ಬೆಂಗಳೂರು, ಫೆ.12-ರಾಜ್ಯಸರ್ಕಾರದ ಮೇಲೆ ನಂಬಿಕೆ ಇಲ್ಲದಿದ್ದರೆ ಬಿಜೆಪಿಯವರಿಗೆ ಮಹಾರಾಷ್ಟ್ರ ಸರ್ಕಾರವನ್ನು ಇಲ್ಲಿ ತಂದುಕೊಡಲು ಸಾಧ್ಯವೇ ಎಂದು ಜೆಡಿಎಸ್ನ ಶಾಸಕರು ವಾಗ್ದಾಳಿ ನಡೆಸಿದ ಘಟನೆ ವಿಧಾನಸಭೆಯಲ್ಲಿಂದು ನಡೆಯಿತು.
ವಿಧಾನಸಭೆ ಅಧಿವೇಶನದಲ್ಲಿ ಮಾತನಾಡಿದ ಶಾಸಕ ಕೆ.ಎಂ.ಶಿವಲಿಂಗೇಗೌಡ ಅವರು, ಪ್ರತಿಬಾರಿಯೂ ಬಿಜೆಪಿ ಶಾಸಕರು ಮೈತ್ರಿ ಸರ್ಕಾರದ ಮೇಲೆ ನಂಬಿಕೆ ಇಲ್ಲ ಎನ್ನುತ್ತಾರೆ, ಇವರಿಗೆ ಇನ್ಯಾವ ಸರ್ಕಾರ ತಂದುಕೊಡಬೇಕು, ಮಹಾರಾಷ್ಟ್ರ ಸರ್ಕಾರ ತಂದುಕೊಡಲು ಸಾಧ್ಯವೇ? ಪ್ರತಿಬಾರಿಯೂ ಸರ್ಕಾರ ಅಸ್ಥಿರಗೊಳಿಸುವ ಪ್ರಯತ್ನ ನಡೆಸುತ್ತಾರೆ.ರಾಜಕೀಯ ದೊಂಬರಾಟವಾಡುತ್ತಾರೆ. ಇದನ್ನು ನೋಡಿದರೆ ನಾವು ಶಾಸಕರಾಗಿ ಸದನಕ್ಕೆ ಬರಬೇಕೇ ಬೇಡವೇ ಎಂಬ ಪ್ರಶ್ನೆ ಕಾಡುತ್ತದೆ ಎಂದು ವಿಷಾದಿಸಿದರು.
ದೊಂಬರಾಟ ಅಸಂಸ್ಕøತಿಯ ಪದವಾಗಿದ್ದು, ಅದನ್ನು ಬಳಸಬಾರದು ಎಂದು ಬಿಜೆಪಿ ಶಾಸಕ ಗೂಳಿಹಟ್ಟಿ ಶೇಖರ್ ಆಕ್ಷೇಪ ವ್ಯಕ್ತಪಡಿಸಿದರು. ಅದಕ್ಕೆ ಸಭಾಧ್ಯಕ್ಷ ರಮೇಶ್ಕುಮಾರ್ ಅವರು ರೂಲಿಂಗ್ ನೀಡಿ, ಸಾಂದರ್ಭಿಕವಾಗಿ ಪದಬಳಕೆ ಮಾಡಿದ್ದಾರೆ.ಜಾತಿಗೆ ಅವಹೇಳನಕಾರಿಯಾಗುವಂತೆ ಮಾತನಾಡಿಲ್ಲ ಎಂದರು.
ಶಾಸಕ ಶಿವಲಿಂಗೇಗೌಡ ವಿವರಣೆ ನೀಡಿ, ಈ ಹಿಂದೆ ಹಳ್ಳಿಗಳಿಗೆ ದೊಂಬರು ಬರುತ್ತಿದ್ದರು. ಅನೀತಿ, ಅನ್ಯಾಯ, ಅನಾಚಾರಗಳನ್ನು ಮಾಡಿದವರ ಚರಿತ್ರೆಯನ್ನು ಎಲ್ಲರ ಎದುರು ಹೇಳಿ ಬಯಲು ಮಾಡುತ್ತಿದ್ದರು. ಅಂತಹ ದೊಂಬರಾಟವನ್ನು ನಾವು ನೋಡಿದ್ದೆವು. ಹಾಗಾಗಿ ಆ ಪದ ಬಳಕೆ ಮಾಡಿದ್ದೇನೆ ಎಂದು ಸಮರ್ಥಿಸಿಕೊಂಡರು.