ಬೆಂಗಳೂರು,ಫೆ.11- ಕರ್ನಾಟಕದ ಬಿಜೆಪಿ ಘಟಕದೊಳಗೆ ನಡೆಯುತ್ತಿರುವ ವಿದ್ಯಮಾನಗಳಿಂದ ತೀವ್ರ ಅಸಮಾಧಾನಗೊಂಡಿರುವ ಕೇಂದ್ರ ವರಿಷ್ಠರು ಸಮ್ಮಿಶ್ರ ಸರ್ಕಾರವನ್ನು ಅಸ್ಥಿರಗೊಳಿಸುವ ಪ್ರಯತ್ನಕ್ಕೆ ವಿರಾಮ ಹಾಕಿ ಲೋಕಸಭೆ ಚುನಾವಣೆಯತ್ತ ಗಮನಹರಿಸುವಂತೆ ಸೂಚನೆ ನೀಡಿದ್ದಾರೆ.
ಶಾಸಕರ ಪುತ್ರನ ಮೂಲಕ ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಪಕ್ಷಕ್ಕೆ ಬರುವಂತೆ ಆಮಿಷವೊಡ್ಡಿರುವುದು ಆಡಿಯೋ ರೆಕಾರ್ಡ್ನಲ್ಲಿ ಬಹಿರಂಗವಾಗಿತ್ತು. ಇದನ್ನು ಯಡಿಯೂರಪ್ಪ ಒಪ್ಪಿಕೊಂಡಿರುವುದರಿಂದ ರಾಷ್ಟ್ರೀಯ ನಾಯಕರು ಇಕ್ಕಟ್ಟಿಗೆ ಸಿಲುಕಿದ್ದಾರೆ.
ಇದೀಗ ಪಕ್ಷಕ್ಕಾಗುತ್ತಿರುವ ಹಾನಿಯನ್ನು ತಪ್ಪಿಸಲು ಮುಂದಾಗಿರುವ ಕೇಂದ್ರ ನಾಯಕರು ದೋಸ್ತಿ ಸರ್ಕಾರ ಅಸ್ಥಿರಗೊಳಿಸುವ ಯಾವುದೇ ಪ್ರಯತ್ನಕ್ಕೆ ಕೈ ಹಾಕದೆ ತಟಸ್ಥ ಧೋರಣೆ ಅನುಸರಿಸಬೇಕು, ಲೋಕಸಭೆ ಚುನಾವಣೆವರೆಗೂ ಇಂತಹ ಪ್ರಯತ್ನಗಳನ್ನು ಮಾಡಬಾರದು ಎಂದು ಕಟ್ಟುನಿಟ್ಟಾಗಿ ಸೂಚಿಸಿದ್ದಾರೆ.
ಕರ್ನಾಟಕದಲ್ಲಿ ನಡೆಯುತ್ತಿರುವ ಬೆಳವಣಿಗೆಗಳು ಪಕ್ಷಕ್ಕೆ ಮುಜುಗರ ತರುತ್ತಿದೆ.ಶಾಸಕನ ಪುತ್ರನ ಜೊತೆ ಪ್ರಧಾನಮಂತ್ರಿ, ರಾಷ್ಟ್ರೀಯ ಅಧ್ಯಕ್ಷರು, ನ್ಯಾಯಾಧೀಶರು, ವಿಧಾನಸಭೆ ಸ್ಪೀಕರ್, ಮಹಾರಾಷ್ಟ್ರದ ಮುಖ್ಯಮಂತ್ರಿ ಸೇರಿದಂತೆ ಮತ್ತಿತರ ಹೆಸರುಗಳನ್ನು ಹೇಳಲಾಗಿದೆ.ಇದು ನಮ್ಮ ಪಕ್ಷಕ್ಕೆ ಶೋಭೆ ತರುವ ಕೆಲಸವಲ್ಲ ಎಂದು ಕಿಡಿಕಾರಿದ್ದಾರೆ.
ವರಿಷ್ಠರು ಸರ್ಕಾರ ರಚಿಸುವ ಸಂಬಂಧ ನಿಮಗೆ ಹೇಗೆ ಕಾರ್ಯತಂತ್ರವನ್ನು ರೂಪಿಸಬೇಕೆಂಬುದು ಗೊತ್ತಿಲ್ಲ. ಗೋವಾದಲ್ಲಿ ನಾವು 2ನೇ ಸ್ಥಾನದಲ್ಲಿ ಇದ್ದೆವು.ಕಾಂಗ್ರೆಸ್ ಅತಿ ಹೆಚ್ಚು ಸ್ಥಾನವನ್ನು ಗೆದ್ದಿತ್ತು. ಒಂದೇ ದಿನದಲ್ಲಿ ಯಾರಿಗೂ ತಿಳಿಯದಂತೆ ಪಕ್ಷೇತರ ಶಾಸಕರ ಬೆಂಬಲ ಪಡೆದು ಸರ್ಕಾರ ರಚಿಸಿದೆವು ಎಂದು ಹೇಳಿದರು.
ಸರ್ಕಾರ ಇಂದು ಬಿದ್ದು ಹೋಗುತ್ತದೆ, ಅಷ್ಟು ಶಾಸಕರು ರಾಜೀನಾಮೆ ಕೊಡುತ್ತಾರೆ, ನಮ್ಮ ಸರ್ಕಾರ ಅಧಿಕಾರಕ್ಕೆ ಬಂದೇ ಬರುತ್ತದೆ ಎಂದು ಹಾದಿಬೀದಿಯಲ್ಲಿ ಟಾಂ ಟಾಂ ಹೊಡೆಯುವುದು ಏಕೆ ಎಂದು ರಾಜ್ಯ ನಾಯಕರನ್ನು ಪ್ರಶ್ನಿಸಿದ್ದಾರೆ.
ಪ್ರಧಾನಿ ನರೇಂದ್ರಮೋದಿ ರಾಜ್ಯಕ್ಕೆ ಬರುವ ಸಂದರ್ಭದಲ್ಲೇ ಇಂತಹ ಪ್ರಸಂಗ ನಡೆದಿರುವುದು ನಿಜಕ್ಕೂ ಮುಜುಗರವೇ ಸರಿ.ಕೇಂದ್ರದಲ್ಲಿ ನಾವು ಕಾಂಗ್ರೆಸ್ ವಿರುದ್ಧ ಹೋರಾಟ ನಡೆಸುತ್ತಿದ್ದೇವೆ. ಮುಂದಿನ ಬಾರಿ ಅಧಿಕಾರಕ್ಕೆ ಬರಲು ನಮ್ಮದೇ ಆದ ರಣತಂತ್ರಗಳನ್ನು ರೂಪಿಸುತ್ತಿದ್ದೇವೆ. ಇಂತಹ ವೇಳೆ ನೀವು ಸರಿಯಾದ ಕಾರ್ಯತಂತ್ರವನ್ನು ರೂಪಿಸಲಿಲ್ಲ. ಶಾಸಕರನ್ನೂ ಹಿಡಿದಿಟ್ಟುಕೊಳ್ಳಲು ಸಾಧ್ಯವಾಗಲಿಲ್ಲ. ಲೋಕಸಭೆ ಚುನಾವಣೆ ಸಮೀಪಿಸುತ್ತಿರುವ ಸಂದರ್ಭದಲ್ಲೇ ಇಂತಹ ಬೆಳವಣಿಗೆಗಳು ನಡೆದರೆ ಜನತೆ ನಮ್ಮ ಪಕ್ಷದ ಮೇಲೆ ನಂಬಿಕೆಯನ್ನು ಕಳೆದುಕೊಳ್ಳುತ್ತಾರೆ.
ಇನ್ನು ಮುಂದಾದರೂ ಇಂತಹ ಹುಚ್ಚಾಟಗಳಿಗೆ ಕಡಿವಾಣ ಹಾಕಿಕೊಂಡು ಪಕ್ಷ ಸಂಘಟನೆಯಲ್ಲಿ ತೊಡಗಿಸಿಕೊಳ್ಳುವಂತೆ ಸಲಹೆ ಮಾಡಿದ್ದಾರೆ.
ಬಿಜೆಪಿಯಲ್ಲೇ ಅಸಮಾಧಾನ:
ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರಕಾರವನ್ನು ಉರುಳಿಸಲು ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪನವರು ಪದೇ ಪದೇ ನಡೆಸುತ್ತಿರುವ ಯತ್ನಗಳು ವಿಫಲವಾಗುತ್ತಿರುವುದು ಬಿಜೆಪಿ ನಾಯಕರ ಮಧ್ಯೆಯೇ ಬಿರುಕು ಸೃಷ್ಟಿಸಿದೆ.
ಹತಾಶೆಗೊಂಡಿರುವ ಯಡಿಯೂರಪ್ಪ ಮುಖ್ಯಮಂತ್ರಿಯಾಗಲು ನಡೆಸುತ್ತಿರುವ ಪ್ರಯತ್ನಗಳು ಪಕ್ಷದ ಎರಡನೇ ಸಾಲಿನ ನಾಯಕರಲ್ಲಿ ತೀವ್ರ ಅಸಮಾಧಾನ ಸೃಷ್ಟಿಸಿದೆ. ಕಾಂಗ್ರೆಸ್ ಮತ್ತು ಜೆಡಿಎಸ್ನ ಅತೃಪ್ತ ಶಾಸಕರ ಮೇಲೆ ಹೆಚ್ಚು ನಂಬಿಕೆ ಇಟ್ಟಿರುವ ಯಡಿಯೂರಪ್ಪ, ತಮ್ಮದೇ ಪಕ್ಷದ ನಾಯಕರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುತ್ತಿಲ್ಲ ಎಂಬ ಆಕ್ಷೇಪ ವ್ಯಕ್ತವಾಗಿದೆ.
ಆರ್.ಅಶೋಕ್, ಬಸವರಾಜ ಬೊಮ್ಮಾಯಿ, ಕೆ.ಎಸ್. ಈಶ್ವರಪ್ಪ, ಸಿ.ಟಿ ರವಿ ಮತ್ತು ಇನ್ನೂ ಕೆಲವು ನಾಯಕರಿಂದ ಯಡಿಯೂರಪ್ಪ ಅವರಿಂದ ಅಂತರ ಕಾಯ್ದುಕೊಳ್ಳುತ್ತಿದ್ದಾರೆ.ಸಿ.ಎನ್ ಅಶ್ವತ್ಥನಾರಾಯಣ, ಬಾಲಚಂದ್ರ ಜಾರಕಿಹೊಳಿ ಮತ್ತು ಅರವಿಂದ ಲಿಂಬಾವಳಿ ಅವರನ್ನು ಬಿಎಸ್ ವೈ ಮುಂದಿಟ್ಟುಕೊಂಡು ಕಾಂಗ್ರೆಸ್, ಜೆಡಿಎಸ್ ಶಾಸಕರ ಬೇಟೆಗೆ ಮುಂದಾಗಿದ್ದಾರೆ.
ಸುಮಾರು ಒಂದೂವರೆ ತಿಂಗಳಿನಿಂದ ಅಶೋಕ್ ಮತ್ತು ಯಡಿಯೂರಪ್ಪ ಅವರುಗಳು ಪರಸ್ಪರ ಮಾತುಕತೆಯನ್ನೂ ನಡೆಸುತ್ತಿಲ್ಲ. ಬೆಂಗಳೂರಿನ ಮೂರು ಲೋಕಸಭಾ ಸ್ಥಾನಗಳ ಅಭ್ಯರ್ಥಿಗಳ ಕುರಿತು ಚರ್ಚಿಸಲು ಕರೆಯಲಾದ ಸಭೆಯಿಂದ ಮಾಜಿ ಉಪಮುಖ್ಯಮಂತ್ರಿಯಾಗಿದ್ದ ಅಶೋಕ್ ದೂರ ಉಳಿದಿದ್ದರು. ಇಬ್ಬರು ನಾಯಕರ ಭಿನ್ನಮತ ಬಗೆಹರಿಸಲು ಯಡಿಯೂರಪ್ಪ ಅವರು ವಿ.ಸೋಮಣ್ಣ ಮತ್ತು ಪ್ರಭಾಕರ ಕೋರೆ ಅವರನ್ನು ಸಂಧಾನಕಾರರಾಗಿ ಕಳುಹಿಸಿದ್ದರು ಎಂದು ಬಿಜೆಪಿ ನಾಯಕರೊಬ್ಬರು ತಿಳಿಸಿದರು.
ಪಕ್ಷದಲ್ಲಿ ಅಶೋಕ, ಅಶ್ವತ್ಥನಾರಾಯಣ, ಸಿ.ಟಿ. ರವಿ, ಡಿ.ವಿ. ಸದಾನಂದ ಗೌಡ ಮತ್ತು ಶೋಭಾ ಕರಂದ್ಲಾಜೆ ಮಧ್ಯೆ ತೀವ್ರ ಪೈಪೋಟಿಯಿದೆ. ಪಕ್ಷದಲ್ಲಿ ಒಕ್ಕಲಿಗ ನಾಯಕರಾಗಿ ಗುರುತಿಸಿಕೊಳ್ಳಲು ಈ ಮುಖಂಡರು ಹವಣಿಸುತ್ತಿದ್ದಾರೆ.
ಯಡಿಯೂರಪ್ಪ ಅವರು ಬೊಮ್ಮಾಯಿ ಅವರನ್ನು ಕೋರ್ ಕಮಿಟಿಯಿಂದ ದೂರವಿಟ್ಟಿದ್ದಾರೆ. ದೇವೇಗೌಡರ ಕಾಲದಲ್ಲಿ ಸಮ್ಮಿಶ್ರ ರಾಜಕೀಯದಲ್ಲಿ ಪಳಗಿದ್ದ ಬೊಮ್ಮಾಯಿ ಅವರ ಅನುಭವವನ್ನು ಬಳಸಿಕೊಂಡಿದ್ದರೆ ಹೆಚ್ಚು ಲಾಭವಾಗುತ್ತಿತ್ತು ಎಂಬ ಮಾತುಗಳು ಪಕ್ಷದ ವಲಯದಲ್ಲಿ ಕೇಳಿಬರುತ್ತಿದೆ.
ಒಟ್ಟಾರೆ ಬಿಜೆಪಿ ಫಲಿತಾಂಶದ ಬಗ್ಗೆ ಗಮನ ಹರಿಸದೆ ಮೈತ್ರಿಕೂಟದ 10-15 ಶಾಸಕರನ್ನು ಸೆಳೆಯಲು ಯಡಿಯೂರಪ್ಪ ನಡೆಸಿದ ಪ್ರಯತ್ನ ತಿರುಗುಬಾಣವಾಯಿತು.