ಪಾಕಿಸ್ತಾನಕ್ಕೆ ನೀಡಿದ್ದ ಮೋಸ್ಟ್ ಫೇವರ್ಡ್ ನೇಷನ್ ಸ್ಥಾನಮಾನ ಹಿಂಪಡೆದ ಭಾರತ

ನವದೆಹಲಿ: ಕಾಶ್ಮೀರದ ಪುಲ್ವಮದಲ್ಲಿ ನಿನ್ನೆ ಸಂಭವಿಸಿದ ಭೀಕರ ಉಗ್ರ ದಾಳಿ ಘಟನೆಯನ್ನು ಭಾರತ ಸರಕಾರ ಗಂಭೀರವಾಗಿ ಪರಿಗಣಿಸಿದೆ. ಪಾಕಿಸ್ತಾನಕ್ಕೆ ನೀಡಲಾಗಿದ್ದ ಮೋಸ್ಟ್ ಫೇವರ್ಡ್ ನೇಷನ್ (ಎಂಎಫ್​ಎನ್) ಸ್ಥಾನಮಾನವನ್ನು ಭಾರತ ಹಿಂಪಡೆದುಕೊಂಡಿದೆ. ಇವತ್ತು ಪ್ರಧಾನಿ ನರೇಂದ್ರ ಮೋದಿ ತುರ್ತಾಗಿ ನಡೆಸಿದ ಸಂಪುಟ ಭದ್ರತಾ ಸಮಿತಿಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಈ ಉಗ್ರ ದಾಳಿಯ ಹಿಂದೆ ಪಾಕಿಸ್ತಾನದ ಕೈವಾಡವಿದ್ದು, ಇದಕ್ಕಾಗಿ ಆ ದೇಶ ಭಾರೀ ಬೆಲೆ ತೆರಬೇಕಾಗುತ್ತದೆ ಎಂದು ಸಭೆಯ ನಂತರ ಪ್ರಧಾನಿ ಅವರು ಮಾಧ್ಯಮಗಳಿಗೆ ತಿಳಿಸಿದ್ದಾರೆ.

ಪಾಕಿಸ್ತಾನದ ಮೇಲೆ ಮತ್ತೊಂದು ಸರ್ಜಿಕಲ್ ಸ್ಟ್ರೈಕ್ ನಡೆಯಬೇಕೆಂಬ ಕೂಗು ಬಲವಾಗುತ್ತಿರುವಂತೆಯೇ ಪ್ರಧಾನಿ ಮೋದಿ ಅವರು, ಭದ್ರತಾ ಪಡೆಗಳಿಗೆ ಉಗ್ರರನ್ನು ಸದೆಬಡಿಯಲು ಮುಕ್ತ ಸ್ವಾತಂತ್ರ್ಯ ನೀಡಲಾಗಿದೆ ಎಂದು ತಿಳಿಸಿದ್ದಾರೆ. 2016ರಲ್ಲಿ ಉರಿ ಸೆಕ್ಟರ್​ನಲ್ಲಿ ಭಾರತೀಯ ಸೇನಾ ನೆಲೆಯ ಮೇಲೆ ಉಗ್ರರು ದಾಳಿ ನಡೆಸಿ ಅನೇಕ ಯೋಧರ ಪ್ರಾಣ ಬಲಿತೆಗೆದುಕೊಂಡ ಬೆನ್ನಲ್ಲೇ ಭಾರತವು ಪಾಕಿಸ್ತಾನದ ನೆಲದ ಮೇಲೆ ಸರ್ಜಿಕಲ್ ಸ್ಟ್ರೈಕ್ ನಡೆಸಿತ್ತು. ಈಗಲೂ ಅದೇ ಮಾದರಿಯಲ್ಲಿ ಮತ್ತೊಂದು ಸರ್ಜಿಕಲ್ ಸ್ಟ್ರೈಕ್ ನಡೆಸಬೇಕೆಂಬ ಅಭಿಪ್ರಾಯಗಳು ಕೇಳಿಬರುತ್ತಿವೆ.

ಪಾಕಿಸ್ತಾನವನ್ನು ಏಕಾಂಗಿಯನ್ನಾಗಿಸಲು ಬೇಕಾದ ಎಲ್ಲಾ ರಾಜತಾಂತ್ರಿಕ ಪ್ರಯತ್ನಗಳನ್ನ ಮಾಡಲಾಗುವುದು ಎಂದು ಕೇಂದ್ರ ಸಚಿವ ಅರುಣ್ ಜೇಟ್ಲಿ ಸ್ಪಷ್ಟಪಡಿಸಿದ್ದಾರೆ. ಗೃಹ ಸಚಿವ ರಾಜನಾಥ್ ಸಿಂಗ್ ಅವರು ಶ್ರೀನಗರದಲ್ಲಿ ನಾಳೆ ಸರ್ವ ಪಕ್ಷ ಸಭೆ ನಡೆಸಲಿದ್ದು, ಭಾರತವು ಪಕ್ಷಭೇದ ಮರೆದು ಒಂದೇ ಧ್ವನಿ ಹೊರಡಿಸಲಿದೆ.
ಇದೀಗ ಪಾಕಿಸ್ತಾನಕ್ಕೆ ನೀಡಲಾಗಿದ್ದ ಎಂಎಫ್​ಎನ್ ಸ್ಥಾನಮಾನ ಹಿಂಪಡೆಯುವುದರ ಜೊತೆಗೆ ಇನ್ನಷ್ಟು ಮಿಲಿಟರಿಯೇತರ ಕ್ರಮಗಳನ್ನ ಕೈಗೊಳ್ಳಲು ಭಾರತ ಯೋಜಿಸಿದೆ. ಪಾಕಿಸ್ತಾನ ಮತ್ತು ಭಾರತವನ್ನು ಸಂಪರ್ಕಿಸುವ ಕರ್ತಾರ್​ಪುರ್ ಕಾರಿಡಾರ್ ಯೋಜನೆಯನ್ನು ಸ್ಥಗಿತಗೊಳಿಸುವುದೂ ಈ ಕ್ರಮಗಳಲ್ಲೊಂದಾಗಿದೆ.

ಏನಿದು ಎಂಎಫ್ಎನ್ ಸ್ಥಾನಮಾನ?
ಪಾಕಿಸ್ತಾನಕ್ಕೆ ನೀಡಲಾಗಿದ್ದ ಮೋಸ್ಟ್ ಫೇವರ್ಡ್ ನೇಷನ್ ಅಥವಾ ಅತೀ ಆದ್ಯತೆಯ ರಾಷ್ಟ್ರ ಎಂಬ ಸ್ಥಾನಮಾನವನ್ನು ಹಿಂಪಡೆಯಬೇಕೆಂಬ ಕೂಗು ಕೆಲವಾರು ವರ್ಷಗಳಿಂದಲೂ ಇದೆ. ವಿಶ್ವ ವ್ಯಾಪಾರ ಸಂಸ್ಥೆ(ಡಬ್ಲ್ಯೂಟಿಓ) ಶಿಫಾರಸಿನಂತೆ ಭಾರತವು ಪಾಕಿಸ್ತಾನಕ್ಕೆ ಈ ಸ್ಥಾನಮಾನ ನೀಡಿತ್ತು. ಈ ನಿಯಮದ ಪ್ರಕಾರ, ವಿಶ್ವ ವಾಣಿಜ್ಯ ಸಂಘಟನೆಯ ಸದಸ್ಯ ರಾಷ್ಟ್ರಗಳು ಪರಸ್ಪರ ಆಮದು ಮಾಡಿಕೊಳ್ಳುವ ವಸ್ತುಗಳ ಮೇಲೆ ಒಂದೇ ಪ್ರಮಾಣದ ಸೀಮಾ ಸುಂಕ ವಿಧಿಸಬೇಕಾಗುತ್ತದೆ. ಆಮದು ಮಾಡಿಕೊಳ್ಳುವಾಗ ಎಂಎಫ್​ಎನ್ ಸ್ಥಾನಮಾನವಿರುವ ದೇಶಕ್ಕೆ ಹೆಚ್ಚಿನ ಆದ್ಯತೆ ಕೊಡಬೇಕು.

ಭಾರತವು ಡಬ್ಲ್ಯೂಟಿಓ ನಿಯಮವನ್ನು ಪಾಲಿಸಿಕೊಂಡು ಬಂದಿತ್ತಾದರೂ ಪಾಕಿಸ್ತಾನ ಮಾತ್ರ ಭಾರತಕ್ಕೆ ಎಂಎಫ್​ಎನ್ ಸ್ಥಾನಮಾನ ನೀಡಿಯೇ ಇಲ್ಲ. ಈ ಕಾರಣಕ್ಕೆ ಹಾಗೂ ಭಾರತದಲ್ಲಿ ಉಗ್ರರ ಮೂಲಕ ಸದಾ ಕಾಲ ತಂಟೆ ಮಾಡುವ ಪಾಕಿಸ್ತಾನಕ್ಕೆ ಈ ಆದ್ಯತೆ ಕೊಡುವುದರ ಔಚಿತ್ಯವೇನು ಎಂಬ ಪ್ರಶ್ನೆ ಬಹಳ ಕಾಲದಿಂದಲೂ ಇತ್ತು. ಉರಿ ಉಗ್ರ ದಾಳಿಯಾದಾಗಲೇ ಭಾರತವು ಎಂಎಫ್​ಎನ್ ಸ್ಥಾನಮಾನ ಹಿಂಪಡೆಯುವ ನಿರೀಕ್ಷೆ ಇತ್ತಾದರೂ ಪ್ರಧಾನಿ ಮೋದಿ ಯಾವ ನಿರ್ಧಾರವನ್ನೂ ಕೈಗೊಂಡಿರಲಿಲ್ಲ. ಈಗ ಉರಿಗಿಂತಲೂ ಅತೀ ಭಯಂಕರವಾದ ಉಗ್ರ ದಾಳಿಯು ಪುಲ್ವಾಮಾದಲ್ಲಿ ಸಂಭವಿಸಿದ್ದು, ಕೇಂದ್ರ ಸರಕಾರ ಪಾಕಿಸ್ತಾನದ ವಿರುದ್ಧ ಉಗ್ರ ಕ್ರಮ ಕೈಗೊಳ್ಳುವುದು ಅನಿವಾರ್ಯವಾಗಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ