ನವದೆಹಲಿ,ಫೆ.15-ಭಯೋತ್ಪಾದನಾ ಹೋರಾಟದಲ್ಲಿ ಕೇಂದ್ರ ಸರ್ಕಾರ ಯಾವುದೇ ರೀತಿಯ ನಿರ್ಧಾರ ಕೈಗೊಂಡರೆ ಅದಕ್ಕೆ ಸಂಪೂರ್ಣ ಬೆಂಬಲ ನೀಡಲಾಗುವುದು. ಇದರಲ್ಲಿ ಯಾವುದೇ ರೀತಿಯ ರಾಜಕೀಯ ಚರ್ಚೆ ಬೇಡವೇ ಬೇಡ ಎಂದು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಹೇಳಿದ್ದಾರೆ.
ದೇಶದಲ್ಲಿ ಕ್ಲಿಷ್ಟಕರ ಪರಿಸ್ಥಿತಿ ಇದೆ. ತಾಯ್ನಾಡಿಗಾಗಿ 40 ಯೋಧರು ಹುತಾತ್ಮರಾಗಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ನಾವು ರಾಜಕೀಯ ಬೆರೆಸದೆ ಕೇಂದ್ರ ಸರ್ಕಾರ ತೆಗೆದುಕೊಳ್ಳುವ ನಿರ್ಧಾರಕ್ಕೆ ಬೆಂಬಲ ನೀಡಲಿದ್ದೇವೆ. ಕೆಲವು ದಿನಗಳವರೆಗೂ ಈ ವಿಷಯದ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.
ಮಾಜಿ ಪ್ರಧಾನಿ ಡಾ.ಮನಮೋಹನ್ ಸಿಂಗ್, ರಾಜ್ಯಸಭೆಯ ಪ್ರತಿಪಕ್ಷದ ನಾಯಕ ಗುಲಾಂ ನಬಿ ಆಜಾದ್ ಜೊತೆ ಜಂಟಿ ಪತ್ರಿಕಾಗೋಷ್ಠಿ ನಡೆಸಿದ ರಾಹುಲ್ ಗಾಂಧಿ, ಜಮ್ಮುಕಾಶ್ಮೀರದ ಪುಲ್ವಾಮ ಜಿಲ್ಲೆಯ ಆವಂತಿಪುರದಲ್ಲಿ ಸಿಆರ್ಪಿಎಫ್ ಯೋಧರ ವಾಹನದ ಮೇಲೆ ಉಗ್ರರು ನಡೆಸಿರುವ ದಾಳಿಯನ್ನು ತೀವ್ರವಾಗಿ ಖಂಡಿಸಿದರು.
ವೀರಯೋಧರು ಹುತಾತ್ಮರಾಗಿರುವುದಕ್ಕೆ ಕಂಬನಿ ಮಿಡಿದ ಅವರು, ಭಯೋತ್ಪಾದಕರಿಗೆ ತಕ್ಕ ಪಾಠ ಕಲಿಸಲೇಬೇಕು. ನಮ್ಮ ಯೋಧರ ಹೋರಾಟ ವ್ಯರ್ಥವಾಗಬಾರದು. ಕೇಂದ್ರ ಸರ್ಕಾರ ದೃಢ ನಿರ್ಧಾರ ತೆಗೆದುಕೊಳ್ಳುವಂತೆ ಮನವಿ ಮಾಡಿದರು.
ನಾನು ಈ ವಿಷಯದಲ್ಲಿ ರಾಜಕಾರಣ ಮಾಡುವುದಾಗಲಿ, ಇಲ್ಲವೇ ಬೇರೊಬ್ಬರನ್ನು ಟೀಕಿಸುವ ಹಂತಕ್ಕೆ ಇಳಿಯುವುದಿಲ್ಲ. ಈ ಸಮಯದಲ್ಲಿ ನಮಗೆ ದೇಶದ ಭದ್ರತೆ ಮುಖ್ಯ. ನಾವು ಪ್ರೀತಿ ಮತ್ತು ವಿಶ್ವಾಸದಿಂದ ದೇಶವನ್ನು ಕಟ್ಟಿದ್ದೇವೆ. ನಮಗೆ ಶಾಂತಿ ಮುಖ್ಯವೇ ಹೊರತು ಅಶಾಂತಿಯನ್ನೂ ಎಂದೂ ಬಯಸುವುದಿಲ್ಲ ಎಂದರು.
ಮಾಜಿ ಪ್ರಧಾನಿ ಡಾ.ಮನಮೋಹನ್ ಸಿಂಗ್ ಮಾತನಾಡಿ, ನಿನ್ನೆಯ ಘಟನೆ ನಿಜಕ್ಕೂ ತಲೆತಗ್ಗಿಸುವಂತದ್ದು, ಈ ಘಟನೆಯಲ್ಲಿ ಯಾರೇ ಭಾಗಿಯಾದರೂ ಅವರಿಗೆ ಕಾನೂನಿನ ಪ್ರಕಾರವೇ ಶಿಕ್ಷೆಯಾಗಬೇಕು. ಈ ವಿಷಯದಲ್ಲಿ ನಾವು ಕೇಂದ್ರ ಸರ್ಕಾರದೊಂದಿಗೆ ಇರುತ್ತೇವೆ. ಯಾವುದೇ ನಿರ್ಧಾರ ಕೈಗೊಂಡರೂ ಅದಕ್ಕೆ ಬೆಂಬಲ ನೀಡಲಿದ್ದೇವೆ ಎಂದರು.
ಭಯೋತ್ಪಾದನೆಯನ್ನು ಪ್ರತಿಯೊಬ್ಬರೂ ಖಂಡಿಸಬೇಕು. ಇದೊಂದು ಮನುಕುಲದ ಶಾಂತಿ ಕದಡುವ ಪಿಡುಗಾಗಿ ಪರಿಣಮಿಸಿದೆ. ಬೇರು ಸಮೇತ ಇದನ್ನು ಕಿತ್ತು ಹಾಕಲೇಬೇಕು. ಘಟನೆಗೆ ಕಾರಣರಾದವರನ್ನು ಕಾನೂನಿನ ಪ್ರಕಾರವೇ ಶಿಕ್ಷಿಸಬೇಕು ಎಂದರು.
ಇಲ್ಲಿ ಘಟನೆ ಹೇಗೆ ನಡೆಯಿತು? ಲೋಪದೋಷ, ಭದ್ರತಾ ವೈಫಲ್ಯ ಇಂತಹ ವಿಷಯಗಳ ಬಗ್ಗೆ ಮಾತನಾಡಲು ಸಮಯವಿಲ್ಲ. ವೀರ ಯೋಧರ ಕುಟುಂಬದವರ ಜೊತೆ ದೇಶವೇ ನಿಲ್ಲಲಿದೆ. ಕೇಂದ್ರ ಸರ್ಕಾರ ತೆಗೆದುಕೊಳ್ಳುವ ನಿರ್ಧಾರವನ್ನು ನಾವು ಬೆಂಬಲಿಸುತ್ತೇವೆ ಎಂದು ಹೇಳಿದರು.