ಬೆಂಗಳೂರು, ಫೆ.11- ಮುಖ್ಯಮಂತ್ರಿ ಕುಮಾರಸ್ವಾಮಿ ಬಿಡುಗಡೆಗೊಳಿಸಿರುವ ಆಪರೇಷನ್ ಕಮಲದ ಆಡಿಯೋ ವಿವಾದ ವಿಧಾನಸಭೆಯಲ್ಲಿ ಗಂಭೀರ ಚರ್ಚೆ ನಡೆಯುತ್ತಿರುವ ಸಂದರ್ಭದಲ್ಲಿ ಶಾಸಕ ಶಿವನಗೌಡ ನಾಯಕ್ ಹೊರ ನಡೆದಿದ್ದು ಸದನದ ಗಮನ ಸೆಳೆಯಿತು.
ಕಲಾಪ ಆರಂಭದಲ್ಲೇ ಸ್ಪೀಕರ್ ರಮೇಶ್ ಕುಮಾರ್ ಅವರು ಆಡಿಯೋ ವಿಚಾರ ಪ್ರಸ್ತಾಪಿಸಿ ತಮಗಾದ ನೋವನ್ನು ವ್ಯಕ್ತಪಡಿಸಿದರು. ಹುದ್ದೆ ತೊರೆಯುವ ಮಾತನ್ನಾಡಿದರು.
ಆಡಿಯೋದಲ್ಲಿರುವ ಸಂಭಾಷಣೆಯನ್ನು ಉಲ್ಲೇಖಿಸಿ. ಈ ಹಿಂದಿನ ಸ್ಪೀಕರ್ 12ಶಾಸಕರನ್ನು ಉಚ್ಛಾಟಿಸಿದಾಗ ನ್ಯಾಯಾಲಯದ ಮೊರೆ ಹೋಗಲಾಗಿತ್ತು. ಹೋರಾಟ ಮಾಡಿ ಗೆದ್ದಿದ್ದೇವೆ. ನೀವು ಹೆದರುವುದು ಬೇಡ ಎಂದು ಎದುರಿಗಿರುವ ವ್ಯಕ್ತಿಗೆ ಹೇಳುತ್ತಿದ್ದಾರೆ. ಈ ರೀತಿ ಹೇಳಿದ ವ್ಯಕ್ತಿ ಈ ಹಿಂದೆ ಉಚ್ಛಾಟನೆಯಾದ 12ಮಂದಿ ಶಾಸಕರಲ್ಲಿ ಒಬ್ಬರಾಗಿದ್ದಾರೆ. ಅವರು ಸದನದಲ್ಲಿ ಇರುವುದು ಮಾತುಕತೆಯಲ್ಲಿ ಸೂಚ್ಯವಾಗಿ ತಿಳಿದು ಬರುತ್ತಿದೆ ಎಂದು ಹೇಳುತ್ತಿದ್ದರು.
ಆಡಿಯೋ ಸಂಬಂಧ ಬಿಜೆಪಿ ಮಾಧುಸ್ವಾಮಿ, ಸಚಿವ ಕೃಷ್ಣಬೈರೇಗೌಡ ಚರ್ಚೆ ನಡೆಸುತ್ತಿದ್ದರು.ಇದೇ ಸಂದರ್ಭದಲ್ಲಿ ದೇವದುರ್ಗಶಾಸಕ ಶಿವನಗೌಡ ನಾಯಕ್ ಅವರು ಕಲಾಪದಿಂದ ಹೊರ ನಡೆದದ್ದು ಗಮನ ಸೆಳೆಯಿತು.