದ್ಧತಿಯನ್ನು ಹೊಸ ತಂತ್ರಜ್ಞಾನವು ಬದಲಾಯಿಸುತ್ತಿವೆ, ಈ ಬದಲಾವಣೆ ಕಾರಣಕ್ಕಾಗಿಯೇ ನಾವು ಶಿವಮೊಗ್ಗದಲ್ಲಿ ಗ್ರೂಪ್ ಟಾಕ್ ಬಿಡುಗಡೆ ಮಾಡಿದ್ದೇವೆ ಎಂದು ಹೇಳಿದರು.
ಈ ಕಾನ್ಫರೆನ್ಸ್ ಕಾಲ್ ಸೌಲಭ್ಯದಿಂದ ಏಕಕಾಲಕ್ಕೆ ನಾನು ಪೂರ್ಣ ತಂಡದೊಂದಿಗೆ ಸಂವಹನ ಸಾಧಿಸಬಹುದು. ಕರೆಯಲ್ಲಿರುವ ವ್ಯಕ್ತಿಯ ಕರೆಯನ್ನು ಮ್ಯೂಟ್ ಅಥವಾ ಅನ್ಮ್ಯೂಟ್ ಮಾಡಬಹುದು.ಏಕಕಾಲಕ್ಕೆ ಹಲವು ಅಧಿಕಾರಿಗಳೊಂದಿಗೆ ಮಾಹಿತಿ ವಿನಿಮಯ ಮಾಡಿಕೊಳ್ಳಬಹುದು ಎಂದು ವಿವರಿಸಿದರು.
ನನ್ನೊಂದಿಗೆ ಜಿಲ್ಲೆಯ ಎಡಿಸಿ, ತಹಶೀಲ್ದಾರ್, ವ್ಯವಸ್ಥಾಪಕರು, ಗ್ರಾಮ ಲೆಕ್ಕಿಗರು, ಇನ್ನೂ ಸುಮಾರು 400 ಅಧಿಕಾರಿಗಳೊಂದಿಗೆ ನಾನು ಏಕಕಾಲಕ್ಕೆ ಸಂಪರ್ಕ ಸಾಧಿಸಲು ಸಾಧ್ಯವಾಗಿದೆ ಎಂದು ಅವರು ಗ್ರೂಪ್ ಟಾಕ್ನ್ನು ಬಗ್ಗೆ ಪ್ರಶಂಸಿಸಿದರು.
ತೆಲುಬು ಸಂಸ್ಥೆಯ ಕಾರ್ಯನಿರ್ವಾಹಕ ವ್ಯವಸ್ಥಾಪಕ ಕಲ್ಯಾಣ್ ಯರ್ರಮ್ ಶೆಟ್ಟಿ ಮಾತನಾಡಿ, ಶಿವಮೊಗ್ಗ ಕಂದಾಯ ಇಲಾಖೆಗಾಗಿ ಗ್ರೂಪ್ ಟಾಕ್ ಅಪ್ಲಿಕೇಶನ್ ನಿರ್ಮಿಸುವ ಕೆಲಸದಲ್ಲಿ ಶಿವಮೊಗ್ಗದ ಜಿಲ್ಲಾಧಿಕಾರಿ ಕೆ.ಎ.ದಯಾನಂದ ಅವರೊಟ್ಟಿಗೆ ಮಾಡಿದ್ದು ಸಂತಸ ತಂದಿದೆ.
ಈ ಅಪ್ಲಿಕೇಶನ್ ಬಳಸಿ 10000ಕ್ಕೂ ಹೆಚ್ಚು ಜನರೊಂದಿಗೆ ಸಂಪರ್ಕ ಸಾಧಿಸಬಹುದು ಅದೂ ಕೇವಲ ಒಂದು ಸ್ಮಾರ್ಟ್ ಪೋನ್ನಿಂದ ಎಂದು ಮಾಹಿತಿ ನೀಡಿದರು.
ಜಿಲ್ಲಾ ಆಯುಕ್ತ ಕರಿಗೌಡ ಮಾತನಾಡಿ, ಗ್ರೂಪ್ ಟಾಕ್ ತಂತ್ರಾಂಶವು ಕಂದಾಯ ಇಲಾಖೆಯ ಕಾರ್ಯಗಳು ಸುಗಮವಾಗಿ ಹಾಗೂ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಲು ಸಹಾಕಯವಾಗಲಿದೆ. ಪ್ರಸ್ತುತ ಜಿಲ್ಲಾಧಿಕಾರಿ, ಅಪರ ಜಿಲ್ಲಾಧಿಕಾರಿ, ತಹಶೀಲ್ದಾರ್, ಶಿರಸ್ಥೇಧಾರ್, ಜಿಲ್ಲಾ ಕಂದಾಯ ಇಲಾಖೆಯ ಅಧಿಕಾರಿಗಳು ಕಾನ್ಫರೆನ್ಸ್ ಕಾಲ್ಗೆ ಸೇರಿಸಿಕೊಳ್ಳಲಾಗಿದೆ ಎಂದರು.