ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಮಾಡಿಕೊಂಡ ರಫೇಲ್ ಒಪ್ಪಂದದ ಬಗ್ಗೆ ಅಪಸ್ವರ ಎತ್ತುತ್ತಿದ್ದ ಕಾಂಗ್ರೆಸ್ಗೆ ತೀವ್ರ ಹಿನ್ನಡೆ ಉಂಟಾಗಿದೆ. ಯುಪಿಎ ಸರ್ಕಾರದ ಅವಧಿಯಲ್ಲಿ ನಡೆದ ಒಪ್ಪಂದಕ್ಕಿಂತ ಎನ್ಡಿಎ ಮಾಡಿರುವ ಹೊಸ ಡೀಲ್ ಕಡಿಮೆ ಬೆಲೆಯಲ್ಲಿ ನಡೆದಿದೆ ಎಂದು ಸಿಎಜಿ ವರದಿ ಲೋಕಸಭೆ ಅಧಿವೇಶನದಲ್ಲಿ ಹೇಳಿದೆ.
ರಾಹುಲ್ ಸೇರಿದಂತೆ ಅನೇಕ ನಾಯಕರು ಸಂಸತ್ ಎದುರು ಪ್ರತಿಭಟನೆ ನಡೆಸಿದರು. ಪ್ರಧಾನಿ ಮೋದಿ ಭಾವಚಿತ್ರ ಇರುವ ಕಾಗದದ ವಿಮಾನಗಳನ್ನು ಹಾರಿ ಬಿಡಲಾಯಿತು. ಇದರ ನಡುವೆಯೇ, ಸಿಎಜಿ ವರದಿಯನ್ನು ಲೋಕಸಭೆಯಲ್ಲಿ ಪ್ರಕಟಮಾಡಲಾಯಿತು. 2007ರಲ್ಲಿ ನಡೆದ ಒಪ್ಪಂದಕ್ಕಿಂತ 2015ರ ಡೀಲ್ ಶೇ.2.86 ಕಡಿಮೆ ಬೆಲೆಯಲ್ಲಿ ಆಗಿದೆ. ಇದರ ಜೊತೆಗೆ ಬಹುಬೇಗ ಯುದ್ಧವಿಮಾನಗಳು ಲಭ್ಯವಾಗುತ್ತಿವೆ ಎಂದು ಸಿಎಜಿ ವರದಿ ಹೇಳಿದೆ.
ರಫೇಲ್ ಡೀಲ್ನಲ್ಲಿ ಭಾರೀ ಅವ್ಯವಹಾರ ನಡೆದಿದೆ ಎಂದು ಕಾಂಗ್ರೆಸ್ ಈ ಮೊದಲಿನಿಂದಲೂ ಹೇಳುತ್ತಲೇ ಬರುತ್ತಿದೆ. ಈ ವಿಚಾರವಾಗಿ ಕಾಂಗ್ರೆಸ್ ಸುಪ್ರೀಂಕೋರ್ಟ್ ಮೆಟ್ಟಿಲೇರಿತ್ತು. ಆದರೆ, ಮೋದಿ ಪರವಾಗಿ ಕೋರ್ಟ್ ತೀರ್ಪು ನೀಡಿತ್ತು. ಈಗ ಸಿಎಜಿ ವರದಿಯಲ್ಲೂ ಕಾಂಗ್ರೆಸ್ಗೆ ಮುಖಭಂಗವಾಗಿದೆ.
ಈ ಮೊದಲು ಊಹಿಸಿದಂತೆ ಎಲ್ಲಿಯೂ ರಫೇಲ್ ಒಪ್ಪಂದದ ಮೊತ್ತವನ್ನು ಸಿಎಜಿ ವರದಿ ಬಹಿರಂಗ ಮಾಡಿಲ್ಲ. ರಫೇಲ್ ಒಪ್ಪಂದದ ದರ ವಿವರವನ್ನು ರಾಷ್ಟ್ರೀಯ ಭದ್ರತೆ ದೃಷ್ಟಿಯಿಂದ ಹಂಚಿಕೊಂಡಿಲ್ಲ ಎನ್ನಲಾಗಿದೆ. ಅಲ್ಲದೇ, ಸರ್ಕಾರದಿಂದಲೂ ಸಾಕಷ್ಟು ಒತ್ತಡವಿದೆ ಎಂದು ಮೂಲಗಳು ತಿಳಿಸಿವೆ. ಹೀಗಾಗಿ ದರ ವಿವರವನ್ನು ಮರೆಮಾಚಿ, ಅವಧಿಯ ಲೆಕ್ಕಾಚಾರ ವಿವರವುಳ್ಳ ವರದಿ ಸಲ್ಲಿಕೆಯಾಗಿದೆ.
ವರದಿಯಲ್ಲಿ ರಫೇಲ್ ಜೆಟ್ ಒಪ್ಪಂದದ 2007 ಮತ್ತು 2015ರ ಅವಧಿಯ ಬಿಡ್ಗಳ ಹೋಲಿಕೆ ಮತ್ತು ಪ್ರಕ್ರಿಯೆ, ಕ್ರಮಗಳನ್ನು ಉಲ್ಲೇಖ ಮಾಡಲಾಗಿದೆ. 36 ವಿಮಾನಗಳ ಖರೀದಿಯಲ್ಲಿ ಸರ್ಕಾರದ ನಿರ್ಧಾರ ಹಾಗೂ ಯುಪಿಎ ಸರ್ಕಾರ ಅವಧಿಯಲ್ಲಿ 2007ರಲ್ಲಿ 18 ವಿಮಾನಗಳ ಖರೀದಿ ಸಂಬಂಧ ಕರೆದಿದ್ದ ಜಾಗತಿಕ ಟೆಂಡರ್ ಮಾಹಿತಿ ಹಂಚಿಕೊಳ್ಳಲಾಗಿದೆ. ಇಂದು ಸಿಎಜಿ ಆಗಿರುವ ರಾಜೀವ್ ಮೆಹರಿಷಿ ಅವರು ರಫೇಲ್ ಒಪ್ಪಂದದ ವೇಳೆ ಹಣಕಾಸು ಇಲಾಖೆ ಕಾರ್ಯದರ್ಶಿಯಾಗಿದ್ದರು.